ಪುತ್ತೂರು: ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರು ಹಾಗೂ ದಲಿತ ಸಮುದಾಯದ ಹಿರಿಯ ಮುಖಂಡರಾದ ಶ್ರೀ ಛಲವಾದಿ ನಾರಾಯಣಸ್ವಾಮಿ ಅವರನ್ನು ಪುತ್ತೂರು ಶಾಸಕ ಅಶೋಕ್ ರೈ 'ನಾಯಿ'ಗೆ ಹೋಲಿಸಿ ಅತ್ಯಂತ ಕೀಳಾಗಿ ಮಾತನಾಡಿರುವುದು ಅಕ್ಷಮ್ಯ ಅಪರಾಧ. ಶಾಸಕರ ಈ ದುರಹಂಕಾರದ ಮಾತುಗಳನ್ನು ಉಗ್ರವಾಗಿ ಖಂಡಿಸುತ್ತೇನೆ ಹಾಗೂ ಅವರು ಕೂಡಲೇ ರಾಜ್ಯದ ಜನತೆ ಮತ್ತು ಛಲವಾದಿ ನಾರಾಯಣಸ್ವಾಮಿ ಅವರಲ್ಲಿ ಬಹಿರಂಗ ಕ್ಷಮೆ ಯಾಚಿಸಬೇಕು ಎಂದು ಉಡುಪಿ-ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ವಿಧಾನ ಪರಿಷತ್ ಶಾಸಕರಾದ ಶ್ರೀ ಕಿಶೋರ್ ಕುಮಾರ್ ಪುತ್ತೂರು ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.
ಸತ್ಯ ಹೇಳಿದರೆ 'ನಾಯಿ' ಎನ್ನುವುದೇ ಕಾಂಗ್ರೆಸ್ ಸಂಸ್ಕೃತಿ
"ಇತ್ತೀಚೆಗೆ ಛಲವಾದಿ ನಾರಾಯಣಸ್ವಾಮಿ ಅವರು ಪುತ್ತೂರಿಗೆ ಭೇಟಿ ನೀಡಿದ್ದಾಗ, ರಾಜ್ಯ ಸರ್ಕಾರದ ಮತ್ತು ಸ್ಥಳೀಯ ಶಾಸಕರ ವೈಫಲ್ಯಗಳ ಬಗ್ಗೆ ವಾಸ್ತವಿಕ ಸತ್ಯವನ್ನು ತಿಳಿಸಿದ್ದರು. ವಿರೋಧ ಪಕ್ಷದ ನಾಯಕರಾಗಿ ಸರ್ಕಾರದ ತಪ್ಪುಗಳನ್ನು ಎತ್ತಿ ತೋರಿಸುವುದು ಅವರ ಕರ್ತವ್ಯ. ಆದರೆ, ಸತ್ಯವನ್ನು ಅರಗಿಸಿಕೊಳ್ಳಲಾಗದ ಶಾಸಕ ಅಶೋಕ್ ರೈ, ಒಬ್ಬ ಹಿರಿಯ ದಲಿತ ನಾಯಕನನ್ನು 'ನಾಯಿ' ಎಂದು ಜರೆಯುವ ಮಟ್ಟಕ್ಕೆ ಇಳಿದಿದ್ದಾರೆ. ಇದು ಅವರ ಹತಾಶೆ ಮತ್ತು ಅಧಿಕಾರದ ಮದವನ್ನು ತೋರಿಸುತ್ತದೆ. ಸತ್ಯ ಹೇಳುವವರನ್ನು 'ನಾಯಿ' ಎನ್ನುವುದೇ ಕಾಂಗ್ರೆಸ್ ಪಕ್ಷದ ಸಂಸ್ಕೃತಿಯೇ?" ಎಂದು ಶಾಸಕ ಕಿಶೋರ್ ಕುಮಾರ್ ಪ್ರಶ್ನಿಸಿದ್ದಾರೆ.
ದಲಿತ ಸಮುದಾಯಕ್ಕೆ ಮಾಡಿದ ಅಪಮಾನ:
"ಛಲವಾದಿ ನಾರಾಯಣಸ್ವಾಮಿ ಅವರು ಕೇವಲ ವಿರೋಧ ಪಕ್ಷದ ನಾಯಕರಲ್ಲ, ಅವರು ಪರಿಶಿಷ್ಟ ಜಾತಿ (SC) ಸಮುದಾಯದ ಪ್ರಬಲ ಧ್ವನಿ. ಅಂತಹ ನಾಯಕನನ್ನು 'ನಾಯಿ'ಗೆ ಹೋಲಿಸಿರುವುದು ಮತ್ತು 'ಛಲವಾದಿ ನಾಲಾಯಕ್ ಸ್ವಾಮಿ' ಎಂದು ಅವಹೇಳನಕಾರಿಯಾಗಿ ಕರೆದಿರುವುದು ಕೇವಲ ಅವರಿಗಾದ ಅಪಮಾನವಲ್ಲ, ಬದಲಾಗಿ ಇಡೀ ದಲಿತ ಸಮುದಾಯಕ್ಕೆ ಮಾಡಿದ ಘೋರ ಅವಮಾನವಾಗಿದೆ. ದಲಿತ ಪರ ಎಂದು ಬೊಬ್ಬೆ ಹೊಡೆಯುವ ಕಾಂಗ್ರೆಸ್ ನಾಯಕರು, ತಮ್ಮ ಶಾಸಕನ ಈ ಕೀಳುಮಟ್ಟದ ಹೇಳಿಕೆಯ ಬಗ್ಗೆ ಈಗೇಕೆ ಮೌನ ವಹಿಸಿದ್ದಾರೆ?" ಎಂದು ಅವರು ಕಿಡಿಕಾರಿದ್ದಾರೆ.
ಅಭಿವೃದ್ಧಿ ಶೂನ್ಯ, ಬರೀ ಬೊಗಳೆ:
"ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳಾಗಿಲ್ಲ. ರಾಜ್ಯ ಸರ್ಕಾರ ಅಭಿವೃದ್ಧಿ ಶೂನ್ಯವಾಗಿದೆ. ಕೇವಲ ಬೊಗಳೆ ಮಾತುಗಳಿಂದ ಕಾಲಹರಣ ಮಾಡುತ್ತಿರುವ ಶಾಸಕರು, ವಿರೋಧ ಪಕ್ಷದ ನಾಯಕರ ಬಗ್ಗೆ ಕೀಳಾಗಿ ಮಾತನಾಡುವ ಮೂಲಕ ತಮ್ಮ ವೈಫಲ್ಯಗಳನ್ನು ಮುಚ್ಚಿಕೊಳ್ಳುವ ವ್ಯರ್ಥ ಪ್ರಯತ್ನ ಮಾಡುತ್ತಿದ್ದಾರೆ. ರಾಜ್ಯಾದ್ಯಂತ ಬಿಜೆಪಿ ಹಮ್ಮಿಕೊಂಡಿರುವ 'ವಿಕಸಿತ ಭಾರತ ಸಂಕಲ್ಪ ಯಾತ್ರೆ'ಯ ಯಶಸ್ಸು ನೋಡಿ ಅವರಿಗೆ ನಡುಕ ಶುರುವಾಗಿದೆ," ಎಂದು ಕಿಶೋರ್ ಕುಮಾರ್ ಲೇವಡಿ ಮಾಡಿದ್ದಾರೆ.
ತಕ್ಷಣವೇ ಕ್ಷಮೆ ಯಾಚನೆಗೆ ಆಗ್ರಹ:
"ಶಾಸಕ ಅಶೋಕ್ ರೈ ಅವರು ತಾವು ಆಡಿದ ಮಾತುಗಳ ಬಗ್ಗೆ ಕೂಡಲೇ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು. ಇಲ್ಲವಾದರೆ, ದಲಿತ ಸಮುದಾಯ ಮತ್ತು ಬಿಜೆಪಿ ಕಾರ್ಯಕರ್ತರು ರಾಜ್ಯಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ. ಅಧಿಕಾರ ಶಾಶ್ವತವಲ್ಲ ಎಂಬುದನ್ನು ಶಾಸಕರು ಅರ್ಥಮಾಡಿಕೊಳ್ಳಬೇಕು," ಎಂದು ಅವರು ಎಚ್ಚರಿಸಿದ್ದಾರೆ.