ನವದೆಹಲಿ : ಮಾಜಿ ಸೇನಾ ಮುಖ್ಯಸ್ಥ ಜ.ಎಂ.ಎಂ.ನರವಣೆಯವರ ಅಪ್ರಕಟಿತ ಆತ್ಮಚರಿತ್ರೆಯ ಉಲ್ಲೇಖ ಮತ್ತು ಬಜೆಟ್ ಭಾಷಣದಲ್ಲಿ ಹೇಳಿಕೆಗಳ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಪ್ರಸ್ತಾವಿತ ನಿರ್ಣಯವನ್ನು ಕೇಂದ್ರ ಸರಕಾರವು ಶುಕ್ರವಾರ ಹಿಂದೆಗೆದುಕೊಂಡಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ರಿಜಿಜು,ಬಿಜೆಪಿ ಸಂಸದ ನಿಶಿಕಾಂತ ದುಬೆ ಅವರು ರಾಹುಲ್ ವಿರುದ್ಧ ಸ್ವತಂತ್ರ ನಿರ್ಣಯವನ್ನು ಮಂಡಿಸಿರುವ ಹಿನ್ನೆಲೆಯಲ್ಲಿ ಸರಕಾರವು ಈ ನಿರ್ಧಾರವನ್ನು ತೆಗೆದುಕೊಂಡಿದೆ. ದುಬೆಯವರ ನಿರ್ಣಯ ಸದನದ ಮುಂದಿರುವುದರಿಂದ ಸರಕಾರದ ಸ್ವಂತ ಪ್ರಸ್ತಾವವನ್ನು ಕೈಬಿಡಲಾಗಿದೆ ಎಂದರು. ದುಬೆಯವರ ನಿರ್ಣಯವು ಅಂಗೀಕಾರಗೊಂಡ ಬಳಿಕ ವಿಷಯವನ್ನು ಹಕ್ಕು ಸಮಿತಿಗೆ ಅಥವಾ ನೈತಿಕ ಸಮಿತಿಗೆ ಉಲ್ಲೇಖಿಸಬೇಕೇ ಅಥವಾ ಸದನದಲ್ಲಿ ನೇರವಾಗಿ ಚರ್ಚಿಸಬೇಕೇ ಎಂಬ ಬಗ್ಗೆ ಸರಕಾರವು ಸ್ಪೀಕರ್ ಓಂ ಬಿರ್ಲಾ ಅವರೊಂದಿಗೆ ಸಮಾಲೋಚಿಸಲಿದೆ ಎಂದು ಹೇಳಿದ ರಿಜಿಜು,'ಯಾವುದೇ ಸಂಸದರು ನಿರ್ಣಯವನ್ನು ಮಂಡಿಸಬಹುದು, ಅದು ಸ್ವೀಕಾರಗೊಂಡ ಬಳಿಕ ಮುಂದಿನ ಕ್ರಮವನ್ನು ನಾವು ನಿರ್ಧರಿಸುತ್ತೇವೆ 'ಎಂದು ತಿಳಿಸಿದರು.
ಈ ನಡುವೆ ತನ್ನ ಆರೋಪಗಳನ್ನು ಇನ್ನಷ್ಟು ತೀವ್ರಗೊಳಿಸಿರುವ ದುಬೆ,ರಾಹುಲ್ ಗಾಂಧಿಯವರ 'ಅನೈತಿಕ ನಡವಳಿಕೆ'ಯ ಕುರಿತು ತನಿಖೆ ನಡೆಸಲು ಸಂಸದೀಯ ತನಿಖಾ ಸಮಿತಿಯನ್ನು ರಚಿಸುವಂತೆ ಕೋರಿ ಸ್ಪೀಕರ್‌ಗೆ ಪತ್ರವನ್ನು ಬರೆದಿದ್ದಾರೆ. ರಾಹುಲ್ ದೇಶವನ್ನು ಒಳಗಿನಿಂದ ಅಸ್ಥಿರಗೊಳಿಸಲು ಕೆಲಸ ಮಾಡುತ್ತಿರುವ 'ದರೋಡೆಕೋರರ ಗ್ಯಾಂಗ್'ನ ಭಾಗವಾಗಿದ್ದಾರೆ. ಅವರು ಫೋರ್ಡ್ ಫೌಂಡೇಷನ್ ಜೊತೆ ಸಂಬಂಧ ಹೊಂದಿದ್ದಾರೆ ಮತ್ತು ಅದು ಅವರ ವಿದೇಶ ಪ್ರಯಾಣಗಳಿಗೆ ಹಣಕಾಸು ಒದಗಿಸುತ್ತಿದೆ ಎಂದು ದುಬೆ ಪತ್ರದಲ್ಲಿ ಆರೋಪಿಸಿದ್ದಾರೆ. ಎಕ್ಸ್ ಪೋಸ್ಟ್‌ನಲ್ಲಿ ಈ ಆರೋಪಗಳನ್ನು ಪುನರುಚ್ಚರಿಸಿರುವ ದುಬೆ, ರಾಹುಲ್‌ರನ್ನು 'ತುಕ್ಡೆ ತುಕ್ಡೆ ಗ್ಯಾಂಗ್‌ನ ನಾಯಕ' ಎಂದು ಬಣ್ಣಿಸಿದ್ದಾರೆ. ಅಧಿಕಾರ ಗಳಿಸಲು ರಾಹುಲ್ ಭಾರತದ ವಿಭಜನೆಯನ್ನು ಯೋಜಿಸುತ್ತಿದ್ದಾರೆಯೇ ಎಂದು ಪ್ರಶ್ನಿಸಿರುವ ಅವರು ತನ್ನ ಆರೋಪಗಳನ್ನು ಸಮರ್ಥಿಸುವ ದಾಖಲೆಗಳನ್ನೂ ಹಂಚಿಕೊಂಡಿದ್ದಾರೆ.