ಬೆಂಗಳೂರು: ಸುಳ್ಯ ತಾಲೂಕಿನ ಜಾಲ್ಸೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ರೈತರು ಎದುರಿಸುತ್ತಿರುವ ವಿದ್ಯುತ್ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ, ನೂತನ 33/11 ಕೆವಿ (33/11 KV) ವಿದ್ಯುತ್ ಉಪಕೇಂದ್ರವನ್ನು ತುರ್ತಾಗಿ ಮಂಜೂರು ಮಾಡುವಂತೆ ಕೋರಿ ಪುತ್ತೂರು ಶಾಸಕರಾದ ಶ್ರೀ ಕಿಶೋರ್ ಕುಮಾರ್ ಪುತ್ತೂರು ಅವರು ಇಂದು ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಾದ ಶ್ರೀ ಗೌರವ್ ಗುಪ್ತ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.
ಬೆಂಗಳೂರಿನ ವಿಕಾಸ ಸೌಧದಲ್ಲಿ ಶ್ರೀ ಗೌರವ್ ಗುಪ್ತ ಅವರನ್ನು ಭೇಟಿಯಾದ ಶಾಸಕರು, ಪ್ರಸ್ತುತ ಜಾಲ್ಸೂರು ಭಾಗದ ವಿದ್ಯುತ್ ಜಾಲದ ಮೇಲಿರುವ ಒತ್ತಡದ ಬಗ್ಗೆ ಗಮನ ಸೆಳೆದರು.
"ಪ್ರಸ್ತುತ ಪುತ್ತೂರಿನಿಂದ ಸುಳ್ಯಕ್ಕೆ 33 ಕೆವಿ ಹೈಟೆನ್ಷನ್ ಲೈನ್ ಹಾದು ಹೋಗುತ್ತಿದ್ದು, ಅಲ್ಲಿಂದಲೇ ಮತ್ತೆ ಜಾಲ್ಸೂರು, ಮಂಡೆಕೋಲು, ಕನಕಮಜಲು ಮತ್ತು ಅಜ್ಜಾವರ ಭಾಗಗಳಿಗೆ ವಿದ್ಯುತ್ ಸರಬರಾಜಾಗುತ್ತಿದೆ. ಒಂದೇ ಲೈನ್ ಮೇಲೆ ಹೆಚ್ಚಿನ ಲೋಡ್ ಬೀಳುತ್ತಿರುವುದರಿಂದ 'ಓವರ್‌ಲೋಡ್' (Overload) ಸಮಸ್ಯೆ ಉಂಟಾಗುತ್ತಿದ್ದು, ವೋಲ್ಟೇಜ್ ಸಮಸ್ಯೆಯಿಂದ ಕೃಷಿಕರಿಗೆ ತೊಂದರೆಯಾಗುತ್ತಿದೆ," ಎಂದು ಶಾಸಕರು ಅಧಿಕಾರಿಗಳಿಗೆ ವಿವರಿಸಿದರು.
ಜಾಲ್ಸೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ನೂತನ 33/11 ಕೆವಿ ಉಪಕೇಂದ್ರ ಸ್ಥಾಪನೆಯಾದರೆ, ಮಂಡೆಕೋಲು, ಕನಕಮಜಲು, ಅಜ್ಜಾವರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ವಿದ್ಯುತ್ ಸಮಸ್ಯೆ ಬಗೆಹರಿಯಲಿದೆ. ಇದರಿಂದ ಈ ಭಾಗದ ಅಡಿಕೆ, ತೆಂಗು ಬೆಳೆಗಾರರು ಹಾಗೂ ಕೃಷಿಕರಿಗೆ ಪಂಪ್‌ಸೆಟ್‌ಗಳನ್ನು ನಿರ್ವಹಿಸಲು ಅನುಕೂಲವಾಗಲಿದ್ದು, ದೊಡ್ಡ ಮಟ್ಟದ ಲಾಭವಾಗಲಿದೆ ಎಂದು ಶಾಸಕರು ಪ್ರತಿಪಾದಿಸಿದರು.
ಶಾಸಕರ ಮನವಿಗೆ ಅತ್ಯಂತ ಸಕಾರಾತ್ಮಕವಾಗಿ ಸ್ಪಂದಿಸಿದ ಶ್ರೀ ಗೌರವ್ ಗುಪ್ತ ಅವರು, ತಕ್ಷಣವೇ ಮಂಗಳೂರು ಮೆಸ್ಕಾಂ ನಿರ್ದೇಶಕರಿಗೆ ದೂರವಾಣಿ ಕರೆ ಮಾಡಿ ಮಾತನಾಡಿದರು. ಉದ್ದೇಶಿತ ಸ್ಥಳಕ್ಕೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸುವಂತೆ ಮತ್ತು ಈ ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಕೂಡಲೇ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.