ನವದೆಹಲಿ : ಗಣರಾಜ್ಯೋತ್ಸವ ಕಾರ್ಯಕ್ರಮದ ವೇಳೆ ತಮಗೆ ಮತ್ತು ರಾಹುಲ್ ಗಾಂಧಿಗೆ 3ನೇ ಸಾಲಿನಲ್ಲಿ ಆಸನ ನೀಡಿ ಅವಮಾನಿಸಲಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ. ಇದು ಶಿಷ್ಟಾಚಾರದ ಉಲ್ಲಂಘನೆ ಎಂದು ಕಾಂಗ್ರೆಸ್ ಕಿಡಿಕಾರಿದೆ. 'ಗಣರಾಜ್ಯೋತ್ಸವ ಕಾರ್ಯಕ್ರಮದ ವೇಳೆ ನನ್ನನ್ನು ಮತ್ತು ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರನ್ನು 3ನೇ ಸಾಲಿನಲ್ಲಿ, ಮಕ್ಕಳ ಹಿಂದೆ ಕೂರಿಸಲಾಗಿತ್ತು. ನಮ್ಮ ಬಳಿ ರಾಜ್ಯ ಸಚಿವರು ಆಸೀನರಾಗಿದ್ದರು. ಇದರಿಂದ ನಮಗೆ ಅವಮಾನವಾಗಿದ್ದು, ಸರ್ಕಾರ ಕ್ಷಮೆ ಯಾಚಿಸಬೇಕು' ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದ್ದಾರೆ.
77ನೇ ಗಣರಾಜ್ಯೋತ್ಸವದ ಮುಗಿದ ಬೆನ್ನಲ್ಲೇ ರಾಜಕೀಯ ವಾಕ್ಸಮರ ತಾರಕಕ್ಕೇರಿದೆ. ಕರ್ತವ್ಯ ಪಥದಲ್ಲಿ ನಡೆದ ಮೆರವಣಿಗೆಯ ವೇಳೆ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಮೂರನೇ ಸಾಲಿನಲ್ಲಿ ಆಸನ ನೀಡಿದ್ದು ಈಗ ವಿವಾದಕ್ಕೆ ಕಾರಣವಾಗಿತ್ತು. ಇದು 'ಶಿಷ್ಟಾಚಾರದ ಉಲ್ಲಂಘನೆ' ಮತ್ತು ವಿರೋಧ ಪಕ್ಷದ ನಾಯಕರಿಗೆ ಮಾಡಿದ ಅಪಮಾನ ಎಂದು ಕಾಂಗ್ರೆಸ್ ಕಿಡಿಕಾರಿದೆ. ಪ್ರಧಾನಿ ಮೋದಿ ಅವರು ಉದ್ದೇಶಪೂರ್ವಕವಾಗಿ ವಿರೋಧ ಪಕ್ಷದ ನಾಯಕರನ್ನು ಕಡೆಗಣಿಸಲು ಇಂತಹ ವ್ಯವಸ್ಥೆ ಮಾಡಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ.