ಬೆಂಗಳೂರು: "ರಾಜ್ಯದ ಪ್ರಥಮ ಪ್ರಜೆ, ಗೌರವಾನ್ವಿತ ರಾಜ್ಯಪಾಲರಿಗೆ ಸದನದಲ್ಲಿ ಅಡ್ಡಿಪಡಿಸಿ, ಅವರ ದಾರಿಯನ್ನು ಅಡ್ಡಗಟ್ಟಿ ದೈಹಿಕವಾಗಿ ಹಲ್ಲೆಗೆ ಯತ್ನಿಸಿದ ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ಅವರ ನಡೆ ಅತ್ಯಂತ ಹೇಯ ಮತ್ತು ಖಂಡನೀಯ. ಇದು ಪ್ರಜಾಪ್ರಭುತ್ವದ ಕರಾಳ ದಿನ," ಎಂದು ಶಾಸಕರಾದ ಶ್ರೀ ಕಿಶೋರ್ ಕುಮಾರ್ ಪುತ್ತೂರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಕಾಂಗ್ರೆಸ್ಸಿಗರ ಗೂಂಡಾ ವರ್ತನೆ ಮತ್ತು ಕೀಳುಮಟ್ಟದ ರಾಜಕೀಯದ ವಿರುದ್ಧ ಹರಿಹಾಯ್ದಿದ್ದಾರೆ.ಕಾಂಗ್ರೆಸ್ ಕೃಪಾಪೋಷಿತ ಸುಳ್ಳನ್ನು ಓದದಿದ್ದಕ್ಕೆ ರಾಜ್ಯಪಾಲರ ಮೇಲೆ ಗೂಂಡಾಗಿರಿ: "ರಾಜ್ಯ ಸರ್ಕಾರ ಬರೆದುಕೊಟ್ಟ ಸುಳ್ಳಿನ ಕಂತೆಗಳನ್ನು ಓದಲು ರಾಜ್ಯಪಾಲರು ಗುಲಾಮರಲ್ಲ. ಸಂವಿಧಾನದ ಚೌಕಟ್ಟಿನಲ್ಲಿ ತಮಗೆ ಸರಿ ಎನಿಸದ ಭಾಗವನ್ನು ಬಿಟ್ಟು ಓದುವ ಅಧಿಕಾರ ಅವರಿಗಿದೆ. ಇದನ್ನು ಸಹಿಸದ ಹಿರಿಯ ಸದಸ್ಯ ಬಿ.ಕೆ. ಹರಿಪ್ರಸಾದ್ ಅವರು ಮಾರ್ಷಲ್‌ಗಳ ಜೊತೆ ಗುದ್ದಾಡಿ, ರಾಜ್ಯಪಾಲರ ಮೈಮೇಲೆ ಎರಗಲು ಹೋಗಿರುವುದು ಕಾಂಗ್ರೆಸ್ ಪಕ್ಷದ ಅರಾಜಕತೆಯನ್ನು ತೋರಿಸುತ್ತದೆ. ತಮ್ಮ ಗೂಂಡಾಗಿರಿಯಿಂದ ತಾವೇ ಬಟ್ಟೆ ಹರಿದುಕೊಂಡು, ಈಗ ಸಂತ್ರಸ್ತರಂತೆ ನಾಟಕವಾಡುವುದು ಅವರಿಗೆ ಶೋಭೆ ತರುವುದಿಲ್ಲ," ಎಂದು ಶಾಸಕರು ಲೇವಡಿ ಮಾಡಿದ್ದಾರೆ.
"ಇನ್ನೊಂದೆಡೆ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್, ಬಿಜೆಪಿ ನಾಯಕರನ್ನು 'ಕಳ್ಳರು' ಎಂದು ಕರೆಯುವ ಮೂಲಕ ತಮ್ಮ ಸಂಸ್ಕಾರ ಏನೆಂಬುದನ್ನು ಜಗಜ್ಜಾಹೀರು ಮಾಡಿದ್ದಾರೆ. ಸದನದಲ್ಲಿ ವಿಷಯ ಮಂಡಿಸಲು ತಾಕತ್ತಿಲ್ಲದವರು, ಹೊರಗೆ ನಿಂತು ಇಂತಹ ಬೀದಿ ಭಾಷೆ ಮತ್ತು ಚಿಲ್ಲರೆ ಹೇಳಿಕೆಗಳನ್ನು ನೀಡಿ ಪ್ರಚಾರ ಪಡೆಯುತ್ತಿದ್ದಾರೆ. ರಾಜ್ಯವನ್ನು ಲೂಟಿ ಹೊಡೆಯುತ್ತಿರುವ ಕಾಂಗ್ರೆಸ್ಸಿಗರಿಗೆ ಬೇರೆಯವರನ್ನು ಕಳ್ಳರು ಎನ್ನುವ ನೈತಿಕತೆ ಇಲ್ಲ," ಎಂದು ಕಿಶೋರ್ ಕುಮಾರ್ ತಿರುಗೇಟು ನೀಡಿದ್ದಾರೆ.
ಸಂವಿಧಾನದ ಪಾಠ ಹೇಳುವ ಕಾಂಗ್ರೆಸ್ ನಾಯಕರು, ಮೊದಲು ರಾಜ್ಯಪಾಲರಿಗೆ ಗೌರವ ಕೊಡುವುದನ್ನು ಕಲಿಯಲಿ ಎಂದು ಅವರು ಆಗ್ರಹಿಸಿದ್ದಾರೆ.