image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮಹಾರಾಷ್ಟ್ರ ನವನಿರ್ಮಾಣ ಸೇನೆ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಗೆ ಬೆಂಬಲ!

ಮಹಾರಾಷ್ಟ್ರ ನವನಿರ್ಮಾಣ ಸೇನೆ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಗೆ ಬೆಂಬಲ!

ಮುಂಬೈ: ಇಡೀ ರಾಜ್ಯದ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಠಾಕ್ರೆ ಸಹೋದರರು ಒಟ್ಟಾಗಿ ಸ್ಪರ್ಧಿಸಿದ್ದರು. ಅಚ್ಚರಿ ಎಂಬಂತೆ ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್), ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಗೆ ಬೆಂಬಲ ನೀಡಿದ್ದು, ಉದ್ಧವ್ ಠಾಕ್ರೆಗೆ ಹಿನ್ನಡೆಯಾಗಿದೆ, ಇದಷ್ಟೆ ಅಲ್ಲದೇ ಇದು ಎಲ್ಲರನ್ನು ಹುಬ್ಬೇರುವಂತೆ ಮಾಡಿದೆ. ರಾಜ್ಯವಾಪಿಯಂತೆ, ಕೆಡಿಎಂಸಿ (ಕಲ್ಯಾಣ್-ಡೊಂಬಿವಿಲಿ ಮುನ್ಸಿಪಲ್ ಕಾರ್ಪೊರೇಷನ್ ) ಚುನಾವಣೆಗೂ ಶಿವಸೇನೆ (ಯುಬಿಟಿ) ಮತ್ತು ರಾಜ್ ಠಾಕ್ರೆಯ ಎಂಎನ್‌ಎಸ್ ಮೈತ್ರಿ ಮಾಡಿಕೊಂಡಿದ್ದವು. ಆದರೆ, ಫಲಿತಾಂಶದ ಬಳಿಕ, ಎಂಎನ್‌ಎಸ್ ಶಿಂಧೆ ಬಣಕ್ಕೆ ತನ್ನ ಬೆಂಬಲವನ್ನು ಘೋಷಿಸಿದ್ದು, ಇದು ಉದ್ಧವ್ ಬಣಕ್ಕೆ ಆಘಾತ ತಂದಿದೆ. ಎಂಎನ್‌ಎಸ್ ಪ್ರಕಾರ, ಪಕ್ಷದ ಮುಖ್ಯಸ್ಥ ರಾಜ್ ಠಾಕ್ರೆ ಸ್ಥಳೀಯ ನಾಯಕರಿಗೆ ವಾಸ್ತವಗಳ ಆಧಾರದ ಮೇಲೆ ನಿರ್ಧಾರ ತೆಗೆದುಕೊಳ್ಳಲು ಅಧಿಕಾರ ನೀಡಿದ್ದರು. ಕಲ್ಯಾಣ್-ಡೊಂಬಿವ್ಲಿ ಪ್ರದೇಶದ ಅಭಿವೃದ್ಧಿಯ ಹಿತದೃಷ್ಟಿಯಿಂದ ಶಿಂಧೆ ನೇತೃತ್ವದ ಶಿವಸೇನೆಗೆ ಬೆಂಬಲ ನೀಡುವ ನಿರ್ಧಾರವನ್ನು ಸ್ಥಳೀಯ ನಾಯಕತ್ವ ತೆಗೆದುಕೊಂಡಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಶಿವಸೇನೆ ಮತ್ತು ಬಿಜೆಪಿ ನಡುವೆ ನೇರ ಸ್ಪರ್ಧೆ ಕಂಡುಬಂದಿದ್ದು, 122 ಸದಸ್ಯರ ಸ್ಥಳೀಯ ಸಂಸ್ಥೆಯಲ್ಲಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ 53 ಸ್ಥಾನಗಳನ್ನು ಗೆದ್ದರೆ, ಬಿಜೆಪಿ 50 ಸ್ಥಾನಗಳನ್ನು ಗೆದ್ದಿದೆ. ಎಂಎನ್‌ಎಸ್ ಬೆಂಬಲದೊಂದಿಗೆ, ಶಿವಸೇನೆ (ಶಿಂಧೆ ಬಣ) 58 ಕಾರ್ಪೊರೇಟರ್‌ಗಳ ಬಲ ಪಡೆಯಲಿದೆ. ಶಿವಸೇನೆಗೆ ಬೆಂಬಲ ನೀಡುವ ಎಂಎನ್‌ಎಸ್ ನಿರ್ಧಾರದ ಕುರಿತು ಯುಬಿಟಿ ನಾಯಕ ಅನಿಲ್ ಪರಬ್ ಪ್ರತಿಕ್ರಿಯೆ ನೀಡಿದ್ದು, ಇದು ಅವರ (ರಾಜ್ ಠಾಕ್ರೆ) ಪಕ್ಷದ ನಿರ್ಧಾರ. ನಾವು ನಮ್ಮ ಪಕ್ಷದ ಬಗ್ಗೆ ಮಾತ್ರ ಮಾತನಾಡುತ್ತೇವೆ ಎಂದು ಹೇಳಿದರು. ಕಲ್ಯಾಣ್-ಡೊಂಬಿವಿಲಿ ಮತ್ತು ಇತರ 28 ಪುರಸಭೆ ನಿಗಮಗಳಲ್ಲಿ ಮೇಯರ್‌ಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆಯನ್ನು ಮಹಾರಾಷ್ಟ್ರ ಸರ್ಕಾರ ಪ್ರಾರಂಭಿಸಿದ್ದು, ಮೇಯರ್ ಹುದ್ದೆ ಮೀಸಲಾತಿಗಾಗಿ ಜನವರಿ 22 ರಂದು ಲಾಟರಿ ನಡೆಯಲಿದೆ. ಲಾಟರಿ ಡ್ರಾ ರಾಜ್ಯ ಸಚಿವಾಲಯದಲ್ಲಿ ನಡೆಯಲಿದೆ ಎಂದು ನಗರಾಭಿವೃದ್ಧಿ ಇಲಾಖೆ ಆದೇಶ ಹೊರಡಿಸಿದೆ.

Category
ಕರಾವಳಿ ತರಂಗಿಣಿ