ಬೆಂಗಳೂರು: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಡುವಿನ 'ಆಡಳಿತ ಅನುಭವದ ಟಾಕ್ ವಾರ್' ಮುಂದುವರಿದಿದೆ. ಕಾಂಗ್ರೆಸ್ ಕುಮಾರಸ್ವಾಮಿಗೆ ತೀಕ್ಷ್ಣವಾಗಿ ತಿರುಗೇಟು ನೀಡಿದ್ದು, 'ನಿಮ್ಮ ಅನುಭವದ ಕಾಲುವೆಯಲ್ಲಿ ಹರಿಯುತ್ತಿರುವುದು ಬರೀ ಅವಕಾಶವಾದಿ ಎಂಬ ಕೊಚ್ಚೆ' ಎಂದು ಟೀಕಿಸಿದೆ. ಈ ಸಂಬಂಧ ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿರುವ ಕೆಪಿಸಿಸಿ, 'ಮೀಡಿಯಾ ಹುಲಿ ಕುಮಾರಸ್ವಾಮಿ ಅವರ ಅನುಭವದ ಕಾಲುವೆಯಲ್ಲಿ ಹರಿಯುತ್ತಿರುವುದು ಬರೀ ಸುಳ್ಳು, ಹಿಟ್ ಆಂಡ್ ರನ್, ಅವಕಾಶವಾದ, ಆತ್ಮರತಿ ಎಂಬ ಕೊಚ್ಚೆ' ಎಂದು ಹೇಳಿದ್ದಾರೆ. ಬಳ್ಳಾರಿ ಗಲಭೆಯಲ್ಲಿ ಮೃತಪಟ್ಟ ರಾಜಶೇಖರ ರೆಡ್ಡಿ ಶವವನ್ನು 2 ಬಾರಿ ಪೋಸ್ಟ್ ಮಾರ್ಟಮ್ ಮಾಡಲಾಗಿದೆ ಎಂದು ಪುಂಗಿದ್ದು, ಅರ್ಜಿ ಹಾಕದಿದ್ದರೂ ಮಂಡ್ಯದಲ್ಲಿ ಕೈಗಾರಿಕೆಗೆ ಜಮೀನು ಕೊಡುತ್ತಿಲ್ಲ ಎಂದು ಆರೋಪ ಮಾಡಿದ್ದು ಕುಮಾರಸ್ವಾಮಿ ಸುಳ್ಳುಗಳಿಗೆ ಸಣ್ಣ ಸ್ಯಾಂಪಲ್ ಎಂದು ಟೀಕಿಸಿದೆ.
'ಪೇಪರ್ ಟೈಗರ್' ಕುಮಾರಣ್ಣ ಮೀಡಿಯಾ ಮುಂದೆ ರಾಜಕಾರಣ ಮಾಡುವ ಬದಲು, ನಿನ್ನ ಪಟಾಲಂ ಕರೆದುಕೊಂಡು ಬಳ್ಳಾರಿಗೆ ಹೋಗಿ ಎರಡು ಬಾರಿ ಪೋಸ್ಟ್ ಮಾರ್ಟಮ್ ಆಗಿದೆಯೋ ಇಲ್ವೋ ಅಂತ ಸ್ವಲ್ಪ ತಿಳಿದುಕೊಳ್ಳಿ. ಬೆಂಗಳೂರು ದಕ್ಷಿಣ ಜಿಲ್ಲೆ ಬಿಡದಿಯ ಕೇತಗಾನಹಳ್ಳಿಯಲ್ಲಿ ದಲಿತರ ಜಮೀನಿಗೆ ಬೇಲಿ ಹಾಕಿರುವವರು ಯಾರು ಕುಮಾರಣ್ಣ? ಕೋತಿ ತಿಂದು ಮೇಕೆ ಬಾಯಿಗೆ ಒರೆಸಿದಂತೆ ಆಡಬೇಡಿ ಎಂದು ತರಾಟೆಗೆ ತೆಗೆದುಕೊಂಡಿದೆ. ʼತಟ್ಟೆ, ಲೋಟ, ಚೊಂಬು, ಬಿಂದಿಗೆ ಯಾವುದಕ್ಕೂ ಸುರಿದರೂ ಅಡ್ಜೆಸ್ಟ್ ಆಗುವ ನೀರಿನಂತೆ, ಅಧಿಕಾರಕ್ಕಾಗಿ ಯಾವ ಪಕ್ಷದ ಜತೆಗೆ ಬೇಕಾದರೂ ಕೈ ಜೋಡಿಸುವ ಸಮಯಸಾಧಕ ಕುಮಾರಣ್ಣ, ಬೇರೆಯವರಿಗೆ ಪಾಠ ಮಾಡುವ ಮೊದಲು ನಿಮ್ಮ ಮುಖಕ್ಕೆ ಮೆತ್ತಿಕೊಂಡಿಡುವ ಕೆಸರು ಒರೆಸಿಕೊಂಡು, ಗಟ್ಟಿಯಾಗಿ ಕಮಲ ಹಿಡಿದುಕೊಳ್ಳಿ' ಎಂದು ಟೀಕಿಸಿದೆ. ಭೂತದ ಬಾಯಲ್ಲಿ ಭಗವದ್ಗೀತೆ ಬೇಡ ಕುಮಾರಣ್ಣ. ನಿಮ್ಮ ಅನುಭವ ಎಷ್ಟು ಪ್ರಖರವಾಗಿ 'ಪ್ರಜ್ವಲಿ'ಸುತ್ತಿದೆ ಎಂದು ಇಡೀ ಜಗತ್ತಿಗೇ ಗೊತ್ತು' ಎಂದು ಪೋಸ್ಟ್‌ನಲ್ಲಿ ಮೂದಲಿಸಿದೆ.