image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

2026ರಲ್ಲಿ ರಾಜ್ಯಸಭೆಯ 72 ಸ್ಥಾನಗಳಿಗೆ ಚುನಾವಣೆ : ಎನ್‌ಡಿಎ ತನ್ನ ಸಂಖ್ಯೆ ಹೆಚ್ಚಿಸಿಕೊಳ್ಳುವ ಸಾಧ್ಯತೆ

2026ರಲ್ಲಿ ರಾಜ್ಯಸಭೆಯ 72 ಸ್ಥಾನಗಳಿಗೆ ಚುನಾವಣೆ : ಎನ್‌ಡಿಎ ತನ್ನ ಸಂಖ್ಯೆ ಹೆಚ್ಚಿಸಿಕೊಳ್ಳುವ ಸಾಧ್ಯತೆ

ನವದೆಹಲಿ: ಹೊಸ ವರ್ಷ 2026ರಲ್ಲಿ ರಾಜ್ಯಸಭೆಯ 72 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಈಗಿರುವ ಬಲಾಬಲ ಹಾಗೂ ಮೈತ್ರಿಯ ಶಕ್ತಿಯನ್ನು ಅವಲೋಕಸಿದಾಗ ಎನ್‌ಡಿಎ ತನ್ನ ಸಂಖ್ಯೆ ಹೆಚ್ಚಿಸಿಕೊಳ್ಳುವ ಸಾಧ್ಯತೆ ಇದೆ. ವಿವಿಧ ಪಕ್ಷಗಳ ರಾಜ್ಯಸಭಾ ಸದಸ್ಯರ ಅವಧಿ ಅಂತ್ಯಗೊಳ್ಳುವುದರ ಆಧಾರದಲ್ಲಿ ಏಪ್ರಿಲ್‌, ಜೂನ್‌, ಜುಲೈ ಹಾಗೂ ನವೆಂಬರ್‌ನಲ್ಲಿ ಚುನಾವಣೆ ನಡೆಯಲಿವೆ. ಪ್ರಸ್ತುತ, ರಾಜ್ಯಸಭೆಯಲ್ಲಿ ಎನ್‌ಡಿಎ ಸಂಖ್ಯಾಬಲ 40 ಇದ್ದು, ಮುಂದಿನ ವರ್ಷ ನಡೆಯುವ ಚುನಾವಣೆಗಳಲ್ಲಿ ಅದು 50 ಸ್ಥಾನಗಳಲ್ಲಿ ಗೆಲ್ಲುವ ನಿರೀಕ್ಷೆ ಇದೆ. 'ಇಂಡಿಯಾ' ಮೈತ್ರಿಕೂಟದ ಸದಸ್ಯರ ಸಂಖ್ಯೆ 25 ಇದ್ದು, ಇದು 5 ಸ್ಥಾನಗಳನ್ನು ಕಳೆದುಕೊಳ್ಳುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ರಾಜ್ಯ ವಿಧಾನಸಭೆಗಳಲ್ಲಿ ವಿವಿಧ ಪಕ್ಷಗಳು ಹೊಂದಿರುವ ಸದಸ್ಯರ ಸಂಖ್ಯೆಯನ್ನು ಪರಿಗಣಿಸಿದಾಗ, ಬಿಜೆಪಿಯು 37-38 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಇದೆ. ಆದರೆ, ಈ ಗೆಲುವು ತನ್ನ ಮಿತ್ರ ಪಕ್ಷಗಳಿಗೆ ಎಷ್ಟು ಸ್ಥಾನಗಳನ್ನು ಬಿಟ್ಟು ಕೊಡಲಿದೆ ಎಂಬುದನ್ನು ಅವಲಂಬಿಸಿದೆ.

ಒಂದು ವೇಳೆ, ಬಿಜೆಪಿಯು ಇಷ್ಟು ಸಂಖ್ಯೆಯ ಸ್ಥಾನಗಳಲ್ಲಿ ಗೆಲ್ಲುವಲ್ಲಿ ವಿಫಲವಾದಲ್ಲಿ ಕಾಂಗ್ರೆಸ್‌ ಪಕ್ಷ 8-9 ಹೆಚ್ಚು ಸ್ಥಾನಗಳನ್ನು ಗೆಲ್ಲಬಹುದು ಎಂದು ವಿಶ್ಲೇಷಿಸಲಾಗುತ್ತಿದೆ. ಕಾಂಗ್ರೆಸ್‌ನ ಶಕ್ತಿ ಸಿನ್ಹ ಗೋಹಿಲ್‌ ಅವರ ಅವಧಿ ಜೂನ್‌ನಲ್ಲಿ ಅಂತ್ಯಗೊಳ್ಳಲಿದೆ. ಆಗ, ರಾಜ್ಯಸಭೆಯಲ್ಲಿ ಗುಜರಾತ್‌ನಿಂದ ಕಾಂಗ್ರೆಸ್‌ ಸದಸ್ಯರೇ ಇಲ್ಲದಂತಾಗಲಿದೆ. ಸಿಪಿಎಂ ಸ್ಥಿತಿಯೂ ಇದೇ ರೀತಿ ಇದೆ. ಪಶ್ಚಿಮ ಬಂಗಾಳದಿಂದ ಆಯ್ಕೆಯಾಗಿರುವ ವಿಕಾಶ್ ರಂಜನ್‌ ಭಟ್ಟಾಚಾರ್ಯ ಅವರ ಅವಧಿ ಏಪ್ರಿಲ್‌ನಲ್ಲಿ ಮುಗಿಯಲಿದೆ. ಆಗ, ರಾಜ್ಯಸಭೆಯಲ್ಲಿ ಕೇರಳದಿಂದ ಮಾತ್ರ ಸಿಪಿಎಂ ತನ್ನ ಪ್ರತಿನಿಧಿಯನ್ನು ಹೊಂದಿರಲಿದೆ. ಎನ್‌ಸಿಪಿಯ(ಶರದ್‌ ಪವಾರ್) ಇಬ್ಬರು ಸಂಸದರ ಅವಧಿ ಕೂಡ ಮುಗಿಯಲಿದೆ. ಆದರೆ, ಮಹಾ ವಿಕಾಸ್‌ ಅಘಾಡಿ(ಎಂವಿಎ) ಒಳಜಗಳದಿಂದಾಗಿ, ಪಕ್ಷವು ರಾಜ್ಯಸಭೆಯಲ್ಲಿ ಮತ್ತೆ ತನ್ನ ಪ್ರಾತಿನಿಧ್ಯ ಹೊಂದುವುದು ಕಷ್ಟವಾಗಲಿದೆ ಎಂದು ರಾಜಕೀಯ ವಿಶ್ಲೇಷಕರೊಬ್ಬರು ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.

Category
ಕರಾವಳಿ ತರಂಗಿಣಿ