ಪುತ್ತೂರು: ವಿಟ್ಲ ಸಮೀಪದ ಇತಿಹಾಸ ಪ್ರಸಿದ್ಧ ಕೇಪು ಉಳ್ಳಾಲ್ತಿ ದೈವಸ್ಥಾನದ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ, ಪುರಾತನ ಕಾಲದಿಂದ ನಡೆದುಕೊಂಡು ಬರುತ್ತಿರುವ ಹರಕೆ ರೂಪದ ಕೋಳಿ ಅಂಕ ಕಾರ್ಯಕ್ರಮದ ವೇಳೆ ಪೊಲೀಸರು ದಾಳಿ ನಡೆಸಿ 17 ಮಂದಿ ಭಕ್ತರನ್ನು ವಶಕ್ಕೆ ಪಡೆದ ಘಟನೆ ನಡೆದಿದ್ದು,
ಈ ವಿಷಯ ತಿಳಿದ ತಕ್ಷಣ ವಿಧಾನ ಪರಿಷತ್ ಶಾಸಕರಾದ ಶ್ರೀ ಕಿಶೋರ್ ಕುಮಾರ್ ಪೊಲೀಸ್ ಠಾಣೆಗೆ ತೆರಳಿ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ, ಧಾರ್ಮಿಕ ಆಚರಣೆಯ ಹಿನ್ನೆಲೆ ಮತ್ತು ಸ್ಥಳೀಯ ಸಂಪ್ರದಾಯದ ಮಹತ್ವವನ್ನು ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟು, ವಶಕ್ಕೆ ಪಡೆಯಲಾದ ಭಕ್ತರನ್ನು ಬಿಡುಗಡೆಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಸಂದರ್ಭದಲ್ಲಿ ಶಾಸಕರು ಮಾತನಾಡಿ, “ಇದು ಯಾವುದೇ ರೀತಿಯ ಜೂಜಾಟವಲ್ಲ. ಇದು ಕೇವಲ ಜಾನಪದ ಕ್ರೀಡೆ ಮಾತ್ರವಲ್ಲದೆ, ದೈವದ ಸನ್ನಿಧಿಯಲ್ಲಿ ಭಕ್ತರು ತಮ್ಮ ಹರಕೆಯನ್ನು ತೀರಿಸುವ ಪವಿತ್ರ ಆಚರಣೆ. ಶತಮಾನಗಳಿಂದ ನಡೆದುಕೊಂಡು ಬಂದಿರುವ ಈ ಸಂಪ್ರದಾಯವನ್ನು ಕಾನೂನುಬಾಹಿರ ಚಟುವಟಿಕೆಯಂತೆ ಪರಿಗಣಿಸುವುದು ಸರಿಯಲ್ಲ. ಇದು ನಂಬಿಕೆ, ಶ್ರದ್ಧೆ ಮತ್ತು ಭಕ್ತಿಯ ಪ್ರತೀಕ” ಎಂದು ಹೇಳಿದರು.