ಮಂಗಳೂರು: ನವ ಮಂಗಳೂರು ಬಂದರು ಪ್ರಾಧಿಕಾರ (ಎನ್‌ಎಂಪಿಎ) ಸ್ಥಾಪನೆಗೊಂಡು 50 ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ನ.13ರಂದು ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಇದು ಕೇಂದ್ರ ಸರ್ಕಾರದ ಅಧಿಕೃತ ಕಾರ್ಯಕ್ರಮ ಆಗಿದ್ದರೂ, ಆಹ್ವಾನ ಪತ್ರದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಸೇರಿದಂತೆ ಸ್ಥಳೀಯ ಶಾಸಕ ಪ್ರತಿನಿಧಿಗಳ ಹೆಸರನ್ನು ಉಲ್ಲೇಖಿಸದೆ ನಿರ್ಲಕ್ಷಿಸಿರುವುದು ಭಾರೀ ಆಕ್ಷೇಪಕ್ಕೆ ಕಾರಣವಾಗಿದೆ.
ಕಾರ್ಯಕ್ರಮಕ್ಕೆ ಕೇಂದ್ರ ಬಂದರು ಮತ್ತು ಜಲಸಾರಿಗೆ ಸಚಿವ ಸರ್ಬಾನಂದ ಸೋನೋವಾಲ್ ಮತ್ತು ಕೇಂದ್ರ ಸಚಿವ ಪ್ರಹ್ಲಾದ ಜೋಷಿ ಅವರನ್ನು ಮುಖ್ಯ ಅತಿಥಿಯಾಗಿ ಕರೆಯಲಾಗಿದೆ. ಇದರೊಂದಿಗೆ ಸಣ್ಣ ಕೈಗಾರಿಕೆ ಮತ್ತು ಕಾರ್ಮಿಕ ಇಲಾಖೆಯ ಸಚಿವೆ ಶೋಭಾ ಕರಂದ್ಲಾಜೆ ಮತ್ತು ರಾಜ್ಯ ಮೀನುಗಾರಿಕೆ ಮತ್ತು ಬಂದರು ಇಲಾಖೆಯ ಸಚಿವ ಮಂಕಾಳ ವೈದ್ಯ ಅವರನ್ನು ಆಹ್ವಾನಿಸಿದ್ದಾರೆ. ಇವರೊಂದಿಗೆ ಹಾಲಿ ದ.ಕ. ಸಂಸದ ಬ್ರಿಜೇಶ್ ಚೌಟ, ಮಾಜಿ ಸಂಸದ ನಳಿನ್ ಕುಮಾರ್, ಸ್ಥಳೀಯ ಶಾಸಕರಾದ ಭರತ್ ಶೆಟ್ಟಿ, ವೇದವ್ಯಾಸ ಕಾಮತ್ ಅವರನ್ನು ಆಹ್ವಾನಿಸಲಾಗಿದೆ.
ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಪಕ್ಷದ ಯಾವುದೇ ಶಾಸಕರನ್ನಾಗಲೀ, ಉಸ್ತುವಾರಿ ಸಚಿವರ ಹೆಸರನ್ನು ಆಹ್ವಾನ ಪತ್ರದಲ್ಲಿ ಮುದ್ರಿಸಿಲ್ಲ. ಹಾಲಿ ಜನಪ್ರತಿನಿಧಿಗಳನ್ನು ಬಿಟ್ಟು ಬಿಜೆಪಿಯ ಮಾಜಿ ಸಂಸದ ನಳಿನ್ ಕುಮಾರ್ ಅವರನ್ನು ಆಹ್ವಾನಿಸಿದ್ದು ಸಚಿವ ದಿನೇಶ್ ಗುಂಡೂರಾವ್ ಅವರನ್ನು ಕೆಂಡಾಮಂಡಲವಾಗಿಸಿದೆ. ಆದ್ದರಿಂದ ಕೇಂದ್ರ ಬಂದರು ಇಲಾಖೆಯ ಕಾರ್ಯದರ್ಶಿಯಿಂದ ಹಿಡಿದು ಸಚಿವ ಮುಖ್ಯ ಸರ್ಬಾನಂದ ಸೋನೋವಾಲ್, ರಾಜ್ಯ ಕಾರ್ಯದರ್ಶಿ, ಎನ್‌ಎಂಪಿಎ ಅಧ್ಯಕ್ಷ ವೆಂಕಟರಮಣ ಅಕ್ಕರಾಜುಗೆ ಪತ್ರ ಬರೆದು ಅವರು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
'ಮಂಗಳೂರು ಬಂದರಿನ ಗೋಲ್ಡನ್ ಜುಬಿಲಿ ಕಾರ್ಯಕ್ರಮದ ಆಹ್ವಾನ ಪತ್ರದಲ್ಲಿ ಶಿಷ್ಟಾಚಾರವನ್ನು ಸಂಪೂರ್ಣ ಉಲ್ಲಂಘಿಸಿದ್ದೀರಿ, ಆದರೆ ಇಲ್ಲಿ ಕಣ್ಣಪ್ಪಿನಲ್ಲಿ ಸ್ಥಳೀಯ ಜನಪ್ರತಿನಿಧಿಗಳ ಹೆಸರು ತಪ್ಪಿ ಹೋಗಿರುವಂತೆ ಕಾಣುತ್ತಿಲ್ಲ. ಬಿಜೆಪಿಯ ಹಾಲಿ ಮತ್ತು ಮಾಜಿ ಸಂಸದರ ಹೆಸರನ್ನೂ ಸೇರಿಸಿದ್ದೀರಿ. ಜೊತೆಗೆ, ಮಂಗಳೂರಿನ ಹಿಂದು ಸಂಘಟನೆಗಳ ಪ್ರಮುಖರನ್ನು ಸೇರಿಸದೇ ಬಿಟ್ಟಿರುವುದಕ್ಕೆ ಥ್ಯಾಂಕ್ಸ್ ಹೇಳಬೇಕಷ್ಟೆ.
'ಸರ್ಕಾರಿ ಕಾರ್ಯಕ್ರಮದಲ್ಲಿ ಸ್ಥಳೀಯ ಜನಪ್ರತಿನಿಧಿಗಳನ್ನು ಕರೆಯುವುದು ಶಿಷ್ಟಾಚಾರ. ಭವಿಷ್ಯದಲ್ಲಿ ಇಂತಹ ತಪ್ಪು ಆಗದಂತೆ ನೋಡಿಕೊಳ್ಳಿ. ಜೊತೆಗೆ, ಕೇಂದ್ರ ಮತ್ತು ರಾಜ್ಯದಲ್ಲಿ ಯಾವ ಪಕ್ಷ ಆಡಳಿತದಲ್ಲಿದೆ ಎಂಬ ವಿಚಾರ ಬದಿಗಿಟ್ಟು ಮಂಗಳೂರನ್ನು ಬಂದರು ಇಲಾಖೆಯು ಮರಿಟೈಮ್ ಗೇಟ್ ವೇ ಆಫ್ ಕರ್ನಾಟಕ ಎಂದಾಗಿಯೇ ಉಳಿಸಿಕೊಳ್ಳಿ. ಅದನ್ನು ಬಿಜೆಪಿಯ ಗೇಟ್ ವೇ ರೀತಿ ಮಾಡಿಕೊಳ್ಳಬೇಡಿ ಎಂದು ದಿನೇಶ್ ಗುಂಡೂರಾವ್ ತನ್ನ ಪತ್ರದಲ್ಲಿ ಖಾರವಾಗಿ ಬರೆದಿದ್ದಾರೆ.
ಈ ಬಂದರು ನಿರ್ಮಾಣಕ್ಕಾಗಿ ಕಾಂಗ್ರೆಸಿನ ಮಾಜಿ ಸಂಸದ ಯು.ಎಸ್ ಮಲ್ಯ ಶ್ರಮಿಸಿದ್ದರು ಎಂಬುದನ್ನು ಮರೆಯಬೇಡಿ. ಹಾಗೆಯೇ, ಬಂದರು ಅಭಿವೃದ್ಧಿಯಲ್ಲಿ ಮಾಜಿ ಸಂಸದರಾದ ಜನಾರ್ದನ ಪೂಜಾರಿ, ಆಸ್ಕರ್ ಫೆರ್ನಾಂಡಿಸ್ ಕೊಡುಗೆಯೂ ದೊಡ್ಡದಿದೆ. ಈಗ 50ನೇ ವರ್ಷದ ಆಚರಣೆ ಸಂದರ್ಭದಲ್ಲಿ ಮಾಜಿ ಸಂಸದರು, ಸಚಿವರ ಹೆಸರನ್ನೇ ಮರೆತಿರುವುದು ತೀವ್ರ ಬೇಸರ ಉಂಟು ಮಾಡಿದೆ.
ಇದಲ್ಲದೆ, ಕಾರ್ಯಕ್ರಮ ಶಿಷ್ಟಾಚಾರ ಪ್ರಕಾರ ಜಿಲ್ಲೆಯ ಎಲ್ಲ ಶಾಸಕರು, ವಿಧಾನ ಪರಿಷತ್ತಿನ ಸದಸ್ಯರ ಹೆಸರನ್ನು ಉಲ್ಲೇಖಿಸಬೇಕಿತ್ತು. ಸರ್ಕಾರಿ ಕಾರ್ಯಕ್ರಮದಲ್ಲಿ ಗಂಭೀರ ಶಿಷ್ಟಾಚಾರ ಉಲ್ಲಂಘನೆ ಇದಾಗಿದ್ದು, ತಕ್ಷಣ ಆಗಿರುವ ಪ್ರಮಾದವನ್ನು ಸರಿಪಡಿಸದೇ ಇದ್ದರೆ ಕಾರ್ಯಕ್ರಮ ನಡೆಯುವ ಸಂದರ್ಭದಲ್ಲಿ ಕಪ್ಪು ಪತಾಕೆ ಹಿಡಿದು ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.
ಅಲ್ಲದೆ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಎನ್‌ಎಂಪಿಎ ಅಧ್ಯಕ್ಷ ಅಕ್ಕರಾಜು ಅವರಿಗೆ ಫೋನ್ ಕರೆ ಮಾಡಿಯೂ ಶಿಷ್ಟಾಚಾರ ಮರೆತಿರುವ ಬಗ್ಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ಆದರಿಂದ ಬುಧವಾರ ಸಂಜೆ ವೇಳೆಗೆ ಆಹ್ವಾನ ಪತ್ರದಲ್ಲಿ ಸಚಿವ ದಿನೇಶ್ ಗುಂಡೂರಾವ್, ಸ್ಪೀಕರ್ ಯುಟಿ ಖಾದರ್, ಎಂಎಲ್ಸಿ ಮಂಜುನಾಥ ಭಂಡಾರಿ, ಐವನ್ ಡಿಸೋಜ ಹೆಸರನ್ನು ಸೇರ್ಪಡೆ ಮಾಡಲಾಗಿದೆ. ಇದೇ ವೇಳೆ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೆಸರನ್ನು ಆಹ್ವಾನ ಪತ್ರದಿಂದ ಕೈಬಿಡಲಾಗಿದೆ. ಮಾಜಿ ಸಂಸದರನ್ನು ಸರ್ಕಾರಿ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಪ್ರಕಾರ ವೇದಿಕೆಗೆ ಕರೆಯುವ ವಾಡಿಕೆ ಇಲ್ಲದಿದ್ದರೂ, ಅವರ ಹೆಸರನ್ನು ಆಹ್ವಾನ ಪತ್ರದಲ್ಲಿ ಉಳಿಸಿಕೊಂಡಿದ್ದಾರೆ.