ಮಂಗಳೂರು : ಶಾಸಕರ ಭವನ ಪುನರ್ನವೀಕರಣ, ಪೀಠೋಪಕರಣದ ಖರೀದಿಯ ವಿಚಾರದಲ್ಲಿ 4ಜಿ ವಿನಾಯಿತಿ ಪಡೆದಿರುವ ಬಗ್ಗೆ ಹಾರಿಕೆಯ ಉತ್ತರ ಬರುತಿದೆ ಹೊರತು ಸ್ಪಷ್ಟವಾಗಿ ಮಾಹಿತಿ ನೀಡದೆ ನಮಗಿರುವ ಸಂದೇಹವನ್ನು ಮತ್ತಷ್ಟು ಹೆಚ್ಚಿಸುತ್ತಿದ್ದಾರೆ ಎಂದು ಶಾಸಕರಾದ ಡಾ. ಭರತ್ ಶೆಟ್ಟಿ ವೈ ಹೇಳಿದರು. ಶಾಸಕರ ಕಚೇರಿಯಲ್ಲಿ ಸುದ್ದಿಗಾರರ ನಿಗೆ ಮಾತನಾಡಿ ಪ್ರಸ್ತುತ ವಿಚಾರದ ಬಗ್ಗೆ ಉತ್ತರ ನೀಡದೆ, ಈ ಹಿಂದಿನ ಅವಧಿಯಲ್ಲಿ ನಡೆದಿರುವ ಕೆಲಸ ಕಾರ್ಯಗಳ ಬಗ್ಗೆ ತನಿಖೆ ನಡೆಸುತ್ತೇವೆ ಎಂಬ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು. ಜನಗಣತಿ ಕೆಲಸಕ್ಕೆ ಮಂಗಳೂರು ಮಹಾನಗರ ಪಾಲಿಕೆಯಿಂದ ಹಿಡಿದು, ಗ್ರಾಮ ಪಂಚಾಯತ್ ವರೆಗೆ ಸಿಬ್ಬಂದಿಗಳನ್ನು ನೇಮಿಸಿ ಸಾರ್ವಜನಿಕರ ಕೆಲಸ ಕಾರ್ಯಗಳು ತಿಂಗಳುಗಟ್ಟಲೆ ಕಚೇರಿಯಲ್ಲಿ ಉಳಿದುಕೊಳ್ಳುವಂತೆ ಮಾಡಿದ್ದಾರೆ. ತಮ್ಮ ಕೆಲಸಕ್ಕೆ ರಜೆ ಹಾಕಿ ಉದ್ದುದ್ದದ ಸಾಲಿನಲ್ಲಿ ನಿಂತರೂ ಬಂದ ದಾರಿಗೆ ಸುಂಕವಿಲ್ಲದಂತೆ ಹಿಂದಿರುಗುತ್ತಿದ್ದಾರೆ. ಪ್ರಸ್ತುತ ಬಾಕಿ ಉಳಿದಿರುವ ಕಡತ ಯಜ್ಞಕ್ಕೆ ತಿಂಗಳುಗಟ್ಟಲೆ ಬೇಕಾಗಬಹುದು. ಸಾರ್ವಜನಿಕರ ಕೆಲಸದ ವಿಳಂಬಕ್ಕೆ ಸರಕಾರದ ಧೋರಣೆಯ ಕಾರಣ ಎಂದು ಆರೋಪಿಸಿದರು.