ಬೆಂಗಳೂರು: ಲೋಕಸಭಾ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿಯವರ ವಿರುದ್ಧ ನಗರದ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಬಿಜೆಪಿ ಎಸ್‍ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಹೂಡಿ ಮಂಜುನಾಥ್ ಅವರು ದೂರು ನೀಡಿದ್ದಾರೆ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ತಿಳಿಸಿದರು.
ಇಂದು ದೂರು ನೀಡಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ತಕ್ಷಣ ಎಫ್‍ಐಆರ್ ದಾಖಲಿಸಲು ಪೊಲೀಸರನ್ನು ಕೋರಿದ್ದೇವೆ ಎಂದು ಹೇಳಿದರು.
ಇದರಲ್ಲಿ ಜಾಮೀನುರಹಿತ ವಾರಂಟ್ ಇದೆ. ಆದ್ದರಿಂದ ಅವರ ಮೇಲೆ ಕ್ರಮ ಜರುಗಿಸಬೇಕಿದೆ ಎಂದು ಒತ್ತಾಯಿಸಿದರು. ಭಾರತದ ಬಗ್ಗೆ ಹೊರದೇಶದಲ್ಲಿ ಕುಳಿತು ಅಪಮಾನಕರ ಹೇಳಿಕೆ ನೀಡಿದ್ದಾರೆ. ಸಮುದಾಯಗಳನ್ನು ನಿಂದಿಸಿದ್ದಾರೆ. ಅವರು ಪ್ರಬುದ್ಧರಾಗಿದ್ದಾರೆಂದು ಭಾವಿಸಿದ್ದೆವು. ಪ್ರಬುದ್ಧತೆ ಪಡೆದಿಲ್ಲವೆಂದು ಈಗ ಗೊತ್ತಾಗುತ್ತಿದೆ ಎಂದರು.
1977-78ರಲ್ಲಿ ಮೊರಾರ್ಜಿ ದೇಸಾಯಿಯವರ ಸರ್ಕಾರ ಇದ್ದಾಗ ರಾಹುಲ್ ಅವರ ಅಜ್ಜಿ ಇಂದಿರಾ ಗಾಂಧಿಯವರನ್ನು ಬಂಧಿಸಿದ್ದರು. ಮತ್ತೆ ಚುನಾವಣೆ ನಡೆದಾಗ ಇಂದಿರಾ ಅವರು ಮತ್ತೆ ಪ್ರಧಾನಿಯಾದರು. ಅಮೆರಿಕಕ್ಕೆ ಹೋದಾಗ ಅಲ್ಲಿನ ಪತ್ರಕರ್ತರು ಇಂದಿರಾ ಅವರನ್ನು ನೀವು ಎಲ್ಲರನ್ನು ತುರ್ತು ಪರಿಸ್ಥಿತಿ ವೇಳೆ ಜೈಲಿಗೆ ಕಳಿಸಿದ್ದೀರಿ. ಈಗ ನಿಮ್ಮ ಜೈಲಿನ ಅನುಭವ ಹೇಳಿ ಎಂದು ಪ್ರಶ್ನಿಸಿದ್ದರು. ಆಗ ಅವರ ಅಜ್ಜಿ, ಅದು ನನ್ನ ದೇಶದ ವಿಚಾರ; ಹೊರಗಡೆ ಅದನ್ನು ನಾನು ಪ್ರಸ್ತಾಪ ಮಾಡುವುದಿಲ್ಲ ಎಂದಿದ್ದರು ಎಂದು ಗಮನ ಸೆಳೆದರು. ‘ರಾಹುಲ್ ಅವರೇ, ನಿಮ್ಮ ಅಜ್ಜಿಯನ್ನು ನೋಡಿ ನೀವು ಕಲಿತಿಲ್ಲ ಅಲ್ಲವೇ? ಇನ್ನೇನು ಕಲೀತೀರಿ ನೀವು’ ಎಂದು ಪ್ರಶ್ನೆಯನ್ನು ಮುಂದಿಟ್ಟರು.