ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿನ ಬಂಡಾಯ ಶಮನ ಮಾಡುವಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸಫಲವಾಗಿದೆ. ರೆಬೆಲ್ ನಾಯಕರು ಮತ್ತು ರಾಜ್ಯ ನಾಯಕರನ್ನು ಕರೆಸಿಕೊಂಡು ಸಂಧಾನ ಸಭೆ ನಡೆಸಿದ ಸಂಘ ಪರಿವಾರದ ನಾಯಕರು, ಪಕ್ಷದಲ್ಲಿನ ಆಂತರಿಕ ಕಲಹಕ್ಕೆ ತೆರೆ ಎಳೆಯುವಲ್ಲಿ ಬಹುತೇಕ ಸಫಲರಾಗಿದ್ದಾರೆ. ಸಂಘದ ಮಧ್ಯಸ್ಥಿಕೆಗೆ ರೆಬೆಲ್ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಸಂತೃಪ್ತಿಗೊಂಡಿದ್ದು, ಎಲ್ಲರೂ ಒಟ್ಟಾಗಿ ಹೋಗುತ್ತೇವೆ ಎನ್ನುವ ಘೋಷಣೆಯೊಂದಿಗೆ ಯಡಿಯೂರಪ್ಪ ಕುಟುಂಬದ ವಿರುದ್ಧದ ಕಲಹಕ್ಕೆ ಕದನ ವಿರಾಮ ಘೋಷಿಸಿದ್ದಾರೆ.
ಸಭೆಯಲ್ಲಿ ಸದಾಶಿವನಗರದಲ್ಲಿರುವ ರಾಷ್ಟ್ರೋತ್ಥಾನ ಯೋಗ ಕೇಂದ್ರದಲ್ಲಿ ರಾಜ್ಯ ಬಿಜೆಪಿ ನಾಯಕರ ಜೊತೆ ಆರ್ಎಸ್ಎಸ್ ಸರಸಹಕಾರ್ಯವಾಹ ಮುಕುಂದ್, ಹಿರಿಯ ಪ್ರಚಾರಕ ಸುಧೀರ್ ಕುಮಾರ್ ನೇತೃತ್ವದಲ್ಲಿ ಸಭೆ ನಡೆಯಿತು. ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್, ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಅಸಮಧಾನಿತ ನಾಯಕ ಬಸನಗೌಡ ಪಾಟೀಲ್ ಯತ್ನಾಳ್, ಪ್ರತಿಪಕ್ಷ ನಾಯಕ ಆರ್.ಅಶೋಕ್, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಸಂಸದೆ ಶೋಭಾ ಕರಂದ್ಲಾಜೆ, ಸಿ.ಟಿ ರವಿ, ಅರವಿಂದ ಲಿಂಬಾವಳಿ, ಪ್ರತಾಪ್ ಸಿಂಹ, ಸುನೀಲ್ ಕುಮಾರ್ ಸೇರಿ ಪ್ರಮುಖ ನಾಯಕರು ಪಾಲ್ಗೊಂಡಿದ್ದರು. ಪಕ್ಷದಲ್ಲಿ ವಿಜಯೇಂದ್ರ ರಾಜ್ಯಾಧ್ಯಕ್ಷರಾದ ನಂತರದ ಬೆಳವಣಿಗೆಗಳ ಕುರಿತು ಅವಲೋಕನ ನಡೆಸಲಾಯಿತು. ಪದಾಧಿಕಾರಿಗಳ ನೇಮಕ, ಪ್ರಮುಖ ನಿರ್ಧಾರಗಳ ವಿಚಾರ ಸೇರಿದಂತೆ ಪಕ್ಷದ ಚಟುವಟಿಕೆಗಳ ನಿರ್ವಹಣೆ ವಿರುದ್ಧ ಕೇಳಿಬಂದ ಅಸಮಾಧಾನಗಳ ಕುರಿತು ಸಮಾಲೋಚನೆ ನಡೆಯಿತು. ಯತ್ನಾಳ್ ಬಣದ ಮುಖಂಡರು ತಮ್ಮ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ವಿಜಯೇಂದ್ರ, ಅಶೋಕ್ ಸೇರಿದಂತೆ ಇತರರ ಅಭಿಪ್ರಾಯವನ್ನೂ ಸಂಘದ ಪ್ರಮುಖರು ಪಡೆದುಕೊಂಡರು. ಎಲ್ಲ ಆಯಾಮದಲ್ಲಿಯೂ ಸಮಚಿತ್ತದಿಂದ ವಿಚಾರಗಳನ್ನು ಆಲಿಸಿದ ಸಂಘದ ನಾಯಕರು, ಮೊದಲು ಮುಷ್ಠಿಯಂತೆ ಒಗ್ಗಟ್ಟಾಗಿ ನಂತರ ಎದುರಾಳಿ ವಿರುದ್ಧ ಹೋರಾಟ ನಡೆಸಬೇಕು. ಎಲ್ಲರೂ ಪ್ರತ್ಯೇಕವಾಗಿ ಹೋದರೆ ಗೆಲುವು ಎಂದಿಗೂ ಸಿಗುವುದಿಲ್ಲ. ಮೊದಲು ನಮ್ಮಲ್ಲಿನ ತಪ್ಪು ಸರಿಪಡಿಸಿಕೊಂಡು, ಬಳಿಕ ಬೇರೆಯವರ ತಪ್ಪಿನತ್ತ ಬೆರಳು ತೋರಬೇಕು ಎನ್ನುವ ಸಲಹೆ ನೀಡಿದರು.