ಮಂಗಳೂರು: ಜಿಲ್ಲೆಯಲ್ಲಿ ಕೆಂಪು ಕಲ್ಲು, ಮರಳು ಅಭಾವ ಸೃಷ್ಟಿಗೆ ಹಿಂದಿನ ಬಿಜೆಪಿ ಸರಕಾರ ಕಾರಣ ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಆರೋಪಿಸಿದ್ದಾರೆ. ಅವರು ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕೆಂಪು ಕಲ್ಲು, ಮರಳು ಸಿಗುತ್ತಿಲ್ಲವೆಂದು ರಸ್ತೆಯಲ್ಲಿ ನಿಂತು ಮಾತನಾಡುವುದು ಜನಪ್ರತಿನಿಧಿಗಳ ಜವಾಬ್ದಾರಿಯಲ್ಲ. ಆದರೆ ದ.ಕ. ಜಿಲ್ಲೆಯ ಬಿಜೆಪಿ ಶಾಸಕರು ಅದನ್ನೇ ಮಾಡುತ್ತಿದ್ದಾರೆ. ಅವರು ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಿ. ಕೆಂಪು ಕಲ್ಲು, ಮರಳು ಕಲ್ಲು ವಿಚಾರದಲ್ಲಿ ಕಾನೂನು ಏನು ಹೊಸತು ಅಲ್ಲ ಈಗಿನ ವ್ಯವಸ್ಥೆಯಿಂದಾಗಿ ಸ್ವಲ್ಪ ಸಮಸ್ಯೆಯಾಗಿದೆ. ಈ ಸಮಸ್ಯೆಯ ಬಗ್ಗೆ ತಾನು ಮುಖ್ಯ ಮಂತ್ರಿಯ ಗಮನ ಸೆಳೆದಿರುವುದಾಗಿ ಹೇಳಿದರು.
ತಾನು ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದಾಗ ಸಿಆರ್ ಝಡ್ ವ್ಯಾಪ್ತಿಯಲ್ಲೂ ರಾಜ್ಯ ಮತ್ತು ಕೇಂದ್ರದ ಅನುಮತಿ ಪಡೆದು ಮರಳುಗಾರಿಕೆಗೆ ಅವಕಾಶ ಕಲ್ಪಿಸಿದ್ದೆ. ನಂತರ ಪರಿಸರ ಇಲಾಖೆ ಅನುಮತಿ ಸಿಗದೆ ಸಿಆರ್ಝಡ್ ವ್ಯಾಪ್ತಿಯಲ್ಲಿ ಮರಳುಗಾರಿಕೆ ನಿಂತಿತು. ಆಗ ನಾನ್ಸಿಆರ್ ಝಡ್ನಲ್ಲಿ ಮರಳು ತೆಗೆಯಲು ಮರಳು ಬ್ಲಾಕ್ಗಳನ್ನು ಗುರುತಿಸಿ, ಪರ್ ಮಿಟ್ ಗಳನ್ನು ನೀಡಲಾಗಿತ್ತು. ನಂತರ ಬಂದ ಬಿಜೆಪಿ ಸರಕಾರ ನಾನ್ ಸಿಆರ್ ಝಡ್ ನಲ್ಲೂ ಪರ್ಮಿಟ್ ನೀಡಲು ಆಸಕ್ತಿ ವಹಿಸಲಿಲ್ಲ. ಬಿಜೆಪಿ ಸರಕಾರ ಒಂದು ರೀತಿಯಲ್ಲಿ ಅಕ್ರಮ ಮರಳುಗಾರಿಕೆಗೆ ಪೋತ್ಸಾಹ ನೀಡಿತ್ತು ರಮಾನಾಥ ರೈ ಆರೋಪಿಸಿದರು.ಬಿಜೆಪಿ ಜನಪ್ರತಿನಿಧಿಗಳು ಎಲ್ಲಿ ಮಾತನಾಡಬೇಕೊ ಅಲ್ಲಿ ಮಾತನಾಡದೆ ತಮ್ಮ ಜವಾಬ್ದಾರಿಯನ್ನು ಮರೆತು ಸರಕಾರದ ಮೇಲೆ ಗೂಬೆ ಕೂರಿಸುವ ಪ್ರಯತ್ನ ನಡೆಸುತ್ತಿರುವುದು ಸರಿಯಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಬ್ಲಾಕ್ ಅಧ್ಯಕ್ಷರಾದ ಜೆ.ಅಬ್ದುಲ್ ಸಲೀಮ್, ಪ್ರಕಾಶ್ ಸಾಲ್ಯಾನ್, ಶುಭೋದಯ ಪಸ್ಥಿತರಿದ್ದರು.