image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

2026 ರಲ್ಲಿ ಬೆಂಗಳೂರು ಸಬ್ ಅರ್ಬನ್ ರೈಲು ಯೋಜನೆಯ ಕಾರಿಡಾರ್​ 2, 4 ಪೂರ್ಣ: ಸಚಿವ ಸೋಮಣ್ಣ

2026 ರಲ್ಲಿ ಬೆಂಗಳೂರು ಸಬ್ ಅರ್ಬನ್ ರೈಲು ಯೋಜನೆಯ ಕಾರಿಡಾರ್​ 2, 4 ಪೂರ್ಣ: ಸಚಿವ ಸೋಮಣ್ಣ

ಬೆಂಗಳೂರು: ಬೆಂಗಳೂರು ಉಪನಗರ ರೈಲು ಯೋಜನೆಯ 2 ಮತ್ತು 4ನೇ ಕಾರಿಡಾರ್ ಅನ್ನು 2026ರ ಡಿಸೆಂಬರ್​​ನಲ್ಲಿ ಪೂರ್ಣಗೊಳಿಸಿ, ಲೋಕಾರ್ಪಣೆ ಮಾಡಲಿದ್ದೇವೆ ಎಂದು ರೈಲ್ವೆ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಪ್ರಕಟಿಸಿದರು.

ವಿಧಾನಸೌಧದಲ್ಲಿ  ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಬ್ ಅರ್ಬನ್ ರೈಲ್ವೇ ಯೋಜನೆಯ 4ನೇ ಕಾರಿಡಾರ್​ ಬೈಯ್ಯಪ್ಪನಹಳ್ಳಿಯಿಂದ ಚಿಕ್ಕಬಾಣಾವರದವರೆಗೆ 25 ಕಿ.ಮೀ ದೂರವಿದ್ದರೆ, 2ನೇ ಕಾರಿಡಾರ್ ಹೀಲಲಿಗೆಯಿಂದ ರಾಜಾನುಕುಂಟೆವರೆಗೆ 46.88 ಕಿ.ಮೀ. ವ್ಯಾಪ್ತಿಯಲ್ಲಿ ರೈಲು ಮಾರ್ಗ ಸಿದ್ಧವಾಗಲಿದೆ. ಇದನ್ನು ಡಿಸೆಂಬರ್ 2026 ರೊಳಗೆ ಜನಸೇವೆಗೆ ನೀಡಲಾಗುವುದು ಎಂದು ಪ್ರಕಟಿಸಿದರು.ಸುಮಾರು 15,767 ಕೋಟಿ ರೂಪಾಯಿ ವೆಚ್ಚದ ಈ ಯೋಜನೆಯಲ್ಲಿ ರಾಜ್ಯದ ಪಾಲು ಶೇಕಡಾ 20 ರಷ್ಟಿದೆ. ಈವರೆಗೆ ಯೋಜನೆಗೆ ಒಟ್ಟು 1,165 ಕೋಟಿ ರೂ.‌ ಬಿಡುಗಡೆ ಮಾಡಿದೆ. ಕೆಲವೊಂದು ಕಡೆ ಭೂಸ್ವಾಧೀನದ ಸಮಸ್ಯೆ ಇದ್ದು, ಮೂರು ತಿಂಗಳ ಒಳಗೆ ಭೂಮಿ ಹಸ್ತಾಂತರಕ್ಕೆ ಅಧಿಕಾರಿಗಳು ಒಪ್ಪಿದ್ದಾರೆ. ಹೀಗಾಗಿ ಕಾಮಗಾರಿ ವಿಳಂಬಕ್ಕೆ ಯಾವ ಸಬೂಬು ಹೇಳದೇ ಅಧಿಕಾರಿಗಳು ಕೆಲಸ ಮಾಡಬೇಕು ಎಂದು ಸಚಿವರು ಸೂಚಿಸಿದರು. ಒಟ್ಟು 4 ಕಾರಿಡಾರ್‌ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಈ ಹಿಂದೆ ಶಂಕುಸ್ಥಾಪನೆ ನೆರವೇರಿಸಿದ್ದರು. ಈಗ ಕಾಮಗಾರಿಗೆ ಚುರುಕು ಮುಟ್ಟಿಸಲು ಕ್ರಮ ತೆಗೆದುಕೊಂಡಿದ್ದು, ಮೊದಲ ಹಂತದಲ್ಲಿ ನಿಗದಿತ ಅವಧಿಯೊಳಗೆ ಎರಡು ಕಾರಿಡಾರ್​ಗಳನ್ನು ಉದ್ಘಾಟಿಸಲಾಗುವುದು. ಇದರ ನಂತರ ಉಳಿದ ಎರಡು ಕಾರಿಡಾರ್​ಗಳ ಜಾರಿ ಸಂಬಂಧ ಚರ್ಚಿಸಲಾಗುವುದು ಎಂದರು.

ಬೆಂಗಳೂರು ಮೆಟ್ರೊ, ಉಪನಗರ ರೈಲು ಯೋಜನೆ ಮತ್ತು ರೈಲ್ವೆ ಅಧಿಕಾರಿಗಳು ಪರಸ್ಪರ ಸಮನ್ವಯದಿಂದ ಕೆಲಸ ಮಾಡಬೇಕಾಗಿದೆ. ಒಂದಕ್ಕೊಂದು ಸ್ಪರ್ಧೆವೊಡ್ಡಿಕೊಳ್ಳುವುದರ ಬದಲು, ಎಲ್ಲಿ ಯಾರ ಸೇವೆ ಇಲ್ಲವೊ ಅಲ್ಲಿ ಮತ್ತೊಬ್ಬರು ಸೇವೆ ನೀಡುವಂತಾಗಲಿ. ಈ ನಿಟ್ಟಿನಲ್ಲಿ ಬಿಬಿಎಂಪಿ ಅಧಿಕಾರಿಗಳನ್ನೂ ಸೇರಿಸಿಕೊಂಡು ಸಮನ್ವಯದ ಸಭೆಗಳನ್ನು ನಡೆಸಬೇಕು. ಪರಸ್ಪರ ಪೂರಕವಾಗಿ ಕೆಲಸ ಮಾಡುವುದರಿಂದ ಅನಗತ್ಯ ವಿಳಂಬ ತಡೆಯಬಹುದು ಎಂದು ಅವರು ಸಚಿವ ಸೋಮಣ್ಣ ಸಲಹೆ ನೀಡಿದರು.

 ಸರ್ಕಾರ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ರೈಲ್ವೆ ಬೋಗಿಗಳನ್ನು ಉತ್ಪಾದಿಸಿ, ಸರಬರಾಜು ಮಾಡಲು ಕೆ - ರೈಡ್ ಟೆಂಡರ್‌ ಕರೆದಿದ್ದು, ಯಾವ ಸಂಸ್ಥೆಯೂ ಇದರಲ್ಲಿ ಭಾಗವಹಿಸಿಲ್ಲ. ಹೀಗಾಗಿ ಈ ವಿಷಯದಲ್ಲಿ ರೈಲ್ವೆ ಇಲಾಖೆಯು ನೆರವು ನೀಡಬೇಕೆನ್ನುವ ಸಚಿವ ಎಂ.ಬಿ.ಪಾಟೀಲ ಅವರ ಮನವಿಗೆ ಸ್ಪಂದಿಸಿದ ಸೋಮಣ್ಣ ಅವರು, ಆದಷ್ಟು ಬೇಗ ದೆಹಲಿಯಲ್ಲಿ ಸಭೆ ಆಯೋಜಿಸಿ, ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು.

Category
ಕರಾವಳಿ ತರಂಗಿಣಿ