ಹಾಸನ: "ನಾನು ಈಗಾಗಲೇ ರಾಜ್ಯ ರಾಜಕಾರಣದಲ್ಲಿದ್ದೇನೆ. ಮೈಸೂರು ನನ್ನ ಕರ್ಮಭೂಮಿ, ಅಲ್ಲೇ ಇರುತ್ತೇನೆ. ಅಲ್ಲೇ ರಾಜಕಾರಣ ಮಾಡುತ್ತೇನೆ. ನಾನು ಆ ಪಕ್ಷ, ಈ ಪಕ್ಷ ಅಂಥ ಹೇಳುತ್ತಿಲ್ಲ. ಎಲ್ಲ ಪಕ್ಷಗಳ ಹಿರಿಯ ನಾಯಕರು ಹೊಂದಾಣಿಕೆ ರಾಜಕಾರಣದಲ್ಲಿದ್ದಾರೆ" ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮುಡಾದಲ್ಲಿ ಬಿಜೆಪಿ-ಜೆಡಿಎಸ್ನವರದ್ದೂ ಇದೆ. ಕಾಂಗ್ರೆಸ್ನವರು ಏಕೆ ತನಿಖೆಗೆ ಬಿಡುತ್ತಿಲ್ಲ?. ಅವರು ಮಾಡಿರುವ ಆರೋಪಗಳಿಗೆ ಕಾಂಗ್ರೆಸ್ನವರು ಒಂದು ಸಾಕ್ಷಿಯನ್ನಾದರೂ ಕೊಟ್ಟಿದ್ದಾರಾ? ತನಿಖಾ ಏಜೆನ್ಸಿ ಅವರ ಹತ್ತಿರವೇ ಇದೆ. ಆಡಳಿತ, ಪೊಲೀಸ್ ವ್ಯವಸ್ಥೆ ಅವರ ಬಳಿಯೇ ಇದೆ. 40% ಹಗರಣದ ಬಗ್ಗೆ ತನಿಖೆ ಮಾಡಿಸಿ, ಪಿಎಸ್ಐ ಹಗರಣದ ಬಗ್ಗೆ ಏಕೆ ತನಿಖೆ ಮಾಡಿಸುತ್ತಿಲ್ಲ" ಎಂದು ಪ್ರಶ್ನಿಸಿದರು.
"ಪ್ರಿಯಾಂಕ್ ಖರ್ಗೆ, ನನ್ನ ಹತ್ರ ದಾಖಲೆ ಇದೆ ಅಂತ ಹೇಳಿಕೆ ಕೊಟ್ಟಿದ್ರಲ್ಲಾ. ಕೊಡಿ ಇವಾಗ, ಇಟ್ಟುಕೊಂಡು ಏನು ಮಾಡುತ್ತಿದ್ದೀರಿ? ಕರ್ನಾಟಕ ಸರ್ಕಾರವೇ ನಿಮ್ಮ ಕೈಯ್ಯಲ್ಲಿದೆ. ಯಾವ್ಯಾವ ಹಗರಣಗಳಿವೆಯೋ, ಎಲ್ಲ ತೆಗೆದುಕೊಂಡು ಬನ್ನಿ. ಹಿರಿಯ ರಾಜಕಾರಣಿಗಳು ಒಬ್ಬರನ್ನೊಬ್ಬರು ಎಕ್ಸ್ಪೋಸ್ ಮಾಡಿಕೊಳ್ಳಿ. ಮುಂದಿನ ಪೀಳಿಗೆಗಾದರೂ ಒಳ್ಳೆಯ ಜನನಾಯಕರು ಬರಲು ಅನುಕೂಲವಾಗುತ್ತದೆ" ಎಂದರು.
"ಮೈಸೂರಿನಲ್ಲಿ ಎಂಪಿ ಆದಾಗಲು ಮೈಸೂರಿಗೆ ಹೈವೇ, ಪಾಸ್ಪೋರ್ಟ್ ಸೇವಾ ಕೇಂದ್ರ, ಏರ್ಪೋರ್ಟ್ಗೆ 319 ಕೋಟಿ ರೂ ತರಲು ನನ್ನ ಇಷ್ಟ ದೇವರಿಗೆ ಹರಕೆ ಹೊತ್ತಿದ್ದೇನೆ. ಮೈಸೂರಿಗೆ ಮಾಡಿರುವ ಒಂದೊಂದು ಯೋಜನೆಗೂ ಹರಕೆ ಹೊತ್ತಿದ್ದೇನೆ. ನಾನು ದೇವರಲ್ಲಿ ಮನಃಶಾಂತಿಯನ್ನು ಬಿಟ್ಟು ಬೇರೆ ಏನನ್ನೂ ವೈಯಕ್ತಿಕವಾಗಿ ಕೇಳಲ್ಲ. ಏನೇ ಕೇಳಿದರೂ ಕ್ಷೇತ್ರದ ಜನತೆಗೆ ಅಭಿವೃದ್ಧಿಗೆ ಕೇಳುತ್ತೇನೆ" ಎಂದು ಪ್ರತಾಪ್ ಸಿಂಹ ಭಾವುಕರಾದರು.
ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರದ ಕುರಿತು ಪ್ರತಿಕ್ರಿಯಿಸಿ, "ಏನಾಗುತ್ತೆ ಅಂತ ನನಗೆ ಗೊತ್ತಿಲ್ಲ. ಕಾಂಗ್ರೆಸ್ ಪಕ್ಷ ಏನು ತೀರ್ಮಾನ ತೆಗೆದುಕೊಳ್ಳುತ್ತೆ ಅಂತ ಗೊತ್ತಿಲ್ಲ" ಎಂದರು.