image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ತುರ್ತು ಪರಿಸ್ಥಿತಿಯಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಒಳಿತಾಗಿದೆ- ರಮಾನಾಥ ರೈ

ತುರ್ತು ಪರಿಸ್ಥಿತಿಯಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಒಳಿತಾಗಿದೆ- ರಮಾನಾಥ ರೈ

ಮಂಗಳೂರು: ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ತುರ್ತು ಪರಿಸ್ಥಿತಿ ಹೆಸರಿನಲ್ಲಿ ಬಿಜೆಪಿ ನಾಯಕರು ಕರಾಳ ದಿನ ಆಚರಿಸುವ ಮೂಲಕ ಇಂದಿರಾಗಾಂದಿಗೆ ಅವಮಾನ ಮಾಡುತ್ತಿದ್ದಾರೆ. ಬಿಜೆಪಿಯ ವಿರೋಧ ರಾಜಕೀಯ ಪ್ರೇರಿತವಾಗಿದ್ದು, ದ.ಕ. ಜಿಲ್ಲೆಯ ಜನರಿಗೆ ಇಂದಿರಾ ಗಾಂಧಿಯ ಋಣವಿದೆ.  ತುರ್ತು ಪರಿಸ್ಥಿತಿಯಿಂದ ದಕ್ಷಿಣ ಕನ್ನಡದ ಜನತೆಗೆ ಒಳ್ಳೆಯದಾಗಿದೆ ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದ್ದಾರೆ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ  ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತುರ್ತು ಪರಿಸ್ಥಿತಿಯಿಂದ ವಿಪಕ್ಷದವರಿಗೆ ತೊಂದರೆ ಆಗಿರಬಹುದು. ಆದರೆ ದುರ್ಬಲ ವರ್ಗದವರಿಗೆ ಯಾರಿಗೂ ತೊಂದರೆ ಆಗಿಲ್ಲ. ಜೀತ ಪದ್ದತಿ, ಋಣಭಾರ ಮುಕ್ತಿ ಸೇರಿದಂತೆ ಹಲವು ಜನಪರ ಕಾರ್ಯಕ್ರಮಗಳ ಫಲಾನುಭವಿಗಳು ದ.ಕ. ಜಿಲ್ಲೆಯವರು ಎಂಬುದು ವಾಸ್ತವ ಎಂದರು.

ಇಂದಿರಾ ಗಾಂಧಿಯವರ ಭೂ ಮಸೂದೆ ಕಾನೂನು ದ.ಕ. ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನವಾಗಿದೆ. ಬ್ಯಾಂಕ್ ಗಳ ರಾಷ್ಟ್ರೀಕರಣದಿಂದಲೂ ಲಾಭವಾಗಿದ್ದು, ಜಿಲ್ಲೆಯ ಜನರಿಗೆ, 20 ಅಂಶಗಳ ಕಾರ್ಯಕ್ರಮ, ನಿವೇಶನ, ದಖಾಸ್ತು ಭೂಮಿ ಹೀಗೆ ಬಡವರ ಸಬಲೀಕರಣದ ಕಾರ್ಯಕ್ರಮ ಇಂದಿರಾ ಗಾಂಧಿ ಕಾಲದಲ್ಲಿ ಆಗಿದೆ ಎಂಬುದನ್ನು ತುರ್ತು ಪರಿಸ್ಥಿತಿಯ ಬಗ್ಗೆ ಮಾತನಾಡುವವರಿಗೆ ನೆನಪಿಸಬೇಕಾಗಿದೆ. ತುರ್ತು ಪರಿಸ್ಥಿತಿಯ ಬಳಿಕವೂ ದ.ಕ. ಜಿಲ್ಲೆಯಲ್ಲಿ ಕಾಂಗ್ರೆಸ್‌ ಭಾರೀ ಮತಗಳಿಂದ ಜಯ ಗಳಿಸಿದೆ. ಇದು ಇಂದಿರಾ ಗಾಂಧಿಯವರು ಮಾಡಿದ ಜನಪರ ಕಾರ್ಯಗಳನ್ನು ಜಿಲ್ಲೆಯ ಜನತೆ ಒಪ್ಪಿಕೊಂಡ ಕಾರಣದಿಂದ ಮಾತ್ರ. ದೇಶದ ಸಮಗ್ರತೆಗಾಗಿ ಪ್ರಾಣ ಕೊಟ್ಟವರನ್ನು ಅವಮಾನಿಸುವ ಕಾರ್ಯ ಬಿಜೆಪಿಯಿಂದ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಓರ್ವ ಕಾರ್ಯಕರ್ತನಾಗಿ ಇಂದಿರಾ ಗಾಂಧಿಯವರ ಪ್ರಗತಿಪರ ಕಾರ್ಯಕ್ರಮಗಳನ್ನು ನೆನಪಿಸಿಕೊಳ್ಳುವುದು ನನ್ನ ಜವಾಬ್ದಾರಿ ಎಂದರು.

ನಾಯಕರು ವಿದೇಶಕ್ಕೆ ಹೋಗುವಾಗ ಅಲ್ಲಿ ಮಹಾತ್ಮಗಾಂಧಿಯವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸುತ್ತಾರೆ. ಅಂತಹ ಉನ್ನತ ನಾಯಕತ್ವ ಮಹಾತ್ಮಗಾಂಧಿಯವರದ್ದು. ಆದರೆ ಇಲ್ಲಿ ಕೆಲವರು ಗಾಂಧಿ ಪ್ರತಿಮೆಗೆ ಗುಂಡು ಹೊಡೆಯುವ ನಾಟಕವಾಡಿ ವಿಜೃಂಭಿಸುತ್ತಾರೆ  ಎಂದು ಕಿಡಿ ಕಾರಿದರು.

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಶಶಿಧರ ಹೆಗ್ಡೆ ನವೀನ್‌ ಡಿಸೋಜ, ಅಪ್ಪಿಲತಾ, ಪೃಥ್ವಿರಾಜ್, ಅಶೋಕ್‌ ಡಿ.ಕೆ., ಅಬ್ಬಾಸ್ ಅಲಿ, ಜಯಶೀಲ ಅಡ್ಯಂತಾಯ, ಜೆ. ಸಲೀಂ, ಇಬ್ರಾಹೀಂ ನವಾಝ್,  ನಿತ್ಯಾನಂದ ಶೆಟ್ಟಿ, ಶಬೀ‌ರ್, ಸುನೀಲ್‌ ಬಜಿಲಕೇರಿ, ಪ್ರಕಾಶ್ ಸಾಲ್ಯಾನ್ ಮೊದಲಾದವರು ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ