ನವದೆಹಲಿ: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ವಿರುದ್ಧ ಮಂಗಳವಾರ ಅವರ ಕ್ಷೇತ್ರದಲ್ಲಿ ಮತ ಕಳ್ಳತನ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಸಿಎಂ ಫಡ್ನವೀಸ್ ಕ್ಷೇತ್ರದಲ್ಲಿ ಕೇವಲ ಐದು ತಿಂಗಳಲ್ಲಿ ಶೇಕಡಾ ಎಂಟು ರಷ್ಟು ಮತದಾರರು ಹೆಚ್ಚಾಗಿದ್ದು ಹೇಗೆ ಇದು "ಮತ ಕಳ್ಳತನ" ಅಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ಆರೋಪಕ್ಕೆ ಸಿಎಂ ದೇವೇಂದ್ರ ಫಡ್ನವೀಸ್ ಭರ್ಜರಿಯಾಗಿಯೇ ತಿರುಗೇಟು ನೀಡಿದ್ದಾರೆ. 'ಝೂತ್ ಬೋಲೆ ಕೌವಾ ಕಾಟೆ, ಕಾಲೆ ಕೌವೆ ಸೆ ದಾರಿಯೋ' ( ಸುಳ್ಳುಗಳನ್ನು ಕಾಗೆಗಳು ಕಚ್ಚುತ್ತವೆ, ಏಕೆಂದರೆ ಕಪ್ಪು ಕಾಗೆಗಳಿಗೆ ಭಯ’, ರಾಹುಲ್ ಗಾಂಧಿ ಅವರಿಗೆ ಮಹಾರಾಷ್ಟ್ರದಲ್ಲಿನ ಅವಮಾನಕರ ಸೋಲಿನಿಂದ ನಿಮ್ಮ ದುಃಖ ದಿನೇ ದಿನೇ ಹೆಚ್ಚುತ್ತಿದೆ ಎಂದು ನನಗೆ ಅರ್ಥವಾಗುತ್ತಿದೆ ಎನ್ನುವ ಮೂಲಕ ಫಡ್ನವೀಸ್ ಲೇವಡಿ ಮಾಡಿದ್ದಾರೆ. ನೀವು ಎಲ್ಲಿಯವರೆಗೆ ಗಾಳಿಯಲ್ಲಿ ಬಾಣಗಳನ್ನು ಬಿಡುತ್ತೀರಿ? ನಿಮ್ಮ ಮಾಹಿತಿಗಾಗಿ ಇದನ್ನು ನೋಡಿ ಮಹಾರಾಷ್ಟ್ರದಲ್ಲಿ 25 ಕ್ಕೂ ಹೆಚ್ಚು ಕ್ಷೇತ್ರಗಳಿದ್ದು, ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳ ಸಮಯದಲ್ಲಿ ಮತದಾರರ ಸಂಖ್ಯೆ ಶೇಕಡಾ 8 ಕ್ಕಿಂತ ಹೆಚ್ಚಾಗಿದೆ ಮತ್ತು ಅಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಹಲವು ಕ್ಷೇತ್ರಗಳಲ್ಲಿ ಗೆದ್ದಿದೆ ಎಂದು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ.
ರಾಹುಲ್ ಗಾಂಧಿ ಅವರು ಎಕ್ಸ್ ಹ್ಯಾಂಡಲ್ ನಲ್ಲಿ ಇಂದು ಪತ್ರಿಕೆಯೊಂದರ ಸುದ್ದಿ ಲೇಖನವನ್ನು ಹಂಚಿಕೊಂಡಿದ್ದಾರೆ. 2024 ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಫಡ್ನವೀಸ್ 38,000 ಕ್ಕೂ ಹೆಚ್ಚು ಮತಗಳಿಂದ ನಾಗ್ಪುರ ನೈಋತ್ಯದಲ್ಲಿ ಗೆದ್ದಿದ್ದರು. ಇಲ್ಲಿ ಅಪರಿಚಿತ ವ್ಯಕ್ತಿಗಳು ಮತ ಚಲಾಯಿಸಿದ್ದಾರೆ ಎಂದು ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್‌ಒಗಳು) ವರದಿ ಮಾಡಿದ್ದಾರೆ ಎಂದಿರುವ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ, ಮಾಧ್ಯಮಗಳು ಸಹ ಪರಿಶೀಲಿಸಿದ ವಿಳಾಸವಿಲ್ಲದ ಸಾವಿರಾರು ಮತದಾರರು ಪಟ್ಟಿಯಲ್ಲಿದ್ದಾರೆ ಎಂದು ಬಹಿರಂಗಪಡಿಸಿವೆ ಎಂದು ಹೇಳಿದ್ದಾರೆ.
ಮಹಾರಾಷ್ಟ್ರ ಸಿಎಂ ಸ್ವ ಕ್ಷೇತ್ರದಲ್ಲಿ ಕೇವಲ 5 ತಿಂಗಳಲ್ಲಿ ಮತದಾರರ ಪಟ್ಟಿಯಲ್ಲಿ ಶೇ 8 ರಷ್ಟು ಮತದಾರರು ಹೆಚ್ಚಾಗಿದ್ದಾರೆ. ಕೆಲವು ಬೂತ್‌ಗಳಲ್ಲಿ ಶೇ 20-50ರಷ್ಟು ಹೆಚ್ಚಳ ಕಂಡುಬಂದಿದೆ ಎಂದು ಗಾಂಧಿ ಹೇಳಿದ್ದಾರೆ. ಅಪರಿಚಿತ ವ್ಯಕ್ತಿಗಳು ಮತ ಚಲಾಯಿಸಿದ್ದಾರೆ ಎಂದು ಬಿಎಲ್‌ಒಗಳು ವರದಿ ಮಾಡಿವೆ. ಪರಿಶೀಲಿಸಿದ ವಿಳಾಸವಿಲ್ಲದ ಸಾವಿರಾರು ಮತದಾರರನ್ನು ಮಾಧ್ಯಮಗಳು ಬಹಿರಂಗಪಡಿಸಿವೆ ಎಂದು ರಾಯ್ ಬರೇಲಿ ಸಂಸದರು ನೇರ ಆರೋಪ ಮಾಡಿದ್ದಾರೆ. ಇಷ್ಟೆಲ್ಲ ಆಗಿದ್ದರು ಚುನಾವಣಾ ಆಯೋಗ? ಮೌನವಾಗಿದೆ ಇಲ್ಲವೇ ಭಾಗಿಯಾಗಿದೆ. ಇವು ಪ್ರತ್ಯೇಕ ದೋಷಗಳಲ್ಲ. ಇದು ಮತ ಕಳ್ಳತನ. ಮರೆಮಾಚುವಿಕೆ ತಪ್ಪೊಪ್ಪಿಗೆಯಾಗಿದೆ ಎಂದು ಅವರು ಎಕ್ಸ್ ಖಾತೆಯಲ್ಲಿ ಆರೋಪಿಸಿದ್ದಾರೆ.