ಬೆಂಗಳೂರು: ನಮಗೆ ಜಾತಿ ಗಣತಿಯಲ್ಲಿ ರಾಜಕೀಯ ಬಣ್ಣ ಬೇಡ. ಸಾಮಾಜಿಕ ನ್ಯಾಯ ಬೇಕು. ಈ ಕಾರಣಕ್ಕೆ ನಾವು ಮತ್ತೊಮ್ಮೆ ಜಾತಿ ಜನಗಣತಿ ಮಾಡಲು ತೀರ್ಮಾನ ಮಾಡಿದ್ದೇವೆ. ಈ ಹಿಂದಿನ ವರದಿ ಬಗ್ಗೆ ಟೀಕೆ ಮಾಡಿದ್ದ ವಿರೋಧ ಪಕ್ಷದವರು ಈಗ ಉಲ್ಟಾ ಮಾತಾಡುತ್ತಿದ್ದಾರೆ. ಅದರ ಬದಲು ಹಳೆಯದನ್ನೇ ಒಪ್ಪಿಕೊಳ್ಳುವಂತೆ ಆಗ್ರಹಿಸಲಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದ್ದಾರೆ. ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆಯ ನಂತರ ಮಾಧ್ಯಮಗಳ ಜೊತೆ ಮಾತನಾಡಿ, ಜಾತಿಗಣತಿ ವಿಚಾರವಾಗಿ ಮರುಸಮೀಕ್ಷೆಗೆ ಮುಂದಾಗಿರುವ ಸರ್ಕಾರದ ಕ್ರಮವನ್ನು ವಿರೋಧ ಪಕ್ಷಗಳು ಟೀಕಿಸುತ್ತಿರುವ ಬಗ್ಗೆ ಕೇಳಿದಾಗ, “ಕುಮಾರಸ್ವಾಮಿ, ವಿಜಯೇಂದ್ರ, ಅಶೋಕ್ ಅವರು ಪುನಃ ಮಾಧ್ಯಮಗೋಷ್ಠಿ ಮಾಡಿ ಹಳೆಯ ವರದಿಯನ್ನೇ ಸ್ವೀಕರಿಸಿ ಎಂದು ಈಗ ಹೇಳಲಿ. ವಿರೋಧ ಪಕ್ಷದವರು ಈಗ ಏನೇನೋ ಮಾತನಾಡುತ್ತಿದ್ದಾರೆ. ಇದಕ್ಕೆ ನಿಧಾನಕ್ಕೆ ಉತ್ತರ ನೀಡೋಣ. ಯಾರು, ಯಾರು ಏನೇನು ಹೇಳುತ್ತಿದ್ದರು, ಅಶೋಕ್ ಏನು ಹೇಳಿದ್ದಾರೆ ಎಂಬುದನ್ನು ಮಾಧ್ಯಮಗಳು ಮತ್ತೆ ಪ್ರಸಾರ ಮಾಡಿಲಿ. ವಿರೋಧ ಪಕ್ಷದವರು ಹಿಂದೆ ಒಂದು, ಮುಂದೆ ಒಂದು ಮಾತನಾಡಿ ರಾಜಕೀಯವಾಗಿ ಬಣ್ಣ ಕಟ್ಟುತ್ತಿದ್ದಾರೆ. ಯಾರು ಏನು ಬೇಕಾದರೂ ಹೇಳಲಿ. ಜನರು, ಶಾಸಕರುಗಳ ಭಾವನೆ, ಅಭಿಪ್ರಾಯ ಅರಿತು ಕಾನೂನಾತ್ಮಕವಾಗಿ ಜಾತಿ ಗಣತಿ ಮರುಸಮೀಕ್ಷೆಗೆ ಒಪ್ಪಿಗೆ ಕೊಟ್ಟಿದ್ದೇವೆ. ಸೆಕ್ಷನ್ 11 ರ ಪ್ರಕಾರ ಜಾತಿ ಗಣತಿಗೆ 10 ವರ್ಷವಾಗಿದೆ ಎಂದು ಬೇಕಾದಷ್ಟು ಜನ ನ್ಯಾಯಾಲಯಕ್ಕೆ ಹೋಗಿ ತಡೆಯಾಜ್ಞೆ ತರಬಹುದು. 11.04.2015 ಅಲ್ಲಿ ಜಾತಿಗಣತಿ ಪ್ರಾರಂಭವಾಗಿ 30.05.2015 ರಲ್ಲಿ ಮುಗಿದಿತ್ತು. ಈ ವರ್ಷ ಫೆ. 29 ರಂದು ಜಾತಿಗಣತಿ ವರದಿ ಸಲ್ಲಿಕೆಯಾಗಿತ್ತು. ನಂತರ ಕ್ಯಾಬಿನೆಟ್ ನಲ್ಲಿ 5-6 ಬಾರಿ ಇದರ ಬಗ್ಗೆ ಚರ್ಚೆ ಮಾಡಲಾಗಿತ್ತು. ವಿರೋಧ ಪಕ್ಷದವರು ಸಹ ಮರು ಗಣತಿಗೆ ಒತ್ತಾಯ ಮಾಡುತ್ತಿದ್ದರು. ಈ ಮದ್ಯೆ ಹೈಕಮಾಂಡ್ ಅವರು ನಮ್ಮನ್ನು ಕರೆಸಿ ಈ ಬಗ್ಗೆ ಒಂದಷ್ಟು ಮಾರ್ಗದರ್ಶನ ನೀಡಿದ್ದಾರೆ” ಎಂದರು.
ಲಿಂಗಾಯತ ಮತ್ತು ಒಕ್ಕಲಿಗರಿಂದ ಈ ಹಿಂದೆ ವಿರೋಧ ವ್ಯಕ್ತವಾದ ಬಗ್ಗೆ ಕೇಳಿದಾಗ, “ಇದರ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಸಮಾಜದ ಎಲ್ಲರನ್ನು ಒಳಗೊಂಡ ಸಮೀಕ್ಷೆ ಇದಾಗಲಿದೆ. ಹೊರನಾಡು ಕನ್ನಡಿಗರಿಗೆ ಆನ್ ಲೈನ್ ಮೂಲಕ ಸಮೀಕ್ಷೆಯಲ್ಲಿ ಭಾಗವಹಿಸುವಂತೆ ವ್ಯವಸ್ಥೆ ಕಲ್ಪಿಸಲಾಗುವುದು” ಎಂದು ಹೇಳಿದರು.
“ಹೈಕಮಾಂಡ್ ನಮಗೆ ಮಾರ್ಗದರ್ಶನ ಮಾತ್ರ ನೀಡಿದೆ. 10 ವರ್ಷಗಳು ಆಗಿರುವ ಕಾರಣಕ್ಕೆ ಸಮಾಜದ ಎಲ್ಲರನ್ನು ಒಳಗೊಳ್ಳುವುದು ನಮ್ಮ ಉದ್ದೇಶ. ಇದು ಕಾಂಗ್ರೆಸ್ ಪಕ್ಷದ ಮೂಲ ಆಶಯ” ಎಂದರು.