ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುವ ಯಾವುದೇ ಅಹಿತಕರ ಘಟನೆಗಳಿಗೆ ಬಿಜೆಪಿ, ಸಂಘಪರಿವಾರವೇ ಕಾರಣ ಎನ್ನುವ ಬೇಜವಾಬ್ದಾರಿ ಹೇಳಿಕೆಯನ್ನು ಆಳುವ ಕಾಂಗ್ರೆಸ್ ಸರ್ಕಾರ ಪ್ರತಿ ಬಾರಿ ನೀಡುತ್ತದೆ. ವಾಸ್ತವವಾಗಿ ಜಿಲ್ಲಾ ಉಸ್ತುವಾರಿ ಸಚಿವರು, ಗೃಹ ಸಚಿವರು, ಉಪ ಮುಖ್ಯಮಂತ್ರಿ ನಡೆಸುತ್ತಿರುವ ಅಲ್ಪಸಂಖ್ಯಾತರ ಅತಿರೇಕದ ತುಷ್ಟೀಕರಣದಿಂದ ಇಲ್ಲಿ ಸಮಸ್ಯೆ ಸೃಷ್ಟಿಯಾಗುತ್ತಿದೆ ಎಂದು ಶಾಸಕ ಡಾ.ಭರತ್ ಶೆಟ್ಟಿ ಟೀಕಿಸಿದ್ದಾರೆ. ಅವರು ನಗರದ ಬಿಜೆಪಿ ಕಛೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ನಡೆಯುವ ಅಹಿತಕರ ಘಟನೆ ಹಾಗೂ ಪ್ರಾಕೃತಿಕ ವಿಕೋಪಗಳಿಗೆ ಸಂಬಂಧಿಸಿ ಎಲ್ಲ ಶಾಸಕರ ಸಭೆ ಕರೆದು ಚರ್ಚಿಸುವ ಬದಲು ಉಸ್ತುವಾರಿ ಸಚಿವರು ಕೇವಲ ಮುಸ್ಲಿಮರನ್ನು ಕರೆಸಿ ಸಭೆ ನಡೆಸುತ್ತಾರೆ. ರಾಜ್ಯದಲ್ಲಿಯೇ ಕಾನೂನು, ಸುವ್ಯವಸ್ಥೆ ಪೂರ್ಣ ಹದಗೆಟ್ಟಿದೆ. ಅದರಲ್ಲೂ ದ.ಕ. ಜಿಲ್ಲೆಯನ್ನು ಸರ್ಕಾರ ಪೂರ್ಣವಾಗಿ ನಿರ್ಲಕ್ಷಿಸಿದೆ ಎಂದರು.
ಬಂಟ್ವಾಳದಲ್ಲಿ ಹತ್ಯೆ ಸಂಭವಿಸಿದ ತಕ್ಷಣ ಉಸ್ತುವಾರಿ ಸಚಿವರು ಬೆಂಗಳೂರಿನಲ್ಲಿ ಹೇಳಿಕೆ ನೀಡಿ, ಭಗವದ್ಗೀತೆಯಲ್ಲಿ ಇದೆಲ್ಲ ಇದೆಯಾ? ಎಂದು ಪ್ರಶ್ನಿಸಿದ್ದಾರೆ. ಹಿಂದುಗಳ ಹತ್ಯೆಯಾದಾಗ ಕುರಾನ್‌ನಲ್ಲಿ ಇದೆಲ್ಲಾ ಇದೆಯಾ? ಎಂದು ಕೇಳುವ ಧೈರ್ಯ ಉಸ್ತುವಾರಿ ಸಚಿವರಿಗೆ ಇದೆಯೇ? ಎಂದು ಅವರು ಪ್ರಶ್ನಿಸಿದರು.
ನಂಬರ್ ಟೂ ಬಿಸಿನೆಸ್ ಜಿಲ್ಲೆಯ ಘರ್ಷಣೆಗಳಿಗೆ ಇನ್ನೊಂದು ಪ್ರಮುಖ ಕಾರಣ. ಗೋಹತ್ಯೆ, ಗೋ ಕಳ್ಳ ಸಾಗಣೆಯನ್ನು ತಡೆದಾಗ ತಡೆದವರೇ ಮೇಲೆಯೇ ಕೇಸ್ ದಾಖಲಿಸುತ್ತಾರೆ. ಕೊಲ್ಲುವ ಪ್ರಯತ್ನವೂ ನಡೆಯುತ್ತದೆ. ಲವ್ ಜಿಹಾದ್, ಮತಾಂತರಗಳಿಗೆ ಸಮಾಜದ ವಿರೋಧ ಇದೆ. ಕಾನೂನು ಮೂಲಕ ಅಧಿಕಾರಿಗಳು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು. ಸರ್ಕಾರ ಪರಿಸ್ಥಿತಿ ನಿಯಂತ್ರಿಸಲು ಪೊಲೀಸ್ ಅಧಿಕಾರಿಗಳಿಗೆ ಮುಕ್ತ ಅವಕಾಶ ನೀಡುತ್ತಿಲ್ಲ. ಸಮಸ್ಯೆ ಕುತ್ತಿಗೆಗೆ ಬಂದಾಗ ಪೊಲೀಸ್ ಅಧಿಕಾರಿಗಳನ್ನೇ ವರ್ಗಾವಣೆಗೊಳಿಸಲಾಗುತ್ತದೆ. ಈಗ ಹೊಸ ಪೊಲೀಸ್ ಅಧಿಕಾರಿಗಳು ಆಗಮಿಸಿದ್ದು, ಅವರು ಯಾವುದೇ ಒತ್ತಡಕ್ಕೆ ಒಳಗಾಗದೆ ಜಿಲ್ಲೆಯ ಶಾಂತಿ ಕಾಪಾಡುವಲ್ಲಿ ಶ್ರಮಿಸುತ್ತಾರೆ ಎಂಬ ವಿಶ್ವಾಸ ಇದೆ ಎಂದು ಹೇಳಿದರು.
ಸರ್ಕಾರದ ಗ್ಯಾರಂಟಿಗಳನ್ನು ಕರಾವಳಿಯ ಜನತೆ ತೆಗೆದುಕೊಳ್ಳುತ್ತಾರೆ, ಆದರೆ ಕಾಂಗ್ರೆಸ್‌ಗೆ ಮತ ಹಾಕುವುದಿಲ್ಲ ಎನ್ನುವ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆ ಸರಿಯಲ್ಲ. ಸರ್ಕಾರದ ಗ್ಯಾರಂಟಿ ಯೋಜನೆಯನ್ನು ಕರಾವಳಿಯ ಜನತೆ ಹೊಟ್ಟೆಪಾಡಿಗೆ ಅವಲಂಬಿಸುತ್ತಿಲ್ಲ. 2013ರಲ್ಲಿ ಇಲ್ಲಿ ಕಾಂಗ್ರೆಸ್ ಶಾಸಕರೇ ಅಧಿಕ ಸಂಖ್ಯೆಯಲ್ಲಿ ಇದ್ದಾಗ ಏನು ಕೊಡುಗೆ ನೀಡಿದ್ದೀರಿ? ಆಗ ಹಿಂದು ಯುವಕರ ಮಾರಣಹೋಮ ನಡೆದಿದೆ. ಯಾವುದೇ ಅಭಿವೃದ್ಧಿ ಕಾರ್ಯ ನಡೆದಿಲ್ಲ. ರಾಷ್ಟ್ರವಿರೋಧಿ ಚಿಂತನೆ ವ್ಯಕ್ತಿಗಳನ್ನು ಇಲ್ಲಿನ ಜನತೆ ಒಪ್ಪುವುದಿಲ್ಲ ಎಂದು ಶಾಸಕ ಡಾ.ಭರತ್ ಶೆಟ್ಟಿ ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ಶಾಸಕಿ ಭಾಗೀರಥಿ, ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಮುಖಂಡರಾದ ಪ್ರೇಮಾನಂದ ಶೆಟ್ಟಿ, ಸತೀಶ್ ಪ್ರಭು, ರಾಜಗೋಪಾಲ ರೈ, ಸಂಜಯ ಪ್ರಭು, ಯತೀಶ್ ಆರ್ವಾರ್, ಅರುಣ್ ಶೇಟ್, ಮನೋಜ್ ಕೋಡಿಕಲ್, ಡೊಂಬಯ್ಯ ಅರಸ ಉಪಸ್ಥಿತರಿದ್ದರು.