ಮಂಗಳೂರು: ರಾಜ್ಯ ಸರಕಾರದ ಜನಔಷಧಿ ಕೇಂದ್ರಗಳನ್ನು ಮುಚ್ಚುವ ನಿರ್ಧಾರ ಖಂಡನೀಯ. ದಿನೇಶ್ ಗುಂಡೂರಾವ್ ಅವರ ಹೇಳಿಕೆ ದುರದೃಷ್ಟಕರ ಎಂದು ಕಿಶೋರ್ ಕುಮಾರ್ ಪುತ್ತೂರು ವಿಷಾದ ವ್ಯಕ್ತಪಡಿಸಿದ್ದಾರೆ. ರಾಜ್ಯಾದ್ಯಂತ ಸರ್ಕಾರಿ ಆಸ್ಪತ್ರೆಗಳಿಂದ ಜನಔಷಧಿ ಕೇಂದ್ರಗಳನ್ನು ಮುಚ್ಚುವ ರಾಜ್ಯ ಸರ್ಕಾರದ ನಿರ್ಧಾರವನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಜನಔಷಧಿ ಯೋಜನೆಯು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಪ್ರಜಾಪ್ರಭುತ್ವ ಯೋಜನೆಯಾಗಿದ್ದು, ಲಕ್ಷಾಂತರ ಬಡ ಜನರಿಗೆ ಕಡಿಮೆ ಬೆಲೆಯ, ಉತ್ತಮ ಗುಣಮಟ್ಟದ ಜನರಿಕ್ ಔಷಧಿಗಳನ್ನು ಒದಗಿಸುತ್ತಿತ್ತು. ಎಷ್ಟೋ ಜನ ಔಷಧಕ್ಕೆ ಹಣ ಇಲ್ಲ ಎಂದು ಮಾತ್ರೆಗಳನ್ನು ತೆಗೆದುಕೊಳ್ಳದೆ ಇರುವವರನ್ನು ನಾವು ಕಂಡಿದ್ದೇವೆ. ಈ ಯೋಜನೆಯಿಂದ ಅತ್ಯಂತ ಕಡಿಮೆ ದರದಲ್ಲಿ ಔಷಧವನ್ನು ಪಡೆಯುವ ಕಾರಣ ತಮ್ಮ ಜೀವವನ್ನು ಉಳಿಸಿದ್ದಾರೆ.
ಆದರೆ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಇಂದು ಈ ಯೋಜನೆಗೆ ಆರ್ಥಿಕವಾಗಿಯೂ ಸಾಮಾಜಿಕವಾಗಿಯೂ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ನೀಡಿರುವ, "ಜನಔಷಧಿ ಕೇಂದ್ರಗಳು ಬಡವರಿಗೆ ಅವಶ್ಯಕವಿಲ್ಲ, ಸರ್ಕಾರಿ ಆಸ್ಪತ್ರೆಗಳಲ್ಲಿ ಮಾತ್ರ ಔಷಧಿ ಕೊಡಬೇಕು" ಎಂಬ ಹೇಳಿಕೆ ದುರದೃಷ್ಟಕರವಾಗಿದ್ದು, ಈ ಸರ್ಕಾರದ ಬಡ ವಿರೋಧಿ ನಿಲುವನ್ನು ಸಾಬೀತುಪಡಿಸುತ್ತದೆ.
ರಾಜ್ಯ ಸರ್ಕಾರಕ್ಕೆ ಒಂದು ಪ್ರಶ್ನೆ – ಎಲ್ಲಾ ಆಸ್ಪತ್ರೆಗಳಲ್ಲಿ ಶೇಕಡಾ 100 ರಷ್ಟು ಔಷಧಿಗಳ ಲಭ್ಯತೆ ಇದೆಯೇ? ಇಲ್ಲದೆ ಹೋದರೆ ಜನಔಷಧಿ ಕೇಂದ್ರವೇ ಅವರ ಆಧಾರ. ಹಾಗಿರುವಾಗ ಈ ಕೇಂದ್ರಗಳನ್ನು ಮುಚ್ಚುವುದು ಸಾಮಾನ್ಯ ಜನರ ಮೇಲೆ ಬಲಾತ್ಕಾರವಾಗಿದೆ.ಕಳೆದ ಕೆಲ ವರ್ಷಗಳಲ್ಲಿ ಜನಔಷಧಿ ಕೇಂದ್ರಗಳು ಹೆಮ್ಮೆಯ ಯೋಜನೆ ಆಗಿದ್ದು, ಇವುಗಳಿಂದ ದೇಶದಾದ್ಯಂತ ಲಕ್ಷಾಂತರ ಜನರು ಪ್ರಯೋಜನ ಪಡೆದುಕೊಂಡಿದ್ದಾರೆ. ಕೇಂದ್ರ ಸರ್ಕಾರ ಈ ಯೋಜನೆಯನ್ನು ಬಲಪಡಿಸುತ್ತಿದ್ದರೆ, ರಾಜ್ಯ ಸರ್ಕಾರ ಅದನ್ನು ನಿರ್ಬಂಧಿಸುವುದು ರಾಜಕೀಯ ಪಿತೂರಿ ಹಾಗೂ ಜವಾಬ್ದಾರಿಯಿಲ್ಲದ ಆಡಳಿತದ ಚಿಹ್ನೆ. ಹೀಗಾಗಿ, ನಾನು ರಾಜ್ಯ ಸರ್ಕಾರವನ್ನು ಆಗ್ರಹಪೂರ್ವಕವಾಗಿ ಕೇಳಿಕೊಳ್ಳುತ್ತೇನೆ – ತಕ್ಷಣ ಈ ತೀರ್ಮಾನವನ್ನು ಹಿಂಪಡೆಯಬೇಕು. ಬಡವರ ಬಾಯಿಯಿಂದ ಔಷಧಿಯ ಹಕ್ಕನ್ನು ಕಿತ್ತುಕೊಳ್ಳಬಾರದು. ಜನಔಷಧಿ ಕೇಂದ್ರಗಳ ಪುನರ್ ಸ್ಥಾಪನೆ ಮತ್ತು ಹೊಸ ಕೇಂದ್ರಗಳ ಸ್ಥಾಪನೆಗೆ ಸರ್ಕಾರ ಸಹಕರಿಸಬೇಕು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.