image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಸಮಾಜಕ್ಕೆ ಕೊಡುಗೆ ನೀಡುವುದು ಮುಖ್ಯವೇ ಹೊರತು ಜಾತಿ, ಧರ್ಮವಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್

ಸಮಾಜಕ್ಕೆ ಕೊಡುಗೆ ನೀಡುವುದು ಮುಖ್ಯವೇ ಹೊರತು ಜಾತಿ, ಧರ್ಮವಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್

ಮಂಗಳೂರು: ದೇವರು ನೀಡಿದ ಅವಕಾಶವನ್ನು ಬಳಸಿಕೊಂಡು ಸಮಾಜಕ್ಕೆ ಏನು ಕೊಡುಗೆ ನೀಡುತ್ತೇವೆ ಎನ್ನುವುದು ಮುಖ್ಯವೇ ಹೊರತು ಜಾತಿ ಧರ್ಮವಲ್ಲ. ಸಮಾಜದಲ್ಲಿ ಎಷ್ಟು ಜನರ ಬದುಕನ್ನು ಬದಲಾವಣೆ ಮಾಡಿದ್ದೇವೆ ಎನ್ನುವುದು ಮುಖ್ಯವಾಗುತ್ತದೆ" ಎಂದು‌ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು. ಉಳ್ಳಾಲದ ದರ್ಗಾ ವಠಾರದಲ್ಲಿ ಶನಿವಾರ ನಡೆದ ಖುತ್‌ಬುಝ್ಝಮಾನ್ ಹಝ್ರತ್ ಅಸ್ಸಯ್ಯದ್ ಮುಹಮ್ಮದ್ ಶರೀಫುಲ್ ಮದನಿ ತಂಙಳ್‌ರವರ 432ನೇ ವಾರ್ಷಿಕ ಮತ್ತು 22ನೇ ಪಂಚವಾರ್ಷಿಕ ಉರೂಸ್ ಮುಬಾರಕ್ ಕಾರ್ಯಕ್ರಮದಲ್ಲಿ ಮಾತನಾಡಿ, "ನಾವುಗಳು ಯಾರು ಇದೇ ಧರ್ಮ,‌ ಜಾತಿಯಲ್ಲಿ ಹುಟ್ಟಬೇಕು ಎಂದು ಅರ್ಜಿ ಹಾಕಿಕೊಂಡು ಹುಟ್ಟುವುದಿಲ್ಲ. ನಮ್ಮ ಪೂರ್ವಜರು, ತಂದೆ, ತಾಯಿಯವರು ಮಾಡಿದ ಪುಣ್ಯದ ಫಲದಿಂದ ಹುಟ್ಟಿದ್ದೇವೆ" ಎಂದರು.

432 ನೇ ಹಾಗೂ 22 ನೇ ಪಂಚವಾರ್ಷಿಕ ಉರುಸ್ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ನನ್ನ ಪುಣ್ಯ. ಇಂತಹ ಪವಿತ್ರವಾದ ಧಾರ್ಮಿಕ ಕಾರ್ಯದಲ್ಲಿ ನಾನು ಹಾಜರಿರುವುದು ನನ್ನ ಸೌಭಾಗ್ಯ. ನೂರಾರು ಜನರು ಕುರಿ ನೀಡಿ ಹರಕೆ ತೀರಿಸುತ್ತಾರೆ ಎಂದು ಖಾದರ್ ಅವರ ಸಹೋದರ ತಿಳಿಸಿದರು. ನಾನು ಸಹ 50 ಕುರಿಗಳನ್ನು ನೀಡಿ ಹರಕೆ ಸೇವೆ ಮಾಡುವೆ" ಎಂದರು.

"ದೇಶದ ಸೈನಿಕರ ಪರವಾಗಿ ಶುಕ್ರವಾರದಂದು ಪ್ರಾರ್ಥನೆ ಸಲ್ಲಿಸಿ ಇತಿಹಾಸ ನಿರ್ಮಾಣ‌ ಮಾಡಿದ ನಿಮಗೆ ಸರ್ಕಾರದ ವತಿಯಿಂದ ಕೋಟಿ, ಕೋಟಿ ನಮಸ್ಕಾರಗಳು. ಇಂತಹ ಕಷ್ಟದ ಸಂದರ್ಭದಲ್ಲಿ ನಾವೆಲ್ಲರೂ ಒಗ್ಗಟ್ಟಿನಿಂದ ಇದ್ದು ಪ್ರತಿಯೊಬ್ಬರು ಭಾರತವನ್ನು ರಕ್ಷಣೆ ಮಾಡಲಿ ಎಂದು ಭಗವಂತನಲ್ಲಿ ಬೇಡಿಕೊಳ್ಳಬೇಕಾಗಿದೆ" ಎಂದು ಹೇಳಿದರು.

ಅಜ್ಮೀರ್ ದರ್ಗಾಕ್ಕೆ ಐದಾರು ಸಲ ಹೋಗಿದ್ದೇನೆ. ನನ್ನ ಕಷ್ಟ, ಸುಖದ ಸಮಯದಲ್ಲಿ ಪ್ರಾರ್ಥನೆ ಸಲ್ಲಿಸಿದ್ದೇನೆ. ಇಂದು ಎರಡನೇ ಪುಣ್ಯಕ್ಷೇತ್ರಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸುವ ಅವಕಾಶ ಸಿಕ್ಕಿದೆ. ಯು.ಟಿ.ಖಾದರ್ ಅವರ ಮನವಿಗೆ ಸ್ಪಂದಿಸಿ ನಮ್ಮ ಸರ್ಕಾರ ಉರುಸ್ ಆಚರಣೆಗೆ 3 ಕೋಟಿ ಅನುದಾನ ನೀಡಿದೆ ಎಂದು ತಿಳಿಸಿದರು. 

ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ಅವರ ತಂದೆಯವರು ಶಾಸಕರಾಗಿದ್ದಾಗ ನಾನೂ ಶಾಸಕನಾಗಿದ್ದೆ ಈಗ ಇವರ ಜೊತೆಯಲ್ಲಿಯೂ ಶಾಸಕನಾಗಿರುವುದು ಕಾಕತಾಳೀಯ ಎಂದರು.

Category
ಕರಾವಳಿ ತರಂಗಿಣಿ