ಮಂಗಳೂರು : ಕೇಂದ್ರ ಹಾಗೂ ರಾಜ್ಯ ಸರಕಾರಗಳು ಜನತೆಯ ಮೇಲೆ ಮಿತಿ ಮೀರಿದ ಆರ್ಥಿಕ ಹೊರೆಯನ್ನು ಹೇರುತ್ತಿದ್ದು, ಸರಕಾರಗಳ ಜನವಿರೋಧಿ ನೀತಿ ವಿರುದ್ಧ ಎ.18ರಿಂದ 28ರವರೆಗೆ ರಾಜ್ಯಾದ್ಯಂತ ವಿಮೆನ್ ಇಂಡಿಯಾ ಮೂವ್ಮೆಂಟ್ ವತಿಯಿಂದ ಪ್ರತಿಭಟನಾ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ವಿಮೆನ್ ಇಂಡಿಯಾ ಮೂವ್ಮೆಂಟ್ನ ರಾಜ್ಯಾಧ್ಯಕ್ಷೆ ಫಾತಿಮಾ (fathima nasima) ನಸೀಮಾ ತಿಳಿಸಿದ್ದಾರೆ. ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು, ಈಗಾಗಲೇ ದಿನ ಬಳಕೆ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿರುವ ಜನತೆಗೆ ಕೇಂದ್ರ ಸರಕಾರ ಅಡುಗೆ ಅನಿಲ ದರವನ್ನು ಹೆಚ್ಚಿಸಿದರೆ, ರಾಜ್ಯ ಸರಕಾರ ವಿದ್ಯುತ್, ಹಾಲು, ನೀರು, ಬಸ್ ದರಗಳನ್ನು ಏರಿಸಿ ಗಾಯದ ಮೇಲೆ ಬರೆ ಎಳೆದಿದೆ ಎಂದು ಆರೋಪಿಸಿದರು.ಜನ ಸ್ನೇಹಿಯಾಗಿದ್ದ ನಮ್ಮ ಮೆಟ್ರೋ ದರ ಏರಿಕೆಯಿಂದಲೂ ಜನ ಸಾಮಾನ್ಯರು ಖಾಸಗಿ ವಾಹನಗಳತ್ತ ಮುಖ ಮಾಡುವಂತಾಗಿದೆ. ಜಾಗತಿಕವಾಗಿ ತೈಲ ಬೆಲೆಗಳು ಇಳಿಕೆಯಾಗುತ್ತಿದ್ದರೂ ತೈಲಗಳ ಮೇಲೆ ಅಬಕಾರಿ ಸುಂಕ ಹೆಚ್ಚಳ ಮಾಡುವ ಮೂಲಕ ಸರಕಾರ ಹಗಲು ದರೋಡೆಗೆ ಇಳಿದಿದೆ. ಒಂದೆಡೆ ಕೇಂದ್ರ ಸರಕಾರ ಅಚ್ಚೇದಿನ್ ಹೆಸರಿನಲ್ಲಿ ಗ್ಯಾರಂಟಿ ಯೋಜನೆಗಳ ಮೂಲಕ ರಾಜ್ಯ ಸರಕಾರ ಬೆಲೆ ಏರಿಕೆ ಮಾಡಿ ಲೂಟಿ ಮಾಡುತ್ತಿವೆ ಎಂದು ಅವರು ಆರೋಪಿಸಿದರು.
ಪತ್ರಿಕಾಗೋಷ್ಟಿಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ನಪ್ರಿಯಾ ಬೆಳ್ಳಾರೆ, ರಾಜ್ಯ ಕಾರ್ಯದರ್ಶಿ ಝುಲೈಕ ಬಜ್ಜೆ ಮಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷೆ ನೌರೀ ಅಲಂಪಾಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಮೀಮಾ ಉಪಸ್ಥಿತರಿದ್ದರು.