ಬೆಂಗಳೂರು: ಡೀಸೆಲ್(diesel price) ದರ ಏರಿಕೆಗೆ ವಿಪಕ್ಷ ನಾಯಕರು ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ಜನ ದಂಗೆ ಏಳದೇ ವಿಧಿ ಇಲ್ಲ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ (kumarswamy) ಆಕ್ರೋಶ ಹೊರಹಾಕಿದ್ದಾರೆ.
ಈ ಬಗ್ಗೆ ಮಾಧ್ಯಮ(media) ಹೇಳಿಕೆ ಬಿಡುಗಡೆ ಮಾಡಿರುವ ಅವರು, ಜನಪೀಡಕ, ದರ ಬೀಜಾಸುರ ಸರಕಾರದಿಂದ(government) ರಾಜ್ಯದ ಜನತೆಗೆ ಇನ್ನೊಂದು ಶಾಕ್ ನೀಡಿದೆ. ಕಳೆದ ಹತ್ತು ತಿಂಗಳಲ್ಲಿ ಡಿಸೇಲ್ ಪ್ರತಿ ಲೀಟರಿಗೆ ₹5 ಏರಿಕೆ ಭಾಗ್ಯ ಕೊಟ್ಟಿರುವ ರಾಜ್ಯ ಕಾಂಗ್ರೆಸ್ ಸರಕಾರ, ಯುಗಾದಿ ಹೊಸ ತೊಡಕು ದಿನವೇ ಹೊಸ ಹೊಸ ದರ ವಿಧಿಸಿ ದರ ಬೀಜಾಸುರ ಸರ್ಕಾರ ವಿಜೃಂಭಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಳಗ್ಗೆ ನಿದ್ರೆಯಿಂದ ಜನರೆದ್ದರೆ ಸುಲಿಗೆ ಬರೆ ಹಾಕುತ್ತಿದೆ ಕರ್ನಾಟಕ ಈಸ್ಟ್ ಇಂಡಿಯಾ(east India) ಕಾಂಗ್ರೆಸ್ ಕಂಪನಿ ಸರ್ಕಾರ. ಕೈ ಕಂಪನಿ ಸರಕಾರಕ್ಕೆ ಕಣ್ಣಿಲ್ಲ, ಕರುಣೆಯೂ ಇಲ್ಲ. ಕಿತ್ತು ತಿನ್ನುವ ವಿಕೃತಿಯನ್ನು ಹತ್ತಿಕ್ಕಲು ಜನ ದಂಗೆ ಎಳದೇ ವಿಧಿ ಇಲ್ಲ ಎಂದಿದ್ದಾರೆ.
ಈ ಸಂಬಂಧ ವಾಗ್ದಾಳಿ ನಡೆಸಿರುವ ವಿಪಕ್ಷ ನಾಯಕ ಆರ್.ಅಶೋಕ್, ಕನ್ನಡಿಗರಿಗೆ ಈ ವರ್ಷ ಮಾರಿಹಬ್ಬ ಕಾದಿದೆ ಎಂದು ಬಜೆಟ್ ಅಧಿವೇಶನದಲ್ಲಿ ನಾನು ನೀಡಿದ್ದ ಎಚ್ಚರಿಕೆ ಈಗ ಅಕ್ಷರಶಃ ನಿಜವಾಗುತ್ತಿದೆ. ಬಜೆಟ್ ನಲ್ಲಿ ಯಾವುದೇ ತೆರಿಗೆ ಹೆಚ್ಚಳವನ್ನ, ಬೆಲೆ ಏರಿಕೆಯನ್ನ ಘೋಷಣೆ ಮಾಡದೇ ಕನ್ನಡಿಗರ ಕಿವಿಗೆ ಹೂವಿಟ್ಟ ಸಿಎಂ ಅವರು ಈಗ ದಿನಕ್ಕೊಂದು ವಸ್ತುಗಳ ಮೇಲೆ ತೆರಿಗೆ ಹಾಕಿ, ಬೆಲೆ ಹೆಚ್ಚಿಸಿ, ಬಡವರು, ಮಾಧ್ಯಮ ವರ್ಗದ ರಕ್ತ ಹೀರಲು ಹೊರಟಿದ್ದಾರೆ ಎಂದು ಟೀಕಿಸಿದ್ದಾರೆ.
ಹಾಲಿನ ದರ ಏರಿಕೆ ಮಾಡಿದ್ದಾಯ್ತು, ಕಸ ಸಂಗ್ರಹಣ ಮೇಲೆ ಸೆಸ್ ಹಾಕಿದ್ದಾಯ್ತು, ಈಗ ಏಕಾಏಕಿ ಡೀಸೆಲ್ ಬೆಲೆಯನ್ನು ಲೀಟರ್ ಗೆ 2 ರೂಪಾಯಿ ಏರಿಕೆ ಮಾಡಿದೆ ಈ ದರಿದ್ರ ಕಾಂಗ್ರೆಸ್ ಸರ್ಕಾರ. ಡೀಸೆಲ್ ಅಂದರೆ ಅದು ಸರಕು ಸಾಗಾಣಿಕೆಗೆ ಉಪಯೋಗಿಸುವ ಇಂಧನ. ಡೀಸೆಲ್ ಬೆಲೆ ಹೆಚ್ಚಾದರೆ ಹಾಲು, ತರಕಾರಿ, ಹಣ್ಣು, ದಿನಸಿ, ಟ್ಯಾಕ್ಸಿ ಸೇರಿದಂತೆ ಎಲ್ಲ ಅಗತ್ಯ ವಸ್ತುಗಳ, ಸೇವೆಗಳ ಬೆಲೆ ಹೆಚ್ಚಾಗುತ್ತವೆ ಎಂದು ಸ್ವಯಂಘೋಷಿತ ಆರ್ಥಿಕ ತಜ್ಞರಾದ ಸಿದ್ದರಾಮಯ್ಯನವರಿಗೆ ತಿಳಿದಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ಸಾರಿಗೆ ನೌಕರರಿಗೆ ಸಂಬಳ (salary) ಕೊಡಲು ದುಡ್ಡಿಲ್ಲದೆ ಇತ್ತೀಚೆಗಷ್ಟೆ ಬಸ್ ಟಿಕೆಟ್ ದರ ಏರಿಕೆ ಆಗಿತ್ತು. ಈಗ ಡೀಸೆಲ್ ಬೆಲೆ ಏರಿಕೆ ಆಗಿದೆ ಎನ್ನುವ ನೆಪವೊಡ್ಡಿ ಮತ್ತೊಮ್ಮೆ ಬಸ್ ಟಿಕೆಟ್ ದರ ಏರಿಕೆ ಮಾಡುವುದರಲ್ಲಿ ಅನುಮಾನವೇ ಇಲ್ಲ. ಇನ್ನು ಯಾವ ಯಾವ ವಸ್ತುಗಳ ಮೇಲೆ ತೆರಿಗೆ ಹಾಕಬೇಕು, ಯಾವ ಯಾವ ವಸ್ತುಗಳ ಬೆಲೆ ಏರಿಕೆ ಮಾಡಬೇಕು ಎಂದು ಹೊಂಚು ಹಾಕಿದ್ದೀರಿ ಸಿದ್ದರಾಮಯ್ಯನವರೇ? ಬಡವರು, ಮಧ್ಯಮ ವರ್ಗದ (middle class) ರಕ್ತ ಹೀರುತ್ತಿರುವ ರಕ್ತಪಿಪಾಸು ಕಾಂಗ್ರೆಸ್ ಸರ್ಕಾರಕ್ಕೆ ಜನರ ಶಾಪ ತಟ್ಟದೇ ಇರದು ಎಂದು ಕಿಡಿ ಕಾರಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ (bjp state President) ಬಿ.ವೈ.ವಿಜಯೇಂದ್ರ ಎಕ್ಸ್ ಪೋಸ್ಟ್ ಮಾಡಿ, ರಾತ್ರಿ ಮಲಗಿ ಬೆಳಗೆದ್ದರೆ ಯಾವುದರ ಬೆಲೆ ಏರಿಕೆಯಾಗುವುದೋ ಎಂಬ ಆತಂಕದ ಪರಿಸ್ಥಿತಿ ನಾಡಿನ ಜನಸಾಮಾನ್ಯರಲ್ಲಿ ಮನೆಮಾಡಿದೆ. ಬೆಲೆ ಏರಿಕೆಯ ದಂಡ ನಿರಂತರ ಪ್ರಯೋಗಿಸುತ್ತಿರುವ ನಿಷ್ಪ್ರಯೋಜಕ ಕಾಂಗ್ರೆಸ್ ಸರ್ಕಾರ ಎಂದಿನಂತೆ ಜನರ ಬದುಕನ್ನು ಹಿಂಡುವುದನ್ನು ಮುಂದುವರೆಸಿದೆ. ತನ್ನ ಖಾಲಿ ಖಜಾನೆ ತುಂಬಿಸಿಕೊಳ್ಳಲು ಡೀಸೆಲ್ ಮಾರಾಟ ತೆರಿಗೆಯನ್ನು ದಿಡೀರ್ ಹೆಚ್ಚಿಸಿರುವುದರಿಂದ ರಾಜ್ಯದಲ್ಲಿ ಡೀಸೆಲ್ ದರವು ಪ್ರತಿ ಲೀಟರ್‌ಗೆ '2' ರೂಪಾಯಿ ಹೆಚ್ಚಳವಾಗಲಿದ್ದು ನಾಡಿನ ಜನಸಾಮಾನ್ಯರಿಗೆ ಈ ದರ ಏರಿಕೆಯ ಬಿಸಿ ನೇರವಾಗಿ ತಟ್ಟಲಿದೆ ಎಂದಿದ್ದಾರೆ.
ಕರ್ನಾಟಕ ರಾಜ್ಯದ (karnataka state) ಇತಿಹಾಸದಲ್ಲಿ ಇಂದಿನ ಕಾಂಗ್ರೆಸ್ ಸರ್ಕಾರದಷ್ಟು ಜನ ವಿರೋಧಿ ಸರ್ಕಾರವನ್ನು ರಾಜ್ಯದ ಜನತೆ ಎಂದೂ ಕಂಡಿಲ್ಲ. ಸುಳ್ಳು ಭರವಸೆಗಳು ಹಾಗೂ ಯೋಜನೆಗಳನ್ನು ಪೂರೈಸಲಾಗದೇ ರಾಜ್ಯದ ಖಜಾನೆಯನ್ನು ಬರಿದು ಮಾಡಿಕೊಂಡಿರುವ ಈ ಸರ್ಕಾರ ನಿತ್ಯವೂ ಒಂದಿಲ್ಲೊಂದು ದರ ಏರಿಸಿ ರಾಜ್ಯದ ಜನತೆಯನ್ನು ಸಂಕಷ್ಟಕ್ಕೆ ತಳ್ಳುತ್ತಿದೆ. ರಾಜ್ಯ ಸರ್ಕಾರ ಇದೀಗ ಡೀಸೆಲ್ ದರ ಹೆಚ್ಚಿಸಿರುವುದು ಇನ್ನುಮುಂದೆ ರಾಜ್ಯದಲ್ಲಿ ಪ್ರತಿಯೊಂದು ವಸ್ತುಗಳ ಬೆಲೆಗಳೂ ಗಗನಕ್ಕೇರಲಿವೆ, ಜನಸಾಮಾನ್ಯರು, ಕಾರ್ಮಿಕರು, ಬಡವರು ಹಾಗೂ ಮಧ್ಯಮ ವರ್ಗದವರು ಬೆಲೆ ಏರಿಕೆಯ ಚಕ್ರವ್ಯೂಹದಲ್ಲಿ ಸಿಲುಕಿ ನಲುಗುವ ಪರಿಸ್ಥಿತಿ ನಿರ್ಮಾಣವಾಗಲಿದೆ. ಎಲ್ಲ ಕ್ಷೇತ್ರಗಳಿಗೂ ಬೆಲೆ ಏರಿಕೆಯ ಬಿಸಿತಟ್ಟಿಸುವ ನಿರ್ಧಾರವನ್ನು ಈ ಕೂಡಲೇ ಕೈಬಿಡಬೇಕೆಂದು ಒತ್ತಾಯಿಸುತ್ತೇವೆ. ಡೀಸೆಲ್ ಸೇರಿದಂತೆ ವಿವಿಧ ಅಗತ್ಯ ವಸ್ತುಗಳ ಮೇಲೆ ಹೆಚ್ಚಿಸಿರುವ ದರವನ್ನು ವಾಪಾಸ್ ಪಡೆಯದಿದ್ದರೆ ಬಿಜೆಪಿ ದರ ಹಿಂಪಡೆಯುವವರೆಗೂ ಹೋರಾಟವನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ ಎಂದು ಈ ಸಂದರ್ಭದಲ್ಲಿ ಎಚ್ಚರಿಸುತ್ತದೆ ಎಂದಿದ್ದಾರೆ.