ಮಧ್ಯ ಪ್ರದೇಶ : "ನಾನು ಮುಖ್ಯಮಂತ್ರಿಯಾಗಿದ್ದಾಗ ಗುಜರಾತ್‌ಗೆ ಪ್ರಚಾರ ಮಾಡಲು ಹೋಗಿದ್ದು, ನನಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ವಿರುದ್ಧ ಮಾತನಾಡದಂತೆ ಸೂಚಿಸಿದ್ದರು. ಇಂಥವರು ಪಕ್ಷದಲ್ಲೇ ಇದ್ದುಕೊಂಡು ಬಿಜೆಪಿಗೆ ನೆರವು ನೀಡುವ ದ್ರೋಹಿಗಳು" ಎಂದು ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಹೇಳಿದ್ದಾರೆ.
ಬಿಜೆಪಿಗೆ ನೆರವು ನೀಡುವ ಕಾಂಗ್ರೆಸ್ಸಿಗರನ್ನು ಕಿತ್ತೊಗೆಯಬೇಕು ಎಂಬ ಲೋಕಸಭೆಯಲ್ಲಿ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ಹೇಳಿಕೆಗೆ ಬೆಂಬಲ ನೀಡಿ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಮಧ್ಯ ಪ್ರದೇಶದ ಮಾಜಿ ಸಿಎಂ, "ಆರ್‌ಎಸ್‌ಎಸ್ ಅನ್ನು ಟೀಕಿಸಿದರೆ ಹಿಂದುಗಳು ಸಿಟ್ಟಾಗುತ್ತಾರೆ. ಹೀಗಾಗಿ ಸಂಘವನ್ನು ಟೀಕೆ ಮಾಡದಂತೆ ಸಲಹೆ ನೀಡಲಾಗಿತ್ತು" ಎಂದಿದ್ದಾರೆ.
"ರಾಹುಲ್ ಗಾಂಧಿ ಅವರು ಪಕ್ಷದೊಳಗಿನ ಬಿಜೆಪಿ ಬೆಂಬಲಿಗರನ್ನು ಹೊರಹಾಕುವುದಾಗಿ ಹೇಳಿದ್ದಾರೆ. ನಾನು ಅವರ ಹೇಳಿಕೆಯನ್ನು ಬೆಂಬಲಿಸುವೆ. ಪಕ್ಷದ್ರೋಹಿಗಳನ್ನು ಅವರು ಹೊರಹಾಕುವ ದಿನಕ್ಕಾಗಿ ಕಾಯುತ್ತಿದ್ದೇನೆ" ಎಂದು ಹೇಳಿದ್ದಾರೆ.
ಸಂಘವು ಹಿಂದೂಗಳನ್ನು ಪ್ರತಿನಿಧಿಸುವುದಿಲ್ಲ ಎಂದು ಪ್ರತಿಪಾದಿಸಿರುವ ಅವರು, "ಅದು ಧರ್ಮದ ಹೆಸರಿನಲ್ಲಿ ಸಮುದಾಯವನ್ನು ದಾರಿ ತಪ್ಪಿಸುತ್ತದೆ. ಶೋಷಣೆಗೆ ಗುರಿ ಮಾಡುತ್ತದೆ. ಇದರ ಜೊತೆಗೆ ಬಿಜೆಪಿ ಸೇರಿಕೊಂಡು ಹಿಂದು ಸಮುದಾಯವನ್ನು ಒಡೆದು, ಅದರ ಆಧಾರದ ಮೇಲೆ ಅಧಿಕಾರ ಹಿಡಿಯಲು ಬಯಸುತ್ತದೆ" ಎಂದು ಟೀಕಿಸಿದ್ದಾರೆ.
ಇತ್ತೀಚೆಗೆ ಗುಜರಾತ್ನ ಅಹಮದಾಬಾದ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ, "ಗುಜರಾತ್ನ ಕಾಂಗ್ರೆಸ್ ಸಂಘಟನೆ ಜನರಿಂದ ಸಂಪೂರ್ಣವಾಗಿ ದೂರವಾಗಿದೆ. ಬಿಜೆಪಿ ಬೆಂಬಲಿಗರಾಗಿ ಕೆಲಸ ಮಾಡುತ್ತಿದೆ. ಇಂಥ ಪಕ್ಷದ್ರೋಹಿಗಳನ್ನು ಗುರುತಿಸಿ ಉಚ್ಚಾಟನೆ ಮಾಡಬೇಕಿದೆ" ಎಂದು ಎಚ್ಚರಿಸಿದ್ದರು.
"ಪಕ್ಷದ ಮೊದಲ ಕೆಲಸವೆಂದರೆ ಕಾಂಗ್ರೆಸ್ ಕಾರ್ಯಕರ್ತರು ಮತ್ತು ನಾಯಕರ ಎರಡು ಗುಂಪುಗಳನ್ನು ಬೇರ್ಪಡಿಸುವುದು. ಒಂದು ಪಕ್ಷದ ಸಿದ್ಧಾಂತವನ್ನು ತಮ್ಮ ಹೃದಯದಲ್ಲಿ ಹೊತ್ತುಕೊಂಡು ಸಾರ್ವಜನಿಕರೊಂದಿಗೆ ನಿಲ್ಲುವವರು ಮತ್ತು ಇನ್ನೊಂದು ಸಾರ್ವಜನಿಕರಿಂದ ಸಂಪರ್ಕ ಕಡಿತಗೊಂಡು ಬಿಜೆಪಿ ಜೊತೆಗೆ ಇರುವವರು. ಇಂಥವರನ್ನು ಫಿಲ್ಟರ್ ಮಾಡುವ ಅಗತ್ಯವಿದೆ" ಎಂದಿದ್ದರು.