ಮಧ್ಯಪ್ರದೇಶ : ಬಿಜೆಪಿ ಮತ್ತು ಆರ್‌ಎಸ್‌ಎಸ್ ಇವೆರಡೂ ಸಂವಿಧಾನ ವಿರೋಧಿಗಳು ಎಂದು ಹೇಳುವ ಮೂಲಕ ಲೋಕಸಭೆಯ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಡಾ. ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸುವ ಪ್ರಯುಕ್ತ ಅವರ ಜನ್ಮಸ್ಥಳ ಮಾಹೋದಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ 'ಜೈ ಬಾಪು-ಜೈ ಭೀಮ್-ಜೈ ಸಂವಿಧಾನ್' ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ದೇಶದಲ್ಲಿ ಕೆಲವು ಸಂವಿಧಾನ ವಿರೋಧಿ ಶಕ್ತಿಗಳಿದ್ದು, ಯಾವಾಗಲು ಅದನ್ನು ದುರ್ಬಲಗೊಳಿಸುತ್ತಾ ಬಂದಿವೆ ಎಂದು ಕಿಡಿಕಾರಿದರು.
ಭಾರತೀಯ ಸಂವಿಧಾನವು ಕೇವಲ ಒಂದು ಪುಸ್ತಕವಲ್ಲ, ಅದು ಸಾವಿರಾರು ವರ್ಷಗಳ ಭಾರತೀಯರ ಚಿಂತನೆಯನ್ನು ಒಳಗೊಂಡ ಜ್ಞಾನ ಭಂಡಾರ. ಭಾರತದಲ್ಲಿ ಸದ್ಯ ಸಿದ್ಧಾಂತದ ಯುದ್ಧ ನಡೆಯುತ್ತಿದೆ. ಸಂವಿಧಾನದಲ್ಲಿ ನಂಬಿಕೆ ಇಡುವ ಮತ್ತು ಅದಕ್ಕಾಗಿ ಹೋರಾಡುವ ಕಾಂಗ್ರೆಸ್ ಪಕ್ಷ ಒಂದೆಡೆ ಇದ್ದರೆ, ಮತ್ತೊಂದೆಡೆ, ಭಾರತೀಯ ಸಂವಿಧಾನ, ಬಿ. ಆರ್. ಅಂಬೇಡ್ಕರ್ ಮತ್ತು ಮಹಾತ್ಮ ಗಾಂಧಿಯವರ ಸಂವಿಧಾನವನ್ನು ವಿರೋಧಿಸುವ ಶಕ್ತಿಗಳಿವೆ. ಆದ್ರೆ ಸಂವಿಧಾನದಲ್ಲಿ ಭಾರತದ ಮಹಾನ್ ವ್ಯಕ್ತಿಗಳ ಧ್ವನಿ ಮತ್ತು ಚಿಂತನೆ ಅಡಗಿದೆ ಎಂದು ಅವರು ಹೇಳಿದರು.
ಭಾರತಕ್ಕೆ ನಿಜವಾದ ಸ್ವಾತಂತ್ರ್ಯ 1947 ರಲ್ಲಿ ಸಿಕ್ಕಿಲ್ಲ, ರಾಮ ಮಂದಿರ ಪ್ರತಿಷ್ಠಾಪನಾ ದಿನದಂದು ಸಿಕ್ಕಿತು ಎಂಬ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ರಾಹುಲ್ ಗಾಂಧಿ, ಆಗಸ್ಟ್ 15, 1947ರಂದು ಭಾರತದ ಸ್ವಾತಂತ್ರ್ಯದಲ್ಲಿ ಭಾಗವತ್ ಅವರಿಗೆ ನಂಬಿಕೆ ಇಲ್ಲವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ನಂತರವೇ ನಿಜವಾದ ಸ್ವಾತಂತ್ರ್ಯ ಸಿಕ್ಕಿತೆಂದು ಹೇಳುತ್ತಿದ್ದಾರೆ ಎಂದರು.