image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಪ್ರಿಯಾಂಕ್ ಖರ್ಗೆ ಅವರ ರಾಜೀನಾಮೆ ಪಡೆದುಕೊಳ್ಳುವುದಕ್ಕೆ ಸಿದ್ದರಾಮಯ್ಯ ಮತ್ತು ಡಿಕೆಶಿಯವರಿಗೆ ಬ್ಯಾಟರಿ ಇಲ್ಲ - ಶಾಸಕ ಕಾಮತ್

ಪ್ರಿಯಾಂಕ್ ಖರ್ಗೆ ಅವರ ರಾಜೀನಾಮೆ ಪಡೆದುಕೊಳ್ಳುವುದಕ್ಕೆ ಸಿದ್ದರಾಮಯ್ಯ ಮತ್ತು ಡಿಕೆಶಿಯವರಿಗೆ ಬ್ಯಾಟರಿ ಇಲ್ಲ - ಶಾಸಕ ಕಾಮತ್

ಮಂಗಳೂರು: ಪ್ರಿಯಾಂಕ್ ಖರ್ಗೆ ಅವರ ರಾಜೀನಾಮೆ ಪಡೆದುಕೊಳ್ಳುವುದಕ್ಕೆ ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಅವರಿಗೆ ಬ್ಯಾಟರಿ ಇಲ್ಲ ಎಂದು ಮಂಗಳೂರು ದಕ್ಷಿಣದ  ಶಾಸಕ ವೇದವ್ಯಾಸ ಕಾಮತ್ ವ್ಯಂಗ್ಯವಾಡಿದ್ದಾರೆ. ಅವರು ನಗರದ ಅಟಲ್ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ಗುತ್ತಿಗೆದಾರರು ಅತ್ಯಂತ ಆತಂಕದ ಸ್ಥಿತಿ ಎದುರಿಸುತ್ತಿದ್ದಾರೆ. ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ನಲುಗಿ ಹೋಗಿದ್ದಾರೆ.  ಸಾಲದಕ್ಕೆ ಸರ್ಕಾರದ ಕೃಪಾಕಟಾಕ್ಷ ಹೊಂದಿರುವ ಪ್ರಭಾವಿ ಕಾಂಗ್ರೆಸ್ ನಾಯಕರುಗಳ, ಆಪ್ತರ ಕಿರುಕುಳ, ಬೆದರಿಕೆಗೆ ಮಣಿದು  ಉಸಿರುಗಟ್ಟಿಸುವಂತಹ ವಾತಾವರಣದಲ್ಲಿ ಬದುಕಲಾಗದೇ ಹಲವರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಇದಕ್ಕೆ ಮತ್ತೊಂದು ಉದಾಹರಣೆಯಾಗಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಆಪ್ತರ ಕಿರುಕುಳಕ್ಕೆ ಹೆದರಿ ಡೆತ್‌ನೋಟ್ ಬರೆದಿಟ್ಟು  ಆತ್ಮಹತ್ಯೆ ಮಾಡಿಕೊಂಡ ಬೀದರ್ ನ ಗುತ್ತಿಗೆದಾರ ಸಚಿನ್ ಪಂಚಾಳ್ ಪ್ರಕರಣವೇ ಸಾಕ್ಷಿ.

ಗುತ್ತಿಗೆದಾರ ಸಚಿನ್ ಅವರು 7 ಪುಟಗಳ ಡೆತ್ ನೋಟ್ ಬರೆದು ಅದನ್ನು ಸಾಮಾಜಿಕ ಜಾಲತಾಣದಲ್ಲೂ ಹಾಕಿದ್ದಾರೆ. ಅದರಲ್ಲಿ ಪ್ರಿಯಾಂಕ್ ಖರ್ಗೆ ಅವರ ಅಪ್ತ ದುಷ್ಟ ಕೂಟದ ಸದಸ್ಯರು ತನಗೆ ಮಾಡಿದ ಮಹಾ ಮೋಸ, ನೀಡಿದ ಚಿತ್ರಹಿಂಸೆ, ಅಲ್ಲದೇ ಸನಾತನ ಧರ್ಮ ರಕ್ಷಣೆಗೆ ಬದುಕು ಮೀಸಲಿಟ್ಟಿರುವ ಅಂದೋಲ ಸ್ವಾಮೀಜಿ, ಬಿಜೆಪಿ ಮುಖಂಡ ಚಂದು ಪಾಟೀಲ, ಬಿಜೆಪಿ ಶಾಸಕ ಬಸವರಾಜ ಮತ್ತಿಮೂಡ ಸೇರಿದಂತೆ ಹಲವು ಹಿಂದೂ ನಾಯಕರನ್ನು ಸುಪಾರಿ ಕೊಟ್ಟು ಹತ್ಯೆ ಮಾಡುವ ಸಂಚಿನ ಬಗ್ಗೆಯೂ ಉಲ್ಲೇಖಿಸಿದ್ದಾರೆ. ಸಾಯುವ ಅಂತಿಮ ಕ್ಷಣದಲ್ಲಿ ಇಂತಹ ವಿಷಯದಲ್ಲಿ ಯಾವ ವ್ಯಕ್ತಿಯೂ ಸುಳ್ಳು ಹೇಳಲು ಸಾಧ್ಯವೇ? ಇದೊಂದು ಅತ್ಯಂತ ಅತಂಕಕಾರಿ ವಿಷಯವಾಗಿದ್ದು ಎಲ್ಲಾ ಆರೋಪಗಳು ಸಚಿವ ಪ್ರಿಯಾಂಕ್ ಖರ್ಗೆಯವರ ಸುತ್ತವೇ ಗಿರಕಿ ಹೊಡೆಯುತ್ತಿದ್ದು ಈ ಕೂಡಲೇ ನೈತಿಕ ಹೊಣೆ ಹೊತ್ತು ಪ್ರಿಯಾಂಕ ಖರ್ಗೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸುತ್ತೇನೆ ಎಂದರು. 

ಬಿಜೆಪಿಯವರು ಎಷ್ಟು ಬೇಕಾದರೂ ಹೋರಾಟ ಮಾಡಿಕೊಳ್ಳಲಿ ನಾನು ರಾಜೀನಾಮೆ ಕೊಡುವುದಿಲ್ಲ, ಎಂದು ಹಠ ಹಿಡಿದಿರುವ ಸಚಿವ ಪ್ರಿಯಾಂಕ್ ಖರ್ಗೆ ಅವರು ನನ್ನ ರಾಜೀನಾಮೆ ಕೇಳಿದರೆ ಎಚ್ಚರಿಕೆ ಎಂಬ ಸಂದೇಶವನ್ನು ಸಿಎಂ ಸಿದ್ದರಾಮಯ್ಯನವರಿಗೆ ಪರೋಕ್ಷವಾಗಿ ರವಾನಿಸಿದ್ದಾರೆ. ಅಲ್ಲದೇ ಈ ಪ್ರಕರಣದ ಕುರಿತಂತೆ ಸಿಐಡಿ ತನಿಖೆ ಸಾಕು, ಬೇರಾವುದೇ ತನಿಖೆಯೂ ಬೇಡ ಎಂಬಂತೆ ಈಗಲೇ ವ್ಯವಸ್ಥಿತವಾಗಿ ಎಲ್ಲಾ ಸಿದ್ಧತೆಗಳನ್ನು ತಮ್ಮದೇ ಸರ್ಕಾರಕ್ಕೆ ಒತ್ತಡ ಹಾಕುವ ಮೂಲಕ ಮಾಡಿಕೊಳ್ಳುತ್ತಿದ್ದಾರೆ. ಈ ಹಿಂದೆ ವಾಲ್ಮೀಕಿ ಹಗರಣದಲ್ಲಿ ಸಿಲುಕಿದ್ದ ಸಚಿವ ಬಿ.ನಾಗೇಂದ್ರ ಅವರ ರಾಜೀನಾಮೆಯನ್ನು ಕೂಡಲೇ ಪಡೆದುಕೊಂಡಿದ್ದ ಸಿದ್ದರಾಮಯ್ಯನವರಿಗೆ ಪ್ರಿಯಾಂಕ ಖರ್ಗೆ ಅವರ ರಾಜೀನಾಮೆ ಪಡೆದುಕೊಳ್ಳಲು ಧೈರ್ಯವಿಲ್ಲವೇ ಎಂದು ಪ್ರಶ್ನಿಸಿದರು. ರಾಜೀನಾಮೆ ಬಿಡಿ, ಈ ಪ್ರಕರಣದ ವಿರುದ್ಧ ಒಂದೇ ಒಂದು ಪದ ಮಾತನಾಡಿದರೂ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರು ಕೋಪಗೊಂಡು ತಮ್ಮ ಕುರ್ಚಿಗೆ ಕಂಟಕ ಬರುವ ಭಯ ಅವರನ್ನು ಕಾಡುತ್ತಿರಬಹುದು.

ಈ ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ಕೆ.ಎಸ್ ಈಶ್ವರಪ್ಪನವರ ಪ್ರಕರಣ ಸೇರಿದಂತೆ ಸಣ್ಣಪುಟ್ಟ ವಿಷಯಕ್ಕೂ ಸಿದ್ದರಾಮಯ್ಯ ಆದಿಯಾಗಿ, ಪ್ರಿಯಾಂಕ ಖರ್ಗೆ ಸಹಿತ ಕಾಂಗ್ರೆಸ್‌ ನಾಯಕರು ಬೀದಿ ಬೀದಿಯಲ್ಲಿ ರಾಜೀನಾಮೆ ಕೊಡಿ ಎಂದು ಆರ್ಭಟಿಸುತ್ತಿದ್ದರು. ಈಗ ಅವರ ಸರ್ಕಾರವೇ ಆರೋಪಿ ಸ್ಥಾನದಲ್ಲಿರುವಾಗ ಎಲ್ಲರೂ ಮೌನ ವಹಿಸಿದ್ದಾರೆ. ಸರ್ಕಾರಿ ಅಧಿಕಾರಿಗಳು, ಗುತ್ತಿಗೆದಾರರು, ಅಮಾಯಕರು ಸರ್ಕಾರದ ಕಾರಣದಿಂದಲೇ ಸಾಯುತ್ತಿದ್ದರೂ ಭಂಡ ಕಾಂಗ್ರೆಸ್‌ ಸರಕಾರ ಮಾತ್ರ ಕಿಂಚಿತ್ತೂ ಮಾನ, ಮರ್ಯಾದೆ ಇಲ್ಲದಂತೆ ವರ್ತಿಸುತ್ತಿದೆ.  ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆಯವರ ಅಟ್ಟಹಾಸ ಮಿತಿ ಮೀರಿದ್ದು ಅಲ್ಲಿ ಅನ್ಯಾಯದ ನಡೆಯುತ್ತಿದೆ ಎಂದು ನೊಂದ ಕುಟುಂಬದವರೇ ಹೇಳುತ್ತಿದ್ದಾರೆ. ಪೊಲೀಸರನ್ನು ತಮ್ಮ ಹದ್ದಿಲ್ಲಿಟ್ಟುಕೊಂಡು ತಮ್ಮದೇ ಆಡಳಿತ ನಡೆಸುತ್ತಿರುವ ಅವರು, ಪುಡಿ ರೌಡಿಗಳನ್ನು ಸಹ ಸಾಕಿಕೊಂಡ ಅಲ್ಲಿ ಒಂದು ರೀತಿಯ ಭಯಭೀತ ವಾತಾವರಣ ಸೃಷ್ಟಿಸಿದ್ದಾರೆ.ಆದರೆ ಒಬ್ಬ ಅಮಾಯಕನ ಸಾವನ್ನು ಬಿಜೆಪಿ ಇಷ್ಟಕ್ಕೇ ಬಿಡುವ ಪ್ರಶ್ನೆಯೇ ಇಲ್ಲ. ಸರ್ಕಾರ ಕೂಡಲೇ ಈ ಪ್ರಕರಣವನ್ನು ಗಂಭೀರವಣಿಸಿ ಸಚಿವ ಪ್ರಿಯಾಂಕ ಖರ್ಗೆಯವರನ್ನು ಬಂಧಿಸಬೇಕು ಮತ್ತು ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು  ಆಗ್ರಹಿಸಿದರು.

Category
ಕರಾವಳಿ ತರಂಗಿಣಿ