image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಸುರತ್ಕಲ್ ರೈಲ್ವೇ ಬ್ರಿಡ್ಜ್ ರಸ್ತೆ ಸರಿಪಡಿಸದಿದ್ದರೆ ಡಿ.16ಕ್ಕೆ ರಸ್ತೆ ತಡೆ: ಎಸ್ ಡಿಪಿಐ ಎಚ್ಚರಿಕೆ

ಸುರತ್ಕಲ್ ರೈಲ್ವೇ ಬ್ರಿಡ್ಜ್ ರಸ್ತೆ ಸರಿಪಡಿಸದಿದ್ದರೆ ಡಿ.16ಕ್ಕೆ ರಸ್ತೆ ತಡೆ: ಎಸ್ ಡಿಪಿಐ ಎಚ್ಚರಿಕೆ

ಸುರತ್ಕಲ್: “ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು ಸಂಪೂರ್ಣ ನಿಂತಿವೆ. ಇಲ್ಲಿನ ರೈಲ್ವೇ ಮೇಲ್ಸೇತುವೆ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಹೊಂಡ ಗುಂಡಿಗಳಿಂದ ವಾಹನ ಸವಾರರು ಸಂಚಾರ ನಡೆಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ತಕ್ಷಣವೇ ರಸ್ತೆ ಅಭಿವೃದ್ಧಿಗೆ ಸಂಬಂಧಪಟ್ಟ ಇಲಾಖೆ, ನಗರಪಾಲಿಕೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ವಿವಿಧ ಸಂಘಟನೆಗಳು, ರಿಕ್ಷಾ ಕಾರ್ ಚಾಲಕರ ಸಹಕಾರದೊಂದಿಗೆ ಡಿ.16ರಂದು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಲಿದ್ದೇವೆ“ ಎಂದು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಎಸ್ ಡಿಪಿಐ ಮುಖಂಡ ಯಾಸಿನ್ ಅರ್ಕುಳ ಪತ್ರಿಕಾಗೋಷ್ಟಿಯಲ್ಲಿ ಎಚ್ಚರಿಕೆ ನೀಡಿದರು. 

”ಮಂಗಳೂರು ಉತ್ತರ ಕ್ಷೇತ್ರದಲ್ಲಿ ಮೊಯಿದೀನ್ ಬಾವ ಶಾಸಕರಾಗಿದ್ದ ಕಾಲದಲ್ಲಿ ನಿವೇಶನ ರಹಿತ ಬಡವರಿಗೆ ಮನೆ ನೀಡುವ ಯೋಜನೆ ಆರಂಭವಾಗಿತ್ತು. ಆದರೆ ಕಳೆದ 7 ವರ್ಷಗಳಿಂದ ಕಾಮಗಾರಿ ಬಾಕಿಯಾಗಿದ್ದು 200 ಮನೆಗಳ ಕೆಲಸ ಪೂರ್ತಿಯಾಗಿದ್ದರೂ ಅರ್ಜಿ ಸಲ್ಲಿಸಿದವರಿಗೆ ನೀಡಿಲ್ಲ. ಅವರಿಂದ 30000 ರೂ. ಹಣ ಪಡೆದಿದ್ದಾರೆ. ನಿವೇಶನ ರಹಿತರಿಗೆ ಕೊಡಬೇಕಾದ ಮನೆ ಅರ್ಧಕ್ಕೆ ನಿಂತಿದ್ದು ಈಗ ಮತ್ತೆ ಜಾಗ ಹುಡುಕುತ್ತಿದ್ದಾರೆ ಇದರ ಔಚಿತ್ಯ ಏನಿದೆ? ಇದೊಂದು ದೊಡ್ಡ ಸ್ಕ್ಯಾಮ್ ಆಗಿದ್ದು ಇದರ ಬಗ್ಗೆ ಕ್ಷೇತ್ರದ ಜನತೆ ತಿಳಿಯಬೇಕು”. 

”ಮಹಾನಗರ ಪಾಲಿಕೆ ಬಿಜೆಪಿ ಕೈಯಲ್ಲಿದೆ. ವಿರೋಧ ಪಕ್ಷ ನಗರ ಪಾಲಿಕೆಯ ಹೊರಗಡೆ ಬಂದು ಪ್ರತಿಭಟನೆ ಮಾಡುವಷ್ಟು ಶಕ್ತಿಯನ್ನು ಹೊಂದಿಲ್ಲ. ಆಡಳಿತ ಮತ್ತು ವಿರೋಧ ಪಕ್ಷ ಜೊತೆಯಾಗಿ ಪಾಲಿಕೆಯಲ್ಲಿ ಆಳ್ವಿಕೆ ಮಾಡುತ್ತಿರುವ ಶಂಕೆ ಜನಸಾಮಾನ್ಯರಲ್ಲಿದೆ“ ಎಂದವರು ಹೇಳಿದರು. 

”ಮಂಗಳೂರು ಉತ್ತರ ಕ್ಷೇತ್ರದಲ್ಲಿ ಯುಜಿಡಿ ಸಮಸ್ಯೆ ಹಾಗೆಯೇ ಇದೆ. 7 ವರ್ಷಗಳ ಹಿಂದೆ ಮೊಯಿದೀನ್ ಬಾವಾ ಶಾಸಕರಾಗಿದ್ದಾಗ ಈ ಸಮಸ್ಯೆ ಇತ್ತು ಆದರೆ ಈಗಿನ ಶಾಸಕರು ಆರಿಸಿ ಬಂದಮೇಲೆ ಅವರಿಗೆ ಸಮಸ್ಯೆ ಇದೆ ಅನ್ನುವುದೇ ಮರೆತು ಹೋಗಿದೆ. ಯಾವುದೇ ರೀತಿಯಲ್ಲಿ ಇಲ್ಲಿ ಅಭಿವೃದ್ಧಿ ನಡೆಯುತ್ತಿಲ್ಲ. ಸುರತ್ಕಲ್ ಮಾರ್ಕೆಟ್ ಬಿಜೆಪಿ ಪ್ರಣಾಳಿಕೆಯಲ್ಲಿ ಇದ್ದರೂ 7 ವರ್ಷಗಳಲ್ಲಿ ಒಂದು ಕಲ್ಲನ್ನು ಕಟ್ಟುವುದು ಕೂಡ ಸಾಧ್ಯವಾಗಿಲ್ಲ. ಅಲ್ಲಿ ಸೊಳ್ಳೆ ಉತ್ಪತ್ತಿ ತಾಣವಾಗಿ ಮಾರ್ಪಟ್ಟಿದೆ. ಮಲ್ಲೂರು, ಅಡ್ಯಾರ್ ಭಾಗದಲ್ಲಿ ಯಾವುದೇ ಕೆಲಸ ನಡೆಯುತ್ತಿಲ್ಲ. ಇಲ್ಲಿ ಹೊರರಾಜ್ಯದ ಬಹಳಷ್ಟು ಕಾರ್ಮಿಕರು ದುಡಿಯುತ್ತಿದ್ದಾರೆ. ಅಸಂಖ್ಯ ಕಂಪೆನಿಗಳು ಇಲ್ಲಿವೆ. ಆದರೆ ಇಲ್ಲಿ ಸುಸಜ್ಜಿತ ಆಸ್ಪತ್ರೆ ಇಲ್ಲ. ಕಾರ್ಮಿಕರು ಗಾಯಗೊಂಡರೆ ತುರ್ತು ಸಂದರ್ಭದಲ್ಲಿ ಅವರನ್ನು ಮಂಗಳೂರಿಗೆ ಕರೆದೊಯ್ಯಬೇಕಾಗುತ್ತದೆ. ಆದ್ದರಿಂದ ಇಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಆಗಬೇಕು“ ಎಂದು ಒತ್ತಾಯಿಸಿದರು. 

ಪತ್ರಿಕಾಗೋಷ್ಟಿಯಲ್ಲಿ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಉಸ್ಮಾನ್ ಗುರುಪುರ, ಅರಾಫತ್, ಸಂಶುದ್ದಿನ್ ಕೃಷ್ಣಾಪುರ, ಬಶೀರ್ ಕಾಲೋನಿ ಮತ್ತಿತರರು ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ