ಚಾಮರಾಜನಗರ: ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರ ಉಚಿತ ಪ್ರಯಾಣಕ್ಕೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ರಾಜ್ಯ ಸರ್ಕಾರ 'ಶಕ್ತಿ ಯೋಜನೆ' ಜಾರಿಗೆ ತಂದಿದ್ದು, ಲಕ್ಷಾಂತರ ಮಹಿಳೆಯರು ಪ್ರತಿದಿನ ರಾಜ್ಯಾದ್ಯಂತ ಪ್ರಯಾಣಿಸುತ್ತಿದ್ದಾರೆ. ಇದೀಗ ಪುರುಷರಿಗೂ ಉಚಿತ ಪ್ರಯಾಣ ಅವಕಾಶ ಕಲ್ಪಿಸಬೇಕೆಂಬ ವಿಚಾರಕ್ಕೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿ, 'ಪುರುಷರಿಗೂ ಉಚಿತ ಪ್ರಯಾಣ ಯೋಜನೆ ವಿಸ್ತರಿಸಿದರೆ ಕೆಎಸ್‌ಆರ್‌ಟಿಸಿ ಮುಚ್ಚಬೇಕಾಗುತ್ತೆ' ಎಂದಿದ್ದಾರೆ.
ಚಾಮರಾಜನಗರದ ಯಳಂದೂರು ತಾಲೂಕು ಆಸ್ಪತ್ರೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಮಹಿಳೆಯರು ಶಕ್ತಿ ಯೋಜನೆಯಿಂದ ಹಣ ಉಳಿಸುತ್ತಿದ್ದಾರೆ. ಆ ಹಣದಿಂದ ಬೇರೇನಾದರೂ ಖರೀದಿಸುತ್ತಿದ್ದಾರೆ. ಶಕ್ತಿ ಯೋಜನೆಯಿಂದ ರಾಜ್ಯದ ಮಹಿಳೆಯರಿಗೆ ಅನುಕೂಲವಾಗಿದೆ ಎಂದರು. ಈ ವೇಳೆ ನಮಗೂ ಯಾಕೆ ಫ್ರೀ ಟಿಕೆಟ್ ಕೊಡಬಾರದು ಎಂದು ಸ್ಥಳೀಯ ವ್ಯಕ್ತಿಯೊಬ್ಬರು ಕೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ, 'ಗಂಡಸರಿಗೆ ಬಸ್‌ನಲ್ಲಿ ಫ್ರೀ ಕೊಟ್ರೆ ಕೆಎಸ್ಆರ್‌ಟಿಸಿ ಮುಚ್ಚಬೇಕಾಗುತ್ತೆ' ಎಂದು ಹೇಳಿದರು.