ಮಂಗಳೂರು: ರಾಜ್ಯದ ನಗರ ಪ್ರದೇಶಗಳಲ್ಲಿ ವಾಸಿಸುವ ಬಡವರು, ಆಶ್ರಯರಹಿತರಿಗೆ ವಸತಿ ವ್ಯವಸ್ಥೆ ಕಲ್ಪಿಸುವ ಕೇಂದ್ರ ಸರಕಾರದ ಪ್ರಧಾನ ಮಂತ್ರಿ ಆವಾಸ್ ಯೋಜನೆ-ನಗರ(ಪಿಎಂಎವೈ-ಯು) 2.0 ಅನುಷ್ಠಾನಕ್ಕೆ ರಾಜ್ಯ ಸರಕಾರ ಈವರೆಗೆ ಯಾವುದೇ ಒಪ್ಪಂದ ಮಾಡಿಕೊಂಡಿಲ್ಲ ಎಂದು ಸಂಸದ ಬ್ರಿಜೇಶ್ ಚೌಟ ಆರೋಪಿಸಿದ್ದಾರೆ.
ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ತಾನು ಕೇಳಿದ್ದ ಚುಕ್ಕೆಗುರುತು ಇಲ್ಲದ ಪ್ರಶ್ನೆಗೆ ಕೇಂದ್ರ ವಸತಿ ಸಚಿವ ತೋಖಾನ್ ಸಾಹು ನೀಡಿರುವ ಉತ್ತರದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವು ದೇಶವ್ಯಾಪಿಯಾಗಿ ನಗರ ಪ್ರದೇಶದಲ್ಲಿ ನೆಲೆಸಿರುವ ವಸತಿ ರಹಿತರು, ಕಡುಬಡವರು, ಮಧ್ಯಮವರ್ಗದ ಬಡ ಕುಟುಂಬ ಗಳಿಗೆ ಯೋಗ್ಯ ವಸತಿ ಒದಗಿಸುವ ಉದ್ದೇಶದಿಂದ ಸೆಪ್ಟೆಂಬರ್ 1ರಿಂದ ಪಿಎಂಎವೈ-ಯು 2.0 ಯೋಜನೆ ಅನುಷ್ಠಾನಕ್ಕೆ ತಂದಿದೆ. ಈ ಯೋಜನೆಯ ಜಾರಿ ಮಾರ್ಗಸೂಚಿ, ನಿಯಮಾವಳಿ ಪ್ರಕಾರ ಈವರೆಗೆ ಕೇಂದ್ರಾಡಳಿತ ಪ್ರದೇಶ ಒಳ ಗೊಂಡಂತೆ 29 ರಾಜ್ಯಗಳು ಕೇಂದ್ರದ ಜತೆಗೆ ಒಪ್ಪಂದ ಮಾಡಿಕೊಂಡಿದೆ. ಆದರೆ ರಾಜ್ಯ ಸರಕಾರ ಮಾತ್ರ ಒಪ್ಪಂದ ಮಾಡಿಕೊಂಡಿಲ್ಲ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ