ನವದೆಹಲಿ: ಮುಂದಿನ ವರ್ಷ ನಡೆಯಲಿರುವ ದೆಹಲಿ ವಿಧಾನಸಭಾ ಚುನಾವಣೆಯನ್ನು ಕಾಂಗ್ರೆಸ್ ಏಕಾಂಗಿಯಾಗಿ ಎದುರಿಸಲಿದೆ. ಆಮ್ ಆದ್ಮಿ ಪಕ್ಷ (ಎಎಪಿ)ದೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ದೆಹಲಿ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ದೇವೆಂದರ್ ಯಾದವ್ ಸ್ಪಷ್ಟಪಡಿಸಿದ್ದಾರೆ.
ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯೂಸಿ) ಸಭೆಯಲ್ಲಿ ಭಾಗವಹಿಸಿದ ನಂತರ ಮಾತನಾಡಿದ ಅವರು, ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಎಎಪಿಯೊಂದಿಗೆ ಮೈತ್ರಿ ಮಾಡಿಕೊಳ್ಳದಿದ್ದರೆ, ಒಂದು ಅಥವಾ ಎರಡು ಸ್ಥಾನಗಳನ್ನು ಗೆಲ್ಲಬಹುದಿತ್ತು. ನಾವು ನಡೆಸುತ್ತಿರುವ ನ್ಯಾಯ ಯಾತ್ರೆಯಲ್ಲಿ ಎಎಪಿ ವಿರುದ್ಧ ಭಾರಿ ಜನವಿರೋಧಿ ಅಲೆ ಇರುವುದು ತೋರುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ದೆಹಲಿ ಜನರ ಕೆಂಗಣ್ಣಿಗೆ ನಾವೇಕೆ ಗುರಿಯಾಗಬೇಕು? ಎಂದು ಪ್ರಶ್ನಿಸಿದರು.
ಜಿಲ್ಲಾ ಮಟ್ಟದಲ್ಲಿ ಅಭ್ಯರ್ಥಿಗಳ ಹೆಸರನ್ನು ಶಾರ್ಟ್‌ಲಿಸ್ಟ್ ಮಾಡುವ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದೇವೆ ಮತ್ತು ನಮ್ಮ ನಾಯಕರಿಂದ ಪ್ರತಿಕ್ರಿಯೆಯನ್ನು ತೆಗೆದುಕೊಳ್ಳುತ್ತೇವೆ. ನಾವು ಮೊದಲೇ ಸಿಎಂ ಅಭ್ಯರ್ಥಿಯನ್ನು ಘೋಷಿಸುವುದಿಲ್ಲ. ನಾವು ಎಲ್ಲಾ 70 ಸ್ಥಾನಗಳಲ್ಲಿ ಸ್ಪರ್ಧಿಸುತ್ತೇವೆ. ನಾವು ಗೆದ್ದ ನಂತರ ನಮ್ಮ ನಾಯಕನನ್ನು ಆಯ್ಕೆ ಮಾಡುತ್ತೇವೆ. ಅದೇ ವಿಧಾನವನ್ನು ದೆಹಲಿಯಲ್ಲಿ ಅಳವಡಿಸಿಕೊಳ್ಳಲಾಗುವುದು ಎಂದರು.