image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಉಪಚುನಾವಣೆ ಫಲಿತಾಂಶ 2028ರ ಚುನಾವಣೆಗೆ ರಾಜ್ಯದ ಜನರ ಮುನ್ನುಡಿ: ಡಿಸಿಎಂ ಡಿ.ಕೆ.ಶಿ

ಉಪಚುನಾವಣೆ ಫಲಿತಾಂಶ 2028ರ ಚುನಾವಣೆಗೆ ರಾಜ್ಯದ ಜನರ ಮುನ್ನುಡಿ: ಡಿಸಿಎಂ ಡಿ.ಕೆ.ಶಿ

ಬೆಂಗಳೂರು: ''ಕರ್ನಾಟಕ ರಾಜ್ಯದ ಮಹಾಜನತೆ ಇಂದು 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ ಕೊಟ್ಟಿದ್ದಾರೆ. ವಿರೋಧ ಪಕ್ಷಗಳ ಸುಳ್ಳು, ಟೀಕೆ, ಅಪಪ್ರಚಾರಕ್ಕೆ ಮತದಾರರು ತಕ್ಕ ಪಾಠ ಕಲಿಸಿದ್ದಾರೆ. ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಜಾರಿಯಾದ ಗ್ಯಾರಂಟಿ ಯೋಜನೆಗಳು ಹಾಗೂ ಅಭಿವೃದ್ಧಿಗೆ ಜಯ ಸಿಕ್ಕಿದೆ'' ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.

ಕೆಪಿಸಿಸಿ ಕಚೇರಿಯಲ್ಲಿ ಉಪಚುನಾವಣೆ ಫಲಿತಾಂಶ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳ ಅಭೂತಪೂರ್ವ ಗೆಲುವಿನ ಬಗ್ಗೆ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ''ಈ ಉಪಚುನಾವಣೆಗಳ ಫಲಿತಾಂಶದ ಬಗ್ಗೆ ಮಾಧ್ಯಮಗಳು ನಡೆಸಿದ್ದ ಚುನಾವಣೋತ್ತರ ಸಮೀಕ್ಷೆಗಳು ಸುಳ್ಳಾಗುತ್ತವೆ ಎಂದು ನಿನ್ನೆಯೇ ಹೇಳಿದ್ದೆ. ಕೆಲವು ಕ್ಷೇತ್ರದ ಸೋಲು, ಗೆಲುವು ನನ್ನದೇ ಎಂದು ಹೇಳಿದ್ದೆ. ಮೂರು ಉಪಚುನಾವಣೆಗಳ ಫಲಿತಾಂಶ ಬಂದಿದೆ. ವಿರೋಧ ಪಕ್ಷಗಳು ಟೀಕೆ, ಅಪಪ್ರಚಾರ ಮಾಡುವುದು ನಿಲ್ಲಿಸಬೇಕು. ಭಾವನೆ ಮೇಲೆ ರಾಜಕಾರಣ ನಡೆಯೋದಿಲ್ಲ, ಬದುಕಿನ ಮೇಲಿನ ರಾಜಕಾರಣಕ್ಕೆ ಒತ್ತು ನೀಡುವಂತೆ ನಮ್ಮ ಜನರೇ ಸಂದೇಶ ನೀಡಿದ್ದಾರೆ'' ಎಂದರು.

''ವಿರೋಧ ಪಕ್ಷಗಳ ನಾಯಕರು ರಾಜ್ಯದಲ್ಲಿ ಐದು ಗ್ಯಾರಂಟಿ ಯೋಜನೆಗಳ ಮೇಲೆ ದೊಡ್ಡ ಚರ್ಚೆ ಮಾಡುತ್ತಿದ್ದರು, ಅಭಿವೃದ್ಧಿಗೆ ಹಣವಿಲ್ಲ ಎಂದರು. ಈ ಗ್ಯಾರಂಟಿ ಯೋಜನೆಗಳಿಗಾಗಿ 56 ಸಾವಿರ ಕೋಟಿ ರೂ. ಮೀಸಲಿಟ್ಟಿದ್ದು, 224 ಕ್ಷೇತ್ರಗಳಿಗೆ ಈ ಹಣ ಹಂಚಿದರೆ ಪ್ರತಿ ಕ್ಷೇತ್ರಕ್ಕೆ ಸರಾಸರಿ 250 ಕೋಟಿ ಪ್ರತಿ ವರ್ಷ ನೀಡಲಾಗುತ್ತಿದೆ. ಇದು ಅಭಿವೃದ್ಧಿ, ಜನರ ಬದುಕಿಗಾಗಿ ನೀಡುತ್ತಿರುವ ಹಣವಲ್ಲವೇ? ಬಡ ಮತ್ತು ಮಧ್ಯಮದ ವರ್ಗದ ಜನರಿಗೆ ಆರ್ಥಿಕ ಶಕ್ತಿ ಸಿಕ್ಕಿಲ್ಲವೇ? ಈ ಯೋಜನೆ ಜಾರಿಯಲ್ಲಿ ಯಾವುದಾದರೂ ಅಕ್ರಮ ನಡೆದಿದೆಯೇ? ಇದೆಲ್ಲವನ್ನು ಅರಿತು ಜನರೇ ತೀರ್ಪು ನೀಡಿದ್ದಾರೆ'' ಎಂದು ತಿಳಿಸಿದರು.

''ಚನ್ನಪಟ್ಟಣದ ಫಲಿತಾಂಶವನ್ನು ನಿಖಿಲ್ ಕುಮಾರಸ್ವಾಮಿ ಅವರ ಸೋಲು ಎಂದು ನಾನು ಹೇಳುವುದಿಲ್ಲ. ಅವರ ತಂದೆ ಕುಮಾರಸ್ವಾಮಿ ಅವರು ಆ ಕ್ಷೇತ್ರದಿಂದ ಮುಖ್ಯಮಂತ್ರಿಯಾಗಿದ್ದರು. ಅವರು ಆ ಕ್ಷೇತ್ರದಲ್ಲಿ ಬಿಟ್ಟು ಹೋದ ಗುರುತಿಗೆ ಜನ ತೀರ್ಪು ನೀಡಿದ್ದಾರೆ. ಶಿಗ್ಗಾಂವಿಯಲ್ಲಿ ಬಸವರಾಜ ಬೊಮ್ಮಾಯಿ ಅವರ ಪುತ್ರ ಭರತ್ ಬೊಮ್ಮಾಯಿ ಸೋಲು ಎಂದು ಹೇಳುವುದಿಲ್ಲ. ಮುಖ್ಯಮಂತ್ರಿಯಾಗಿ ಅವರು ಆ ಕ್ಷೇತ್ರದಲ್ಲಿ ಮಾಡಿರುವ ಕೆಲಸದ ಮೇಲೆ ಮತ ನೀಡಿದ್ದಾರೆ. ಸಂಡೂರಿನಲ್ಲಿ ಮೊದಲಿನಿಂದ ಕಾಂಗ್ರೆಸ್ ಗೆಲ್ಲುತ್ತಾ ಬಂದಿದೆ. ಈ ಮೂರು ಕ್ಷೇತ್ರಗಳಲ್ಲಿ ಗ್ಯಾರಂಟಿ ಹಾಗೂ ಅಭಿವೃದ್ಧಿಗೆ ಜನ ಮತ ನೀಡಿದ್ದಾರೆ. ವಿರೋಧ ಪಕ್ಷಗಳ ನಾಯಕರ ಟೀಕೆ ನೀವು ಗಮನಿಸಿದ್ದೀರಿ. ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂದು ನಾನು ಈ ಹಿಂದೆ ಹೇಳಿದ್ದೆ. ಇಂದು ಅದು ಸಾಬೀತಾಗಿದೆ'' ಎಂದು ಹೇಳಿದರು.

Category
ಕರಾವಳಿ ತರಂಗಿಣಿ