image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ವಕ್ಫ್​ ತಿದ್ದುಪಡಿ ವಿಧೇಯಕ ಮಂಡನೆಗೆ ಕೇಂದ್ರ ಸಜ್ಜು

ವಕ್ಫ್​ ತಿದ್ದುಪಡಿ ವಿಧೇಯಕ ಮಂಡನೆಗೆ ಕೇಂದ್ರ ಸಜ್ಜು

ನವದೆಹಲಿ: ದೇಶದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿರುವ ವಕ್ಫ್(ತಿದ್ದುಪಡಿ) ವಿಧೇಯಕ-2024 ಇದೇ ತಿಂಗಳ 25ರಿಂದ ಆರಂಭವಾಗಲಿರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಮಂಡನೆಗೆ ಬರಲಿದೆ ಎಂದು ಲೋಕಸಭೆ ಸೆಕ್ರೆಟರಿಯೇಟ್ ಬುಧವಾರ ಬಿಡುಗಡೆ ಮಾಡಿದ ಮಾಹಿತಿಯಲ್ಲಿದೆ.

ಈ ಹಿಂದಿನ ಅಧಿವೇಶನದಲ್ಲಿ ಆಗಸ್ಟ್ 8 ರಂದು ಸದನದ ಮುಂದೆ ಮಂಡಿಸಲಾದ ವಿಧೇಯಕವನ್ನು ಮರುದಿನ ಹೆಚ್ಚಿನ ಅಧ್ಯಯನಕ್ಕಾಗಿ ಜಂಟಿ ಸಂಸದೀಯ ಸಮಿತಿಗೆ (ಜೆಪಿಸಿ) ಕಳುಹಿಸಲಾಗಿತ್ತು. ಜೆಪಿಸಿಯು ಸುದೀರ್ಘ ಚರ್ಚೆ, ಸಭೆ, ಜನರ ಅಭಿಪ್ರಾಯ ಸಂಗ್ರಹಿಸಿದೆ. ಸಮಿತಿಯು ವರದಿಯನ್ನು ಚಳಿಗಾಲದ ಅಧಿವೇಶನದ ಮೊದಲ ವಾರದ ಕೊನೆಯ ದಿನದಂದು ಸಂಸತ್ತಿಗೆ ಸಲ್ಲಿಸುವಂತೆ ಈಗಾಗಲೇ ಸೂಚಿಸಲಾಗಿದೆ. ಹೀಗಾಗಿ ಜಂಟಿ ಸಂಸದೀಯ ಸಮಿತಿಯು ತನ್ನ ವರದಿಯನ್ನು ನವೆಂಬರ್​ 29ರೊಳಗೆ ಸದನದ ಮುಂದೆ ಮಂಡಿಸುವ ಸಾಧ್ಯತೆ ಇದೆ.

ಬಳಿಕ ಉಭಯ ಸದನದಲ್ಲಿ ಇದಕ್ಕೆ ಸಂಬಂಧಿಸಿದ ವಿಧೇಯಕವು ಚರ್ಚೆಗೆ ಬಂದು ಮಂಡನೆಯಾಗಲಿದೆ. ಇದಲ್ಲದೇ, ಕಳೆದ ಆಗಸ್ಟ್​ನಲ್ಲಿ ಮಂಡಿಸಲಾಗಿದ್ದ ವಿಪತ್ತು ನಿರ್ವಹಣೆ-ತಿದ್ದುಪಡಿ ವಿಧೇಯಕ, ರೈಲ್ವೇ ಮಸೂದೆ ಮತ್ತು ಬ್ಯಾಂಕಿಂಗ್ ಕಾನೂನಿನಂತಹ ವಿಧೇಯಕಗಳು ಮತ್ತೆ ಸದನದಲ್ಲಿ ಮಂಡನೆಗೆ ಬರಲಿವೆ ಎಂದು ಸಚಿವಾಲಯ ತಿಳಿಸಿದೆ.

ಮತ್ತೊಂದೆಡೆ, ಜಂಟಿ ಸಂಸದೀಯ ಸಮಿತಿ (ಜೆಪಿಸಿ) ವರದಿಯನ್ನು ಅಂತಿಮಗೊಳಿಸಲಿದೆ. ಅದರ ಭಾಗವಾಗಿ ಬಿಜೆಪಿ ಸಂಸದ ಜಗದಾಂಬಿಕಾ ಪಾಲ್ ನೇತೃತ್ವದ ಸಮಿತಿ ಗುರುವಾರ ಸಭೆ ನಡೆಸಲಿದೆ. ವಕ್ಫ್ ವಿಧೇಯಕದ ವರದಿಯು ಅಂತಿಮವಾಗುವ ಸಾಧ್ಯತೆ ಇದೆ.

Category
ಕರಾವಳಿ ತರಂಗಿಣಿ