ಶಿವಮೊಗ್ಗ: ಒಂದು ಕಡೆ ಸುಡು ಬಿಸಿಲು, ಇನ್ನೊಂದು ಕಡೆ ಕಾರ್ಯಕರ್ತರು ಇಲ್ಲಿಗೆ ಬರಲು ಬಸ್ ಬುಕ್ ಮಾಡಿದರೇ ಬಸ್ ಮಾಲೀಕರನ್ನೇ ಬುಕ್ ಮಾಡಿ ಕಾರ್ಯಕರ್ತರು ಬರುವುದನ್ನು ತಡೆಯುವ ಪ್ರಯತ್ನದ ನಡೆವೆಯೂ ಇಷ್ಟೊಂದು ಸಂಖ್ಯೆಯಲ್ಲಿ ನೀವೆಲ್ಲ ಬಂದಿರುವುದು ನೋಡಿದರೆ ನಿಮ್ಮ ಬೆಂಬಲದಿಂದ ನನಗೆ ಜಯ ಶತ ಸಿದ್ಧ ಎಂದು ಸ್ವತಂತ್ರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಹೇಳಿದರು.
ಶುಕ್ರವಾರ ನಾಮಪತ್ರ ಸಲ್ಲಿಕೆ ಬಳಿಕ ಸೀನಪ್ಪ ಶೆಟ್ಟಿ(ಗೋಪಿ ವೃತ್ತ) ವೃತ್ತದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿ, ಸಾಗರೋಪಾದಿಯಲ್ಲಿ ಬಂದ ನಿಮಗೆ ಸಾಷ್ಟಾಂಗ ನಮಸ್ಕಾರ. ನಿಮ್ಮ ಘೋಷಣೆ ಶಿಕಾರಿಪುರಕ್ಕೆ ಕೇಳಬೇಕು. ನಿಮ್ಮ ಹುಮ್ಮಸ್ಸು ನೋಡುತ್ತಿದ್ದರೆ ರಾಘವೇಂದ್ರ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಸೋಲು ಖಚಿತವಾಗಿದೆ ಎಂದರು.
ನಾನು ಎಂಪಿ ಆಗಬೇಕು ಎನ್ನುವುದಷ್ಟೇ ನನ್ನ ಉದ್ದೇಶ ಅಲ್ಲ. ಅಪ್ಪ-ಮಕ್ಕಳ ಕೈಯಲ್ಲಿರುವ ಬಿಜೆಪಿಯನ್ನು ಕಿತ್ತು ಬಿಸಾಕಿ, ಪಕ್ಷವನ್ನು ಶುದ್ದೀಕರಣ ಮಾಡಬೇಕು. ಇದಕ್ಕಾಗಿ ನಾನು ಸ್ಪರ್ಧೆ ಮಾಡುತ್ತಿದ್ದೇನೆ. ಈ ಚುನಾವಣೆ ನಂತರ ರಾಘವೇಂದ್ರ ಸೋತು ಮನೆಗೆ ಹೋಗುತ್ತಾರೆ. ವಿಜಯೇಂದ್ರ ರಾಜ್ಯಾಧ್ಯಕ್ಷ ಸ್ಥಾನ ಕಳೆದುಕೊಳ್ಳುತ್ತಾರೆ ಎಂದು ಭವಿಷ್ಯ ನುಡಿದರು.
ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರದಿಂದ ಸಾವಿರಾರು ಜನ ಬಂದಿದ್ದೀರಾ, ಇಲ್ಲಿಂದ ಹೋಗುವಾಗ ತೀರ್ಮಾನ ಮಾಡಿ ಅನ್ಯಾಯ ವಿರುದ್ಧ, ಬಿಜೆಪಿ ಸಿದ್ದಾಂತ ಉಳಿವಿಗಾಗಿ ಪ್ರತಿ ಮನೆಗೆ ಹೋಗಿ ನನಗೆ ಮತ ಹಾಕಲು ಹೇಳಿ. ಏ.19ಕ್ಕೆ ನನ್ನ ಸ್ಪರ್ಧೆಯ ಗುರುತು ಬರುತ್ತದೆ. ಈ ಬಾರಿ ಚುನಾವಣೆಯಲ್ಲಿ ನನಗೆ ಗೆಲ್ಲಿಸಿ ಮೋದಿಯವರನ್ನು ಪ್ರಧಾನಿ ಮಾಡಲು ದೆಹಲಿಗೆ ತೆರಳಿ ಕೈ ಎತ್ತಲು ಅವಕಾಶ ಮಾಡಿ ಕೊಡಿ ಎಂದು ಮನವಿ ಮಾಡಿದರು.
ಈಶ್ವರಪ್ಪ ಅವರ ಪುತ್ರ ಕೆ.ಈ.ಕಾಂತೇಶ್ ಮಾತನಾಡಿ, ಯಡಿಯೂರಪ್ಪಗೆ ಇಬ್ಬರು ಮಕ್ಕಳು. ಒಬ್ಬ ಸಂಸದ, ಮತ್ತೊಬ್ಬರು ಶಾಸಕ. ಆದರೆ, ನಾನೇನು ತಪ್ಪು ಮಾಡಿದ್ದೆ. ನನಗೆ ಯಾಕೆ ವಿಷ ಹಾಕಿದ್ರಿ, ನನ್ನ ಏಕೆ ಸಾಯಿಸಿದ್ರಿ. ಈಶ್ವರಪ್ಪ ಕೆಜೆಪಿಗೆ ಹೋಗಲಿಲ್ಲ ಅಂತ ಸೇಡು ತೀರಿಸಿಕೊಂಡ್ರಾ ಎಂದು ಕಿಡಿ ಕಾರಿದರು.
ಜಗದೀಶ್ ಶೆಟ್ಟರ್ ಪಕ್ಷ ಬಿಟ್ಟು ಹೋಗಿ ಸೋತರು. ಮತ್ತೆ ವಾಪಸ್ ಬಂದರು. ಅವರಿಗೆ ಟಿಕೆಟ್ ಕೊಟ್ಟಿದ್ದಾರೆ. ಈಶ್ವರಪ್ಪ ಪಕ್ಷ ಬಿಟ್ಟು ಹೋಗಿಲ್ಲ. ಪಕ್ಷವನ್ನು ತಾಯಿ ಎಂದು ಕರೆಯುತ್ತಾರೆ. ಈ ಬಾರಿ ಈಶ್ವರಪ್ಪರಿಗೆ ಮತ ನೀಡಿ ಹೆಚ್ಚಿನ ಅಂತರದಿಂದ ಅವರನ್ನು ಗೆಲ್ಲಿಸಿಕೊಡಿ ಎಂದು ಮನವಿ ಮಾಡಿದರು.
ಮಾಜಿ ಸಚಿವ ಗೂಳಿಹಟ್ಟಿ ಶೇಖರ್ ಮಾತನಾಡಿ, ಈಶ್ವರಪ್ಪ ಸ್ಪರ್ಧೆ ಬಗ್ಗೆ ಬಿಜೆಪಿಯವರು ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ, ಅವರ ಸ್ಪರ್ಧೆಯ ಉದ್ದೇಶವನ್ನು ನಾನಷ್ಟೇ ಅಲ್ಲ ಬೇರೆ ಬೇರೆ ಪಕ್ಷದ ಕಾರ್ಯಕರ್ತರು ಒಪ್ಪಿ ಅವರಿಗೆ ಬೆಂಬಲ ನೀಡುತ್ತಿದ್ದಾರೆ. ನಾನು ಕೂಡ ಅವರನ್ನು ಬೆಂಬಲಿಸಿ ಕ್ಷೇತ್ರದಲ್ಲಿ ಓಡಾಡಿ ಪ್ರಚಾರ ಮಾಡುತ್ತಿದ್ದೇನೆ ಎಂದರು.
ಈಶ್ವರಪ್ಪರಿಗೆ ಒಂದು ಸಮಾಜ ಅಲ್ಲ. ಎಲ್ಲ ಸಮಾಜದ ಹಿಂದುಗಳು ಬೆಂಬಲ ನೀಡುತ್ತಿದ್ದಾರೆ. ಈ ಬಾರಿ ಈಶ್ವರಪ್ಪ ಅವರನ್ನು ಗೆಲ್ಲಿಸಿ, ಮೋದಿ ಕೈ ಬಲಪಡಿಸಬೇಕಿದೆ. ಹೀಗಾಗಿ ಪ್ರತಿಯೊಬ್ಬ ಕಾರ್ಯಕರ್ತನೂ ಅವರ ಪರ ನಿಂತು ಕೆಲಸ ಮಾಡಬೇಕಿದೆ ಎಂದು ಕರೆ ನೀಡಿದರು.
ಸಭೆಯಲ್ಲಿ ಹಿಂದು ಸಂಘಟನಾ ಮುಖಂಡ ಶ್ರೀಧರ್ ಬಿಜ್ಜೂರ್ , ಪಾಲಿಕೆ ಮಾಜಿ ಸದಸ್ಯರಾದ ವಿಶ್ವಾಸ್, ಆರತಿ ಆ.ಮ.ಪ್ರಕಾಶ್, ಸುವರ್ಣ ಶಂಕರ್ ಸೇರಿದಂತೆ ಹಲವರು ಇದ್ದರು.