ಮಂಗಳೂರು: ವಕ್ಫ್ ಆಸ್ತಿ ವಿಚಾರವಾಗಿ ವಿಪಕ್ಷದಿಂದ ಅನಗತ್ಯ ಗೊಂದಲ ಸೃಷ್ಟಿಯಾಗಿತ್ತಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್. ಪೂಜಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ. ವಕ್ಫ್ ಆಸ್ತಿ ವಿಚಾರ ನಿನ್ನೆ ಮೊನ್ನೆಯದಲ್ಲ. ಬಿಜೆಪಿ ಸರ್ಕಾರದ ಕಾಲದಲ್ಲೂ ನೋಟಿಸ್ ಕೊಟ್ಟಿದ್ದಾರೆ, ಎಲ್ಲಾ ಕಾಲದಲ್ಲಿಯೂ ನೋಟಿಸ್ ನೀಡಲಾಗಿದೆ. ವಕ್ಫ್ ಆಸ್ತಿ ಒತ್ತುವರಿ ತೆರವುಗೊಳಿಸಲು 2019ರಲ್ಲಿ ಬಿಜೆಪಿಯೇ ನೋಟಿಸ್ ಜಾರಿ ಮಾಡಿತ್ತು. ಅವರನ್ನು ಒಕ್ಕಲಿಸುವ ಕಾರ್ಯಕ್ಕೆ ಚಾಲನೆ ನೀಡಿದ್ದೂ ಬಿಜೆಪಿಯೇ. ಈಗ ಇದರ ವಿರುದ್ಧ ಪ್ರತಿಭಟನೆ ನಡೆಸುತ್ತಿರುವುದೂ ಕೂಡ ಬಿಜೆಪಿಯೇ. ಇದೇ ಬಿಜೆಪಿಯ ನಿಜ ಬಣ್ಣ. ಬಸವರಾಜ ಬೊಮ್ಮಾಯಿಯವರು ಮುಖ್ಯಮಂತ್ರಿಯಾಗಿದ್ದಾಗ ಒತ್ತುವರಿಯಾಗಿರುವ ಇಂಚಿಂಚು ವಕ್ಫ್ ಆಸ್ತಿಯನ್ನು ಕಾಪಾಡುವುದಾಗಿ ಹೇಳಿದ್ದರು, ಈಗ ವಿರುದ್ಧವಾಗಿ ಮಾತನಾಡುತ್ತಿದ್ದಾರೆ. ಅವರೇ ಹೇಳಿದ್ದ ಮಾತುಗಳಿಗೆ ರಾಜಕೀಯ ಕಾರಣಕ್ಕಾಗಿ ಉಲ್ಟಾ ಹೊಡೆದಿದ್ದಾರೆ.
ಬಿಜೆಪಿ ಅವಧಿಯಲ್ಲಿ ಸುಮಾರು 216 ಪ್ರಕರಣಗಳಲ್ಲಿ ನೋಟಿಸ್ ಕೊಟ್ಟಿದ್ದರು. ಯಡಿಯೂರಪ್ಪ, ಸದಾನಂದ ಗೌಡ, ಜಗದೀಶ್ ಶೆಟ್ಟರ್, ಎಚ್.ಡಿ.ಕುಮಾರಸ್ವಾಮಿ ಇದ್ದಾಗ ಏಕೆ ನೋಟಿಸ್ ಕೊಟ್ಟಿದ್ದಾರೆ? ಬಿಜೆಪಿಯ ಈ ಡಬ್ಬಲ್ ಗೇಮ್ ವಿಚಾರವನ್ನು ಜನರು ತಿಳಿಯಬೇಕಿದೆ.
ಬಸವರಾಜ ಬೊಮ್ಮಾಯಿಯವರು ಮುಖ್ಯಮಂತ್ರಿ ಆಗಿದ್ದ ಸಂದರ್ಭ ಮುಸ್ಲಿಂ ಮುಖಂಡರ ಸಭೆಯಲ್ಲಿ ಎರಡು ಸಾವಿರ ಎಕರೆ ವಕ್ಫ್ ಆಸ್ತಿಯನ್ನು ಖಾಸಗಿಯವರು ಕಬಳಿಕೆ ಮಾಡಿದ್ದಾರೆ. ಅದನ್ನು ರಕ್ಷಿಸುವ ಜವಾಬ್ಧಾರಿ ಮುಖಂಡರ ಮೇಲಿದೆ ಎನ್ನುವ ಆಡಿಯೋ ವೈರಲ್ ಆಗುತ್ತಿದೆ ಇ ಬಗ್ಗೆ ಬಿಜೆಪಿ ನಾಯಕರು ಪ್ರತಿಕ್ರಿಯಿಸಲಿ.
ದಕ್ಷಿಣ ಕನ್ನಡ ಜಿಲೆಯ ಕೆಲವು ಕಡೆ ಆರ್‌ಟಿಸಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದಾಗಿದೆ ಎಂದು ಫೇಕ್ ಸುದ್ದಿಗಳನ್ನು ಸಾಮಾಜಿಕ ಜಾಲಾತಾಣದಲ್ಲಿ ಹರಿದಾಡುತ್ತಿದೆ. ವಿಪಕ್ಷದ ನಾಯಕರು ಚುನಾವಣಾ ಸಂದರ್ಭದಲ್ಲಿ ಕೇವಲ ರಾಜಕೀಯ ದುರುದ್ದೇಶದಿಂದ ಇಂತಹ ವಿಷಯಗಳನ್ನು ಮುನ್ನಲೆಗೆ ತರುತ್ತಾರೆಯೇ ಹೊರತು ಅಭಿವೃದ್ಧಿ ಬಗ್ಗೆ ಕಿಂಚಿತ್ತೂ ಅವರು ಯೋಚಿಸುವುದಿಲ್ಲ. ಆದರೂ ವಕ್ಫ್ ಬೋರ್ಡ್ ಆಸ್ತಿ ವಿಚಾರವಾಗಿ ರೈತರಿಗೆ ಯಾವುದೇ ನೋಟಿಸ್ ನೀಡದಂತೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಕೊಟ್ಟಿರುವ ನೋಟಿಸನ್ನು ವಾಪಸ್ ಪಡೆಯಲು ಸೂಚಿಸಿದ್ದಾರೆ. ಇದಾಗ್ಯೂ ಈ ಬಗ್ಗೆ ಅನಗತ್ಯ ಗೊಂದಲ ಸೃಷ್ಟಿಸಿ ಪ್ರತಿಭಟನೆ, ಹೋರಾಟ ಮಾಡುತ್ತಿರುವುದು ಕರ್ನಾಟಕದ ಉಪಚುನಾವಣೆ ಮತ್ತು ಮಹಾರಾಷ್ಟ್ರದಲ್ಲಿ ನಡೆಯುವ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಮತದಾರರಲ್ಲಿ ಗೊಂದಲ ಮೂಡಿಸುವ ಯತ್ನ. ವಿಪಕ್ಷ ನಾಯಕರು ಇಂತಹ ಅನಗತ್ಯ ರಾಜಕೀಯ ದುರುದ್ದೇಶ ಹಾಗು ಗೊಂದಲ ಸೃಷ್ಟಿಸುವುದನ್ನು ಬಿಟ್ಟು ರಾಜ್ಯ ಅಭಿವೃದ್ಧಿ ಕಡೆಗೆ ಗಮನ ನೀಡಲಿ.
ರಾಜ್ಯದ ಬಡವರು, ಮಹಿಳೆಯರಿಗೆ ಆರ್ಥಿಕ ಶಕ್ತಿ ನೀಡುವ ಗ್ಯಾರಂಟಿಗಳನ್ನು ಕಾಂಗ್ರೆಸ್ ನೇತೃತ್ವದ ಸರ್ಕಾರ ಜಾರಿಗೆ ತಂದಿದೆ. ಗ್ಯಾರಂಟಿ ಯೋಜನೆಯಿಂದ ರಾಜ್ಯ ದಿವಾಳಿಯಾಗುತ್ತದೆಯೆಂದು ಪ್ರಧಾನಿ ನರೇಂದ್ರ ಮೋದಿಯವರು ಒಂದು ಕಡೆ ಹೇಳಿಕೆ ಕೊಡುತ್ತಿದ್ದಾರೆ. ಇನ್ನೊಂದು ಕಡೆ ಜಾರ್ಖಾಂಡ್ ಚುನಾವಣೆ ಪ್ರಣಾಳಿಕೆಯಲ್ಲಿ ಭರಪೂರ ಗ್ಯಾರಂಟಿಗಳನ್ನು ಬಿಜೆಪಿ ಘೋಷಣೆ ಮಾಡಿದೆ. ಇದು ಯಾವ ನ್ಯಾಯ. ಗ್ಯಾರಂಟಿ ಯೋಜನೆ ಬಳಿಕ ಬಡವರು ಸ್ಥಿತಿವಂತರಾಗಿ ರಾಜ್ಯದ ಆರ್ಥಿಕತೆ ಪ್ರಗತಿಯಾಗುತ್ತಿದೆ. ರಾಜ್ಯ ಮತ್ತಷ್ಟು ಪ್ರಗತಿಯತ್ತ ಸಾಗುತ್ತಿದೆ ಎನ್ನುವ ಸತ್ಯ ತಿಳಿಸುವ ಕಾರ್ಯ ಮಾಡಲಿ ಎಂದವರು ತಿಳಿಸಿದ್ದಾರೆ.