ಶಿಗ್ಗಾವಿ: ಮೋದಿ ಮಹಾನ್ ಸುಳ್ಳುಗಾರ ಎಂದು ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದರು. ಮೋದಿ ಮತ್ತೆ ಪ್ರಧಾನಿ ಆದರೆ ದೇಶ ಬಿಟ್ಟು ಹೋಗ್ತೀನಿ ಎಂದು ದೇವೇಗೌಡರು ಹೇಳಿದ್ದರು. ಈಗ ಇಬ್ಬರೂ ಬಾಯಿ ಬಾಯಿ ಆಗಿದ್ದಾರೆ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ. ಅವರು ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಚಂದಾಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಗೆಲುವಿಗೆ ಪ್ರಚಾರ ಕೈಗೊಂಡು ಮಾತನಾಡಿ, ಯಡಿಯೂರಪ್ಪನವರನ್ನು ಅವರನ್ನು ರಾಜಕೀಯವಾಗಿ ಮುಗಿಸಲು ಬಸವರಾಜ ಬೊಮ್ಮಾಯಿ ಪ್ಲಾನ್ ಮಾಡಿದ್ದರು. ಅದಕ್ಕೇ ಜೊತೆಯಲ್ಲಿದ್ದೇ ಯಡಿಯೂರಪ್ಪ ಅವರಿಗೆ ಟಾಂಗ್ ಕೊಟ್ಟರು ಎಂದು ಕಿಚಾಯಿಸಿದರು.
ಇಲ್ಲಿನ ಬಿಜೆಪಿ ಅಭ್ಯರ್ಥಿ ಅತ್ಯಂತ ಶ್ರೀಮಂತ ಕುಟುಂಬದಿಂದ ಬಂದವರು. ಅವರಿಗೆ ಹಳ್ಳಿ ಬದುಕು ಗೊತ್ತಿಲ್ಲ. ಬಡವರ ಬದುಕು ಗೊತ್ತಿಲ್ಲ. ಆದರೆ ಕಾಂಗ್ರೆಸ್ ಅಭ್ಯರ್ಥಿ ಅತ್ಯಂತ ಸಾಮಾನ್ಯ ಕುಟುಂಬದಿಂದ ಬಂದು ಬಡವರ ಕಷ್ಟ, ಸುಖ ಗೊತ್ತಿರುವವರು. ಇವರನ್ನು ಗೆಲ್ಲಿಸಿ ಕ್ಷೇತ್ರದ ಅಭಿವೃದ್ಧಿಗೆ ಸಹಕಾರಿ ಆಗುತ್ತದೆ.
ನರೇಂದ್ರ ಮೋದಿ ಕುಟುಂಬ ರಾಜಕಾರಣದ ಬಗ್ಗೆ ಭರ್ಜರಿ ಭಾಷಣ ಮಾಡ್ತಾರೆ. ಆದರೆ ಇಲ್ಲಿ ಮಾಜಿ ಮುಖ್ಯಮಂತ್ರಿಯ ಮೊಮ್ಮಗ, ಮಾಜಿ ಮುಖ್ಯಮಂತ್ರಿಯ ಮಗನಿಗೆ ಟಿಕೆಟ್ ನೀಡಿದ್ದಾರೆ. ಇದು ಕುಟುಂಬ ರಾಜಕಾರಣ ಅಲ್ಲವೇ ಮೋದಿ ಯವರೇ? ಎಂದು ಪ್ರಶ್ನಿಸಿದರು.
ನಾನು ನಾಡಿನ ಜನತೆಯ ಪ್ರೀತಿ, ಆಗ್ರಹಗಳಿಗೆ ಬಗ್ಗುತ್ತೇನೆಯೇ ಹೊರತು, ಬಿಜೆಪಿ ಮತ್ತು ದೇವೇಗೌಡರ ಷಡ್ಯಂತ್ರಗಳಿಗೆ ಬಗ್ಗದೂ ಇಲ್ಲ. ಜಗ್ಗದೂ ಇಲ್ಲ. ಎಲ್ಲಿಯವರೆಗೂ ರಾಜ್ಯದ ಜನರ ಆಶೀರ್ವಾದ ಇರುತ್ತದೋ ಅಲ್ಲಿಯವರೆಗೂ ನಾನು ಬಿಜೆಪಿ ಕುತಂತ್ರಗಳಿಗೆ ಬಗ್ಗುವುದಿಲ್ಲ. 40 ವರ್ಷಗಳಿಂದ ನಾನು ಮಂತ್ರಿಯಾಗಿದ್ದೀನಿ. ಮುಖ್ಯಮಂತ್ರಿಯಾಗಿದ್ದೀನಿ. ಸಣ್ಣ ಕಪ್ಪು ಚುಕ್ಕೆ ಕೂಡ ನನ್ನ ಮೇಲಿಲ್ಲ. ಆದರೂ ನನ್ನ ಪತ್ನಿ ಮೇಲೆ ಸುಳ್ಳು ಆರೋಪ ಮಾಡಿ ನನ್ನನ್ನು ತೇಜೋವಧೆ ಮಾಡುತ್ತಿದ್ದಾರೆ. ಕೇವಲ 14 ಸೈಟುಗಳಿಗಾಗಿ ನಾನು ತಪ್ಪು ಮಾಡ್ತೀನಾ? ದುಡ್ಡು ಮಾಡಬೇಕು ಎಂದಿದ್ದರೆ ಬೇಕಾದಷ್ಟು ಮಾಡಬಹುದಿತ್ತು. ಆದರೆ ನನ್ನ ತಪ್ಪುಗಳು ಏನೇನೂ ಇಲ್ಲದ ಕಾರಣದಿಂದ ಸುಳ್ಳು ಆರೋಪ ಹೊರಿಸಿ ಷಡ್ಯಂತ್ರ ಹೆಣೆದು ನನ್ನನ್ನು ಕೆಳಗಿಳಿಸಲು ಯತ್ನಿಸುತ್ತಿದ್ದಾರೆ. ಇದಕ್ಕೆ ನಾಡಿನ ಜನತೆ ಅವಕಾಶ ಕೊಡುವುದಿಲ್ಲ ಎನ್ನುವ ಗ್ಯಾರಂಟಿ ನನಗಿದೆ.
ಚೆಕ್ ನಲ್ಲಿ ಲಂಚ ಪಡೆದ ವಿಜಯೇಂದ್ರ ಈಗ ನನ್ನ ಬಗ್ಗೆ ಮಾತಾಡುತ್ತಿದ್ದಾರೆ. ವಿಜಯೇಂದ್ರ ಹೇಗೆ ದುಡ್ಡು ಹೊಡ್ಕಂಡು ಕೂತಿದ್ದ ಎನ್ನುವುದನ್ನು ಅವರದೇ ಪಕ್ಷದ ಯತ್ನಾಳ್, ರಮೇಶ್ ಜಾರಕಿಹೊಳಿ ಅವರೇ ಹೇಳಿದ್ದಾರೆ ಕೇಳಿ.
ಚೆಕ್ ನಲ್ಲಿ ಲಂಚ ಪಡೆದ ವಿಜಯೇಂದ್ರ ಒಂದು ಕಡೆ, ಲೂಟಿ ರವಿ ಮತ್ತೊಂದು ಕಡೆ ನಮ್ಮ ಸರ್ಕಾರದ ಮೇಲೆ ಆರೋಪ ಮಾಡುತ್ತಿದ್ದಾರೆ. ಇವರ ಯೋಗ್ಯತೆ ನಾಡಿನ ಜನತೆಗೆ ಗೊತ್ತಿದೆ ಎಂದರು.