ಬೆಂಗಳೂರು: ವಕ್ಫ್ ಮಂಡಳಿ ಭೂಮಿ ಕಬಳಿಸುತ್ತಿರುವುದು ರೈತರ ಪಾಲಿಗೆ ಮರಣಶಾಸನವಾಗಿದೆ. ಆದರೆ ಭೂ ಕಬಳಿಕೆಯ ಈ ಆಟ ನಡೆಯಲು ಹಿಂದೂಗಳು ಬಿಡುವುದಿಲ್ಲ. ಕೂಡಲೇ ಕಾಂಗ್ರೆಸ್ ಸರ್ಕಾರವು ವಕ್ಫ್ ಕಾಯ್ದೆಯಲ್ಲಿ ಬದಲಾವಣೆ ತರಲಿ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಆಗ್ರಹಿಸಿದರು.
ವಕ್ಫ್ ಮಂಡಳಿ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಕೆ.ಆರ್. ಪುರದಲ್ಲಿ ಬಿಜೆಪಿಯಿಂದ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಜಮೀನು ಕಬಳಿಸುವ ಮೂಲಕ ಅನ್ನದಾತರ ಕಣ್ಣಲ್ಲಿ ನೀರು ತರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು. ಇವೆಲ್ಲಕ್ಕೂ ಸಚಿವ ಜಮೀರ್ ಅಹ್ಮದ್ ಕಾರಣ. ಹಿಂದೆ ಕೇಂದ್ರದ ಕಾಂಗ್ರೆಸ್ ಸರ್ಕಾರ ಮುಸ್ಲಿಮರನ್ನು ಓಲೈಸಲು ವಕ್ಫ್ ಬೋರ್ಡ್‌ಗೆ ಹೆಚ್ಚು ಅಧಿಕಾರ ನೀಡಿತ್ತು. ಸಿಎಂ ಸಿದ್ದರಾಮಯ್ಯ ಅವರೇ ಭೂಮಿ ಪಡೆಯಿರಿ ಎಂದು ಹೇಳಿದ್ದು, ಈಗ ಇದು ಬಿಜೆಪಿ ಮಾಡುವ ರಾಜಕೀಯ ಎಂದು ಹೇಳಿದ್ದಾರೆ. ಸಿದ್ದರಾಮಯ್ಯನವರು ಈಗ ಟೋಪಿ ತೆಗೆದಿದ್ದಾರೆ. ಬಳಿಕ ಅವರೇ ರೈತರ ತಲೆ ಮೇಲೆ ಟೋಪಿ ಹಾಕುತ್ತಾರೆ. ಮುಸ್ಲಿಮರಿಗೆ 10 ಸಾವಿರ ಕೋಟಿ ರೂ. ನೀಡುತ್ತೇನೆಂದು ಹೇಳಿ ದಲಿತರ ಹಣ ಲೂಟಿ ಮಾಡಿದ್ದಾರೆ. ಕಾಂಗ್ರೆಸ್‌ಗೆ ಹಿಂದೂಗಳು ಮತ ನೀಡಿಲ್ಲವೇ? ಹಿಂದೂಗಳು ಎರಡನೇ ದರ್ಜೆಯ ಪ್ರಜೆಗಳೇ ಎಂದು ಪ್ರಶ್ನಿಸಿದರು.
ಶ್ರೀರಂಗಪಟ್ಟಣದಲ್ಲಿ ನೂರಾರು ವರ್ಷಗಳಿಂದ ಇರುವ ದೇವಸ್ಥಾನವನ್ನು ಖಬರ್‌ಸ್ಥಾನ ಎಂದು ದಾಖಲೆಯಲ್ಲಿ ಬರೆಸಿದ್ದಾರೆ. ಲವ್ ಜಿಹಾದ್ ಮಾಡಿ ಹಿಂದೂ ಹೆಣ್ಣುಮಕ್ಕಳನ್ನು ಮತಾಂತರ ಮಾಡಲಾಗಿದೆ. ಈಗ ಲ್ಯಾಂಡ್ ಜಿಹಾದ್ ಮೂಲಕ ರೈತರ ಜಮೀನು ಪರಿವರ್ತನೆ ಮಾಡುತ್ತಿದ್ದಾರೆ. ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಮಗುವಿನಂತೆ ನಿದ್ರಿಸಿ ಎಂಬ ಘೋಷಣೆಯಂತೆ, ಭಯೋತ್ಪಾದಕರು ಹಾಗೂ ಮೂಲಭೂತವಾದಿಗಳು ಕರ್ನಾಟಕದಲ್ಲಿ ಮಗುವಿನಂತೆ ಆರಾಮಾಗಿ ನಿದ್ರಿಸಬಹುದು. ಭಯೋತ್ಪಾದಕರು ಡಿ.ಕೆ. ಶಿವಕುಮಾರ್ ಅವರ ಸಹೋದರರಾಗಿದ್ದಾರೆ. ಭಯೋತ್ಪಾದನೆ ಮಾಡಿದವರನ್ನು ನಮ್ಮವರು ಎಂದು ಹೇಳುತ್ತಿದ್ದಾರೆ ಎಂದು ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು.
ಸಿಎಂ ಸಿದ್ದರಾಮಯ್ಯನವರು ಬೇಕಿದ್ದರೆ ಎಲ್ಲ ಭೂಮಿಯನ್ನು ವಕ್ಫ್ ಬೋರ್ಡ್‌ಗೆ ಬರೆದುಬಿಡಬಹುದು. ಇವೆಲ್ಲ ದಾನ ಕೊಟ್ಟ ಜಮೀನು ಎಂದು ವಕ್ಫ್ ಮಂಡಳಿ ಹೇಳುತ್ತಿದೆ. ಮುಜರಾಯಿ ಇಲಾಖೆಗೂ ದಾನದಿಂದ ಭೂಮಿ ಬಂದಿದೆ. ಆದರೆ ಅದು ಮಾತ್ರ ಸರ್ಕಾರಿ ಆಸ್ತಿಯಾಗುತ್ತದೆ. ಆದರೆ ವಕ್ಫ್ ಬೋರ್ಡ್‌ಗೆ ದಾನದಿಂದ ಬರುವ ಭೂಮಿ ಮಾತ್ರ ಸರ್ಕಾರಿ ಆಸ್ತಿಯಾಗುವುದಿಲ್ಲ. ಕೂಡಲೇ ಎಚ್ಚೆತ್ತುಕೊಂಡು ಕಾಯ್ದೆಯಲ್ಲಿ ಬದಲಾವಣೆ ಮಾಡಲಿ ಎಂದು ಆಗ್ರಹಿಸಿದರು