image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಕೈಗಾರಿಕೆಗಳಿಗೆ ಭೂಮಿ ಪರಭಾರೆ: 25 ವರ್ಷದ ಮಾಹಿತಿಗೆ ಶ್ವೇತಪತ್ರ ಹೊರಡಿಸಲು ವಾಟಾಳ್ ನಾಗರಾಜ್ ಆಗ್ರಹ

ಕೈಗಾರಿಕೆಗಳಿಗೆ ಭೂಮಿ ಪರಭಾರೆ: 25 ವರ್ಷದ ಮಾಹಿತಿಗೆ ಶ್ವೇತಪತ್ರ ಹೊರಡಿಸಲು ವಾಟಾಳ್ ನಾಗರಾಜ್ ಆಗ್ರಹ

ಮಂಗಳೂರು: ರಾಜ್ಯದಲ್ಲಿ ಕಳೆದ 25 ವರ್ಷಗಳಿಂದ ವಿವಿಧ ಕಂಪನಿಗಳು ಮತ್ತು ಉದ್ಯಮಿಗಳಿಗೆ ಎಷ್ಟು ಎಕರೆ ಭೂಮಿಯನ್ನು, ಯಾವ ದರದಲ್ಲಿ ಮತ್ತು ಯಾವ ಉದ್ದೇಶಕ್ಕೆ ನೀಡಲಾಗಿದೆ ಎಂಬುದರ ಕುರಿತು ಸರ್ಕಾರ ತಕ್ಷಣ ಶ್ವೇತಪತ್ರ  ಹೊರಡಿಸಬೇಕು ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಆಗ್ರಹಿಸಿದ್ದಾರೆ.

ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಜಿಂದಾಲ್ ಸೇರಿದಂತೆ ವಿವಿಧ ಕಂಪನಿಗಳಿಗೆ ಸಾವಿರಾರು ಎಕರೆ ಜಮೀನನ್ನು ಅತ್ಯಂತ ಕಡಿಮೆ ದರಕ್ಕೆ ನೀಡಲಾಗುತ್ತಿದೆ ಎಂದು ಆರೋಪಿಸಿದರು. ಭೂಮಿ ನೀಡುವಾಗ ಕನ್ನಡಿಗರಿಗೆ ಉದ್ಯೋಗ ನೀಡುವ ಷರತ್ತು ವಿಧಿಸಿದರೂ ಅದು ಸಮರ್ಪಕವಾಗಿ ಜಾರಿಯಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. 

ಕಳೆದ 25 ವರ್ಷಗಳಲ್ಲಿ ಯಾವ ಕಂಪನಿಗಳಿಗೆ ಎಷ್ಟು ಎಕರೆ ಭೂಮಿ ನೀಡಲಾಗಿದೆ, ಅಂದಿನ ಮಾರುಕಟ್ಟೆ ದರ ಎಷ್ಟಿತ್ತು, ಈಗಿನ ಮೌಲ್ಯ ಎಷ್ಟು ಮತ್ತು ಯಾವ ದಿನಾಂಕದಂದು ಜಮೀನು ಹಸ್ತಾಂತರಿಸಲಾಗಿದೆ ಎಂಬ ಸಂಪೂರ್ಣ ವಿವರಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು.

ಸರೋಜಿನಿ ಮಹಿಷಿ ವರದಿ ಸೇರಿದಂತೆ ಕನ್ನಡಿಗರಿಗೆ ಉದ್ಯೋಗ ನೀಡುವ ವಿಚಾರದಲ್ಲಿ ಹಿಂದಿನ ಹಾಗೂ ಇಂದಿನ ಸರ್ಕಾರಗಳು ನಿರ್ಲಕ್ಷ್ಯ ವಹಿಸಿವೆ; ಬಹುಪಾಲು ಉದ್ಯೋಗಗಳು ಹೊರಗಿನವರ ಪಾಲಾಗುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು. ಇದೇ ವೇಳೆ, ಬೆಂಗಳೂರಿನಲ್ಲಿ ಹಲವು ದಿನಗಳಿಂದ ಸತ್ಯಾಗ್ರಹ ನಡೆಸುತ್ತಿರುವ ಆಶಾ ಕಾರ್ಯಕರ್ತರ ಬೇಡಿಕೆಗಳ ಕುರಿತು ಮಾತನಾಡಿದ ಅವರು, ಹಿಂದಿನ ಸರ್ಕಾರ ನೀಡಿದ್ದ ಭರವಸೆಗಳನ್ನು ಮುಂದುವರಿಸುವಲ್ಲಿ ಹಾಲಿ ಸರ್ಕಾರ ವಿಫಲವಾಗಿದೆ ಎಂದು ಟೀಕಿಸಿದರು.

Category
ಕರಾವಳಿ ತರಂಗಿಣಿ