image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಜಿ.ಪಂ. ಮೀಸಲಾತಿ ಬದಲಾವಣೆಯಲ್ಲಿ ಪರಿಶಿಷ್ಟ ಜಾತಿ ಮಹಿಳೆಗೆ ಅವಕಾಶ: ಹೊನ್ನಪ್ಪ ಕುಂದರ್ ಆಕ್ರೋಶ

ಜಿ.ಪಂ. ಮೀಸಲಾತಿ ಬದಲಾವಣೆಯಲ್ಲಿ ಪರಿಶಿಷ್ಟ ಜಾತಿ ಮಹಿಳೆಗೆ ಅವಕಾಶ: ಹೊನ್ನಪ್ಪ ಕುಂದರ್ ಆಕ್ರೋಶ

ಮಂಗಳೂರು: 2026-27ನೇ ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಕ್ಷೇತ್ರಗಳ ಮೀಸಲಾತಿ ಪಟ್ಟಿಯಲ್ಲಿ ಸರಪಾಡಿ ಕ್ಷೇತ್ರವನ್ನು ಮತ್ತೆ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಿಟ್ಟಿರುವ ಕ್ರಮಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ಘಟಕದ ಮಾಜಿ ಸಂಚಾಲಕ ಹಾಗೂ ಪ್ರಸ್ತುತ ಕರ್ನಾಟಕ ರಾಜ್ಯ ಭೀಮ್ ಸೇನೆಯ ಜಿಲ್ಲಾಧ್ಯಕ್ಷ ಹೊನ್ನಪ್ಪ ಕುಂದರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿದ್ದ ಸರಪಾಡಿ ಕ್ಷೇತ್ರ ಈ ಬಾರಿ ಪರಿಶಿಷ್ಟ ಜಾತಿ (ಜನರಲ್) ಎಂದು ನಿಗದಿಯಾಗಿತ್ತು. ಚುನಾವಣೆಗೆ ಪೂರ್ವಸಿದ್ಧತೆ ನಡೆಸುತ್ತಿದ್ದ ವೇಳೆಯಲ್ಲೇ ಕೆಲ ಆಕಾಂಕ್ಷಿಗಳ ಒತ್ತಡದ ಹಿನ್ನೆಲೆಯಲ್ಲಿ ಕಾಂಗ್ರೆಸ್ ರಾಜ್ಯಾಧ್ಯಕ್ಷರು ಪುತ್ತೂರಿಗೆ ಬಂದಿದ್ದ ದಿನ ಮಂಗಳೂರು ಸರ್ಕ್ಯೂಟ್ ಹೌಸ್‌ನಲ್ಲಿ ಮತ್ತೆ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾತಿ ಬದಲಾಯಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಜಿಲ್ಲಾ ಪರಿಶಿಷ್ಟ ಜಾತಿ ಘಟಕ ಹಾಗೂ ಬಂಟ್ವಾಳ ಬ್ಲಾಕ್ ಎಸ್.ಸಿ. ಘಟಕದ ಅಧ್ಯಕ್ಷರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಈ ತೀರ್ಮಾನ ಕೈಗೊಂಡಿರುವುದನ್ನು ಬಲವಾಗಿ ಖಂಡಿಸಿದ ಅವರು, ಬಂಟ್ವಾಳ ತಾಲೂಕು ಪಂಚಾಯತ್‌ನ 28 ಸ್ಥಾನಗಳಲ್ಲಿ ಕೇವಲ ಪಿಲಾತಬೆಟ್ಟು ಎಸ್.ಸಿ. ಮಹಿಳೆಗೆ ಮಾತ್ರ ಮೀಸಲಿಟ್ಟು, ಇತರ ಕ್ಷೇತ್ರಗಳಲ್ಲಿ ಎಸ್.ಸಿ. ಜನರಲ್ ನೀಡದೆ ಪುರುಷರಿಗೆ ಅವಕಾಶ ತಪ್ಪಿಸಲಾಗಿದೆ ಎಂದು ದೂರಿದ್ದಾರೆ. 

ಇದು ರಾಹುಲ್ ಗಾಂಧಿಯವರ ಸೃಜನ್-1 ಮತ್ತು ಸೃಜನ್-2 ಆಶಯಗಳಿಗೆ ವಿರುದ್ಧವಾಗಿದ್ದು, ಪಕ್ಷದ ಹೈಕಮಾಂಡ್ ನಾಯಕರ ತತ್ವಗಳಿಗೆ ತಿಲಾಂಜಲಿ ನೀಡಿದಂತಾಗಿದೆ ಎಂದು ಕಿಡಿಕಾರಿದ್ದಾರೆ.

ಸುಳ್ಯ ಕ್ಷೇತ್ರದ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಡಾ. ರಘು, ನಂದ ರಾಜ್, ಸಂಕೇಶ್, ಮಾಜಿ ಜಿ.ಪಂ. ಅಧ್ಯಕ್ಷ ಸೋಮನಾಥ ಉಪ್ಪಿನಂಗಡಿ ಸೇರಿದಂತೆ ಹಲವು ದಲಿತ ಮುಖಂಡರಿಗೆ ನಿಗಮ-ಮಂಡಳಿ, ಬ್ಲಾಕ್ ಹಾಗೂ ಜಿಲ್ಲಾ ಮಟ್ಟದ ಹುದ್ದೆಗಳಲ್ಲಿ ಅವಕಾಶ ನೀಡಿಲ್ಲ ಏಕೆ ಎಂದು ಪ್ರಶ್ನಿಸಿದ ಕುಂದರ್, ಇದು ಗಾಂಧಿ ಕುಟುಂಬದ ಹೆಸರಿನಲ್ಲಿ ಪಕ್ಷವನ್ನು ದುರ್ಬಲಗೊಳಿಸುವ ಸಂಚೇ ಅಥವಾ ಬಿಜೆಪಿಯೊಂದಿಗಿನ ಒಳ ಒಪ್ಪಂದವೇ ಎಂಬುದನ್ನು ಜಿಲ್ಲಾಧ್ಯಕ್ಷರು ಸ್ಪಷ್ಟಪಡಿಸಬೇಕೆಂದು ಆಗ್ರಹಿಸಿದ್ದಾರೆ. ಜಿಲ್ಲಾ ಮತ್ತು ಬ್ಲಾಕ್ ಎಸ್.ಸಿ. ಘಟಕದ ಸಮಿತಿ ಸದಸ್ಯರನ್ನು ಕಡೆಗಣಿಸಿ ಏಕಪಕ್ಷೀಯವಾಗಿ ವ್ಯಕ್ತಿಯೊಬ್ಬರನ್ನು ಬಿಂಬಿಸುತ್ತಿರುವುದು ಖಂಡನೀಯ ಎಂದಿದ್ದಾರೆ.

ಜನಾರ್ಧನ ಚೆಂಡ್ತಿಮಾರ್ ನಿಧನದ ಬಳಿಕ ಪಕ್ಷದಲ್ಲಿ ದಲಿತರನ್ನು ಗುರುತಿಸುವವರೇ ಇಲ್ಲದಂತಾಗಿದ್ದು, ಪಕ್ಷಕ್ಕಾಗಿ ದುಡಿದವರನ್ನು ಕಡೆಗಣಿಸಿ, ಬಂಟ್ವಾಳದ ಮಹಿಳಾಮಣಿಯೊಬ್ಬರಿಗೆ ನಿಗಮದ ಅಧ್ಯಕ್ಷ ಸ್ಥಾನ ನೀಡಿರುವುದು ಬೇಸರ ತಂದಿದೆ ಎಂದು ಅವರು ಹೇಳಿದ್ದಾರೆ. ಪಕ್ಷದ ನಿಲುವು ಹೀಗೆಯೇ ಮುಂದುವರಿದರೆ ಮುಂದಿನ ದಿನಗಳಲ್ಲಿ ಕಾನೂನು ಹೋರಾಟ ಹಾಗೂ ಕೋರ್ಟ್ ಮೊರೆ ಹೋಗುವುದಾಗಿ ಎಚ್ಚರಿಸಿದ ಅವರು, ಮುಂಬರುವ ಚುನಾವಣೆಗಳಲ್ಲಿ ದಲಿತರು ತಕ್ಕ ಉತ್ತರ ನೀಡಲಿದ್ದಾರೆ ಎಂದಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಅಣ್ಣು ಕಂಡಿಗ ಕಕ್ಕೆಪದವು  ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ