image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ತ್ರಿಪುರಾ ಸ್ಥಳೀಯ ಸಂಸ್ಥೆ ಚುನಾವಣೆ: ಮತದಾನ ಆರಂಭಕ್ಕೂ ಮುನ್ನವೇ 77 ಸ್ಥಾನಗಳಲ್ಲಿ ಬಿಜೆಪಿ ಅವಿರೋಧ ಗೆಲುವು

ತ್ರಿಪುರಾ ಸ್ಥಳೀಯ ಸಂಸ್ಥೆ ಚುನಾವಣೆ: ಮತದಾನ ಆರಂಭಕ್ಕೂ ಮುನ್ನವೇ 77 ಸ್ಥಾನಗಳಲ್ಲಿ ಬಿಜೆಪಿ ಅವಿರೋಧ ಗೆಲುವು

ಅಗರ್ತಲಾ: ತ್ರಿಪುರಾದ ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಅಗರ್ತಲಾ ಮುನ್ಸಿಪಲ್ ಕಾರ್ಪೊರೇಶನ್ (AMC) ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಹೊಸ ದಾಖಲೆ ಬರೆದಿದೆ. ಇಂದು ಬೆಳಗ್ಗೆ 7 ಗಂಟೆಯಿಂದ ಬಿಗಿ ಭದ್ರತೆಯೊಂದಿಗೆ ಮತದಾನ ಪ್ರಕ್ರಿಯೆ ಆರಂಭವಾಗಿದ್ದು, ಫಲಿತಾಂಶ ಪ್ರಕಟವಾಗುವ ಮುನ್ನವೇ ಬಿಜೆಪಿಯ 77 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಗೆಲುವಿನ ಸಂಭ್ರಮ ಆಚರಿಸಿದ್ದಾರೆ.

ರಾಜ್ಯದ 16 ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯುತ್ತಿದ್ದು, ಒಟ್ಟು 5.56 ಲಕ್ಷಕ್ಕೂ ಹೆಚ್ಚು ಮತದಾರರು ತಮ್ಮ ಹಕ್ಕು ಚಲಾಯಿಸಲು ಅರ್ಹರಾಗಿದ್ದಾರೆ. ಚುನಾವಣೆ ನಡೆಯುತ್ತಿರುವ ಒಟ್ಟು ಸ್ಥಾನಗಳಿಗೆ 733 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಆದರೆ, 77 ಸ್ಥಾನಗಳಿಗೆ ಬಿಜೆಪಿ ಅಭ್ಯರ್ಥಿಗಳನ್ನು ಹೊರತುಪಡಿಸಿ ಬೇರೆ ಯಾವುದೇ ಪಕ್ಷದಿಂದ ನಾಮಪತ್ರ ಸಲ್ಲಿಕೆಯಾಗದ ಕಾರಣ, ಎಲ್ಲಾ 77 ಅಭ್ಯರ್ಥಿಗಳು ಯಾವುದೇ ಸ್ಪರ್ಧೆಯಿಲ್ಲದೆ ಜಯಗಳಿಸಿದ್ದಾರೆ.

ಧಲೈ ಜಿಲ್ಲೆಯ ಕಮಲ್‌ಪುರ, ದಕ್ಷಿಣ ತ್ರಿಪುರಾ ಜಿಲ್ಲೆಯ ಶಾಂತಿರ್ ಬಜಾರ್ ಹಾಗೂ ಪಶ್ಚಿಮ ತ್ರಿಪುರಾ ಜಿಲ್ಲೆಯ ರಾಣಿರ್ ಬಜಾರ್, ಜಿರಾನಿಯಾ ಮತ್ತು ಮೋಹನ್‌ಪುರ ಪುರಸಭೆಗಳ ಎಲ್ಲಾ 65 ಸ್ಥಾನಗಳನ್ನು ಬಿಜೆಪಿ ತನ್ನದಾಗಿಸಿಕೊಂಡಿದೆ. ಇದರ ಜೊತೆಗೆ ಅಂಬಾಸ, ತೆಲಿಯಾಮುರ ಮತ್ತು ಬಿಶಾಲಗಢ ಸ್ಥಳೀಯ ಸಂಸ್ಥೆಗಳಲ್ಲೂ ಹೆಚ್ಚುವರಿಯಾಗಿ 12 ಸ್ಥಾನಗಳಲ್ಲಿ ಅವಿರೋಧ ಗೆಲುವು ಸಾಧಿಸಿರುವ ಬಿಜೆಪಿ, ಕ್ಲೀನ್ ಸ್ವೀಪ್ ಮಾಡುವ ಮುನ್ಸೂಚನೆ ನೀಡಿದೆ.

ಈ ಚುನಾವಣೆಯಲ್ಲಿ ಬಿಜೆಪಿ ಅತಿ ಹೆಚ್ಚು ಅಂದರೆ 342 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಸಿಪಿಐ(ಎಂ) 218, ಕಾಂಗ್ರೆಸ್ 201 ಹಾಗೂ ತಿಪ್ರಾ ಮೋಥಾ ಪಕ್ಷ 10 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಶಾಂತಿಯುತ ಮತದಾನಕ್ಕಾಗಿ 4,600 ಚುನಾವಣಾ ಸಿಬ್ಬಂದಿಯೊಂದಿಗೆ ತ್ರಿಪುರಾ ಪೊಲೀಸ್ ಮತ್ತು ಅರೆಸೇನಾ ಪಡೆಗಳ 10 ಸಾವಿರಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

 

 

Category
ಕರಾವಳಿ ತರಂಗಿಣಿ