ಪುತ್ತೂರು: "ಟೂರ್ಗೆ ಹೋಗಲು ತುಂಬಾ ಆಸೆ ಇದೆ, ಆದರೆ ಮನೆಯಲ್ಲಿ ಹಣ ಇಲ್ಲದ ಕಾರಣ ಈ ಬಾರಿ ಹೋಗುವುದು ಬೇಡ ಎಂದು ಅಮ್ಮ ಹೇಳಿದ್ದಾರೆ" ಎಂಬ ಪುಟ್ಟ ವಿದ್ಯಾರ್ಥಿಗಳ ಮುಗ್ಧ ಹಾಗೂ ನೋವಿನ ಮಾತುಗಳಿಗೆ ಭಾವುಕರಾಗಿ, ಆರ್ಥಿಕ ನೆರವು ನೀಡುವುದಾಗಿ ಭರವಸೆ ನೀಡಿದ್ದ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರು ಇದೀಗ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆ. ಆರ್ಥಿಕ ಅಡಚಣೆಯಿಂದ ಶಾಲಾ ಪ್ರವಾಸಕ್ಕೆ ತೆರಳಲು ಸಾಧ್ಯವಾಗದ 14 ಮಂದಿ ಬಡ ವಿದ್ಯಾರ್ಥಿಗಳ ಪ್ರವಾಸದ ಸಂಪೂರ್ಣ ವೆಚ್ಚವನ್ನು ಭರಿಸುವ ಮೂಲಕ ಶಾಸಕರು ಮಕ್ಕಳ ಮುಖದಲ್ಲಿ ಮಂದಹಾಸ ಮೂಡಿಸಿದ್ದಾರೆ.
ಕೆಲವು ದಿನಗಳ ಹಿಂದೆ ಶಾಸಕ ಅಶೋಕ್ ಕುಮಾರ್ ರೈ ಅವರು ಪುತ್ತೂರು ತಾಲೂಕಿನ ನಿಡ್ಪಳ್ಳಿ ಗ್ರಾಮದ ಮುಂಡೂರು ಸರ್ಕಾರಿ ಪ್ರಾಥಮಿಕ ಶಾಲೆಗೆ ದಿಢೀರ್ ಭೇಟಿ ನೀಡಿದ್ದರು. ಶಾಸಕರು ಶಾಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ, ತರಗತಿ ಕೊಠಡಿಯಲ್ಲಿ ಶಿಕ್ಷಕಿಯರು ಮಕ್ಕಳನ್ನು ಕೂರಿಸಿಕೊಂಡು ಮುಂಬರುವ ಶಾಲಾ ಪ್ರವಾಸದ ಕುರಿತು ಚರ್ಚೆ ನಡೆಸುತ್ತಾ ಅಗತ್ಯ ಮಾಹಿತಿಗಳನ್ನು ನೀಡುತ್ತಿದ್ದರು. ತರಗತಿ ಕೊಠಡಿಯೊಳಗೆ ಪ್ರವೇಶಿಸಿದ ಶಾಸಕರು, ವಿದ್ಯಾರ್ಥಿಗಳೊಂದಿಗೆ ಆತ್ಮೀಯವಾಗಿ ಕುಳಿತು ಅವರ ಯೋಗಕ್ಷೇಮ ವಿಚಾರಿಸಿದರಲ್ಲದೆ, ಪ್ರವಾಸದ ಸಿದ್ಧತೆಗಳ ಬಗ್ಗೆ ಕುಶಲೋಪರಿ ನಡೆಸಿದರು.
ಈ ವೇಳೆ ಶಾಸಕರು "ನಿಮ್ಮಲ್ಲಿ ಯಾರೆಲ್ಲಾ ಟೂರ್ಗೆ ಹೋಗುತ್ತಿದ್ದೀರಿ?" ಎಂದು ಮಕ್ಕಳನ್ನು ಪ್ರಶ್ನಿಸಿದರು. ಆಗ ತರಗತಿಯಲ್ಲಿದ್ದ ಶಿಕ್ಷಕಿಯರು, ಆರ್ಥಿಕ ಸಂಕಷ್ಟದ ಕಾರಣದಿಂದಾಗಿ 14 ಮಂದಿ ಮಕ್ಕಳು ಈ ಬಾರಿಯ ಪ್ರವಾಸಕ್ಕೆ ತೆರಳುತ್ತಿಲ್ಲ ಎಂಬ ವಿಚಾರವನ್ನು ಶಾಸಕರ ಗಮನಕ್ಕೆ ತಂದರು. ತಕ್ಷಣವೇ ಆ ಪುಟ್ಟ ಮಕ್ಕಳ ಬಳಿ ತೆರಳಿದ ಶಾಸಕರು, "ನೀವು ಯಾಕೆ ಟೂರ್ಗೆ ಹೋಗುತ್ತಿಲ್ಲ?" ಎಂದು ಪ್ರೀತಿಯಿಂದ ವಿಚಾರಿಸಿದರು. ಇದಕ್ಕೆ ಉತ್ತರಿಸಿದ ಬಹುತೇಕ ವಿದ್ಯಾರ್ಥಿಗಳು, "ನಮಗೂ ಟೂರ್ಗೆ ಹೋಗುವ ಆಸೆ ಇದೆ, ಆದರೆ ಮನೆಯಲ್ಲಿ ಹಣವಿಲ್ಲದ ಕಾರಣ ಈ ಸಲ ಹೋಗುವುದು ಬೇಡ ಎಂದು ಅಮ್ಮ ಹೇಳಿದ್ದಾರೆ" ಎಂದು ತಮ್ಮ ಬಡತನದ ಅಸಹಾಯಕತೆಯನ್ನು ತೋಡಿಕೊಂಡರು.
ಪುಟ್ಟ ಮಕ್ಕಳ ಮನದಾಳದ ನೋವಿನ ಮಾತುಗಳನ್ನು ಕೇಳಿ ತೀವ್ರ ಭಾವುಕರಾದ ಶಾಸಕ ಅಶೋಕ್ ರೈ ಅವರು, ಯಾವುದೇ ಕಾರಣಕ್ಕೂ ಆರ್ಥಿಕ ತೊಂದರೆಯಿಂದ ಮಕ್ಕಳು ಶಾಲಾ ಪ್ರವಾಸದ ಸಂತೋಷದಿಂದ ವಂಚಿತರಾಗಬಾರದು ಎಂದು ನಿರ್ಧರಿಸಿದರು. ಹಣಕಾಸಿನ ಅಡಚಣೆಯಿಂದ ಪ್ರವಾಸಕ್ಕೆ ಹೋಗಲು ಸಾಧ್ಯವಾಗದ ಎಲ್ಲಾ 14 ಮಂದಿ ವಿದ್ಯಾರ್ಥಿಗಳ ಪ್ರವಾಸದ ಶುಲ್ಕವನ್ನು ತಾನೇ ವೈಯಕ್ತಿಕವಾಗಿ ಪಾವತಿಸುವುದಾಗಿ ಶಾಸಕರು ಅಂದೇ ಭರವಸೆ ನೀಡಿದ್ದರು.
ತಾವು ನೀಡಿದ ವಾಗ್ದಾನದಂತೆ ಸೋಮವಾರ ಪುತ್ತೂರಿನ ಶಾಸಕರ ಕಚೇರಿಗೆ ಆಗಮಿಸಿದ ಮುಂಡೂರು ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕಿಯರಿಗೆ ಶಾಸಕ ಅಶೋಕ್ ಕುಮಾರ್ ರೈ ಅವರು 14 ವಿದ್ಯಾರ್ಥಿಗಳ ಪ್ರವಾಸದ ನೆರವಿನ ಹಣವನ್ನು ಅಧಿಕೃತವಾಗಿ ಹಸ್ತಾಂತರಿಸಿದರು. ಶಾಸಕರ ಈ ಸಮಯೋಚಿತ ಹಾಗೂ ಮಾನವೀಯ ಸ್ಪಂದನೆಯಿಂದಾಗಿ ಬಡ ಕುಟುಂಬದ 14 ಮಂದಿ ಪುಟ್ಟ ವಿದ್ಯಾರ್ಥಿಗಳಿಗೂ ಸಹಪಾಠಿಗಳೊಂದಿಗೆ ಶಾಲಾ ಪ್ರವಾಸಕ್ಕೆ ತೆರಳುವ ಭಾಗ್ಯ ದೊರೆತಂತಾಗಿದೆ. ಮಕ್ಕಳ ಸಣ್ಣ ಆಸೆಗೆ ಸ್ಪಂದಿಸಿ, ನುಡಿದಂತೆ ನಡೆದ ಶಾಸಕರ ಈ ಕಾರ್ಯಕ್ಕೆ ಶಾಲಾ ಶಿಕ್ಷಕ ವೃಂದ, ಪೋಷಕರು ಹಾಗೂ ಸಾರ್ವಜನಿಕ ವಲಯದಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.