ಮಂಗಳೂರು : ಭಾರತದ ಆರ್ಥಿಕತೆಯ ಕುರಿತು ದೇಶ-ವಿದೇಶಗಳಲ್ಲಿ ನಡೆಯುತ್ತಿರುವ ಅಪಪ್ರಚಾರ ಹಾಗೂ ಹೂಡಿಕೆದಾರರಲ್ಲಿ ಗೊಂದಲ ಮೂಡಿಸುವ ಹುನ್ನಾರಗಳಿಗೆ ತಕ್ಕ ಉತ್ತರ ನೀಡುವ ಉದ್ದೇಶದಿಂದ ಪತ್ರಿಕಾಭವನದ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಆರ್ಥಿಕ ಪ್ರಕೋಷ್ಟದ ಸಂಚಾಲಕರಾದ ಸಿ ಎ ಎಸ್ ಎಸ್ ನಾಯಕ್ ತಿಳಿಸಿದರು. ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಜಾಗತಿಕ ಮಟ್ಟದಲ್ಲಿ ಹಲವು ರಾಷ್ಟ್ರಗಳ ಆರ್ಥಿಕತೆ ಕುಂಠಿತಗೊಂಡಿದ್ದರೂ ಭಾರತ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ರಾಷ್ಟ್ರವಾಗಿದೆ. ವಿಶ್ವದ ಸರಾಸರಿ ಜಿಡಿಪಿ ಶೇ. 3.1 ಇದ್ದರೆ, ಭಾರತದ ಜಿಡಿಪಿ ಕಳೆದ ತ್ರೈಮಾಸಿಕದಲ್ಲಿ ಶೇ. 7.8 ದಾಖಲಾಗಿದ್ದು, ಪ್ರಸಕ್ತ ವರ್ಷದಲ್ಲಿ ಶೇ. 7ರಷ್ಟು ಬೆಳವಣಿಗೆಯನ್ನು ಆರ್ಬಿಐ, ಐಎಂಎಫ್ ಹಾಗೂ ವಿಶ್ವಬ್ಯಾಂಕ್ ಅಂದಾಜಿಸಿವೆ. ಚೀನಾ (ಶೇ. 4.5), ಅಮೆರಿಕ (ಶೇ. 2.3), ಜರ್ಮನಿ (ಶೇ. 1.3), ಯುಕೆ (ಶೇ. 1.3) ಹಾಗೂ ಜಪಾನ್ (ಶೇ. 0.7) ದೇಶಗಳಿಗೆ ಹೋಲಿಸಿದರೆ ಭಾರತ ಮುಂಚೂಣಿಯಲ್ಲಿದೆ ಎಂದರು. ಕೋವಿಡ್ ಸಂದರ್ಭದಲ್ಲಿ ನೂರಕ್ಕೂ ಹೆಚ್ಚು ದೇಶಗಳಿಗೆ ಲಸಿಕೆ ಪೂರೈಸಿದ ಕೀರ್ತಿ ಹಾಗೂ ಪಶ್ಚಿಮ ಏಷ್ಯಾ ಯುದ್ಧದ ಬಿಕ್ಕಟ್ಟಿನ ನಡುವೆಯೂ ಡೀಸೆಲ್ ಮೇಲಿನ ಕೇಂದ್ರ ಅಬಕಾರಿ ಸುಂಕವನ್ನು 10 ರೂ. ಕಡಿತಗೊಳಿಸಿ ತೈಲ ಬೆಲೆ ನಿಯಂತ್ರಿಸಿರುವುದು ಸರ್ಕಾರದ ದಕ್ಷ ಆಡಳಿತಕ್ಕೆ ಸಾಕ್ಷಿಯಾಗಿದೆ ಎಂದು ವಿವರಿಸಿದರು.
ಬಳಿಕ ಮಾತನಾಡಿದ ಸಹಸಂಚಾಲಕರಾದ ಯೋಗೀಶ್ ಪೈ, ದೇಶದ ನಾಮಿನಲ್ ಜಿಡಿಪಿ 106 ಲಕ್ಷ ಕೋಟಿ ರೂ.ಗಳಿಂದ 345 ಲಕ್ಷ ಕೋಟಿ ರೂ.ಗೆ ಹಾಗೂ ತಲಾದಾಯ 83,000 ರೂ.ಗಳಿಂದ 2.08 ಲಕ್ಷ ರೂ.ಗೆ ಏರಿಕೆಯಾಗಿದೆ. ರಸ್ತೆ ಸಂಪರ್ಕ 67 ಲಕ್ಷ ಕಿ.ಮೀ. ತಲುಪಿದ್ದು, 1.4 ಲಕ್ಷ ಕಿ.ಮೀ. ಹೆದ್ದಾರಿ ಹಾಗೂ 7,300 ಕಿ.ಮೀ. ಎಕ್ಸ್ಪ್ರೆಸ್ವೇ ನಿರ್ಮಾಣವಾಗಿದೆ. ಪ್ರತಿದಿನ 25 ಕಿ.ಮೀ. ಹೆದ್ದಾರಿ ನಿರ್ಮಾಣವಾಗುತ್ತಿದ್ದು, ರೈಲ್ವೆ ವಿದ್ಯುದ್ದೀಕರಣ ಶೇ. 99.6ರಷ್ಟು ಪೂರ್ಣಗೊಂಡಿದೆ. ಇಪಿಎಫ್ ನೋಂದಣಿ 15.5 ಕೋಟಿಯಿಂದ 36 ಕೋಟಿಗೆ ಹೆಚ್ಚಳವಾಗಿದ್ದು, ರಫ್ತು ವಹಿವಾಟು 466 ಬಿಲಿಯನ್ ಡಾಲರ್ನಿಂದ 860 ಬಿಲಿಯನ್ ಡಾಲರ್ಗೆ ತಲುಪಿದೆ. ಸೌರಶಕ್ತಿ ಉತ್ಪಾದನೆ 2.82 ಗಿಗಾವ್ಯಾಟ್ನಿಂದ 175 ಗಿಗಾವ್ಯಾಟ್ಗೆ ಜಿಗಿದಿದೆ. ಬಜೆಟ್ ಗಾತ್ರ 18 ಲಕ್ಷ ಕೋಟಿಯಿಂದ 49.65 ಲಕ್ಷ ಕೋಟಿಗೆ, ರೈತರಿಗೆ ನೀಡುವ ಎಂಎಸ್ಪಿ 3 ಲಕ್ಷ ಕೋಟಿಯಿಂದ 11 ಲಕ್ಷ ಕೋಟಿಗೆ, ರಕ್ಷಣಾ ವೆಚ್ಚ 2.53 ಲಕ್ಷ ಕೋಟಿಯಿಂದ 7.85 ಲಕ್ಷ ಕೋಟಿಗೆ ಏರಿಕೆಯಾಗಿದ್ದು, ಬಾಹ್ಯಾಕಾಶ ಕ್ಷೇತ್ರದಲ್ಲಿ ಉಡಾವಣೆಯಾದ ಉಪಗ್ರಹಗಳ ಸಂಖ್ಯೆ 31ರಿಂದ 434ಕ್ಕೆ ತಲುಪಿದೆ ಎಂದು ಅಂಕಿ-ಅಂಶ ಸಹಿತ ಮಾಹಿತಿ ನೀಡಿದರು.
ನಂತರ ಮಾತನಾಡಿದ ರಾಜೇಶ್ ರಾವ್ ಎಂ, 2026ರ ಜಾಗತಿಕ ಜಿಡಿಪಿಗೆ ಭಾರತ ಶೇ. 17ರಷ್ಟು ಕೊಡುಗೆ ನೀಡಲಿದೆ ಎಂದು ಐಎಂಎಫ್ ಹೇಳಿದ್ದರೆ, ಭಾರತ ಶೀಘ್ರದಲ್ಲೇ ವಿಶ್ವದ ನಂಬರ್ ಒನ್ ಆರ್ಥಿಕತೆಯಾಗಲಿದೆ ಎಂದು ಸಿಸ್ಕೋ ಚೇರ್ಮನ್, ಅರ್ಥಶಾಸ್ತ್ರಜ್ಞ ಜೆಫ್ರಿ ಸ್ಯಾಕ್ಸ್ ಹಾಗೂ ಕಾರ್ಲೈಲ್ ಗ್ರೂಪ್ನ ಡೇವಿಡ್ ರೊಬೆನ್ಸ್ಟೈನ್ ಅಭಿಪ್ರಾಯಪಟ್ಟಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವ ಹಾಗೂ ನೀತಿಗಳನ್ನು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಮೀಡಿಯಾ ದಿಗ್ಗಜ ರುಪರ್ಟ್ ಮರ್ಡೋಕ್ ಶ್ಲಾಘಿಸಿದ್ದು, 21ನೇ ಶತಮಾನದಲ್ಲಿ ಭಾರತ ಪ್ರಬಲ ಸೂಪರ್ ಪವರ್ ಆಗಿ ಹೊರಹೊಮ್ಮಲಿದೆ ಎಂದು ಆಸ್ಟ್ರೇಲಿಯಾದ ಸಂಸದ ಆಂಡ್ರೂ ಚಾಲ್ಟನ್ ಬಣ್ಣಿಸಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸುಂದರ್ ಶೆಟ್ಟಿ, ವಸಂತ್ ಶೆಟ್ಟಿ, ರಘುನಾಥ ಪೈ ಹಾಗೂ ಡಾ.ಎಸ್. ಎಂ. ಶಿವಪ್ರಕಾಶ್ ಉಪಸ್ಥಿತರಿದ್ದರು.