ನವದೆಹಲಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಮಹಿಳಾ ಮೀಸಲಾತಿ ಮತ್ತು ಲೋಕಸಭಾ ಕ್ಷೇತ್ರಗಳ ಪುನರ್ವಿಂಗಡಣೆ (ಡಿಲಿಮಿಟೇಷನ್) ಮಸೂದೆಗೆ ಮತ್ತೆ ಚಾಲನೆ ಸಿಕ್ಕಿದೆ. ಕಳೆದ ಏಪ್ರಿಲ್ನಲ್ಲಿ ಸಂಸತ್ತಿನಲ್ಲಿ ಅಂಗೀಕಾರ ಪಡೆಯಲು ವಿಫಲವಾಗಿದ್ದ ಈ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಮುಂಬರುವ ಅಧಿವೇಶನದಲ್ಲಿ ಮತ್ತೊಮ್ಮೆ ಮಂಡಿಸಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ.
ಪ್ರಸ್ತಾವಿತ ತಿದ್ದುಪಡಿ ಮಸೂದೆಯ ಪ್ರಕಾರ, ಲೋಕಸಭೆಯ ಒಟ್ಟು ಸ್ಥಾನಗಳನ್ನು ಪ್ರಸ್ತುತ ಇರುವ 543ರಿಂದ ಗರಿಷ್ಠ 850ಕ್ಕೆ ಹೆಚ್ಚಿಸುವ ಹಾಗೂ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿ ಕಲ್ಪಿಸುವ ಉದ್ದೇಶವಿದೆ. 2029ರ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳಿಗೆ ಮುನ್ನವೇ ಈ ಮೀಸಲಾತಿಯನ್ನು ಜಾರಿಗೆ ತರುವ ಗುರಿಯನ್ನು ಸರ್ಕಾರ ಹೊಂದಿದೆ.
ಸಂವಿಧಾನ ತಿದ್ದುಪಡಿ ಮಸೂದೆ ಅಂಗೀಕಾರವಾಗಲು ಲೋಕಸಭೆಯಲ್ಲಿ ಮೂರನೇ ಎರಡರಷ್ಟು ಬಹುಮತ ಅಗತ್ಯವಿದೆ. ಪ್ರಸ್ತುತ 543 ಸದಸ್ಯ ಬಲದ ಸದನದಲ್ಲಿ ಮೂರು ಸ್ಥಾನಗಳು ಖಾಲಿಯಿದ್ದು, 540 ಸಂಸದರು ಮಾತ್ರ ಇದ್ದಾರೆ. ಈ ಪೈಕಿ ಮಸೂದೆ ಪಾಸ್ ಆಗಲು ಕನಿಷ್ಠ 361 ಮತಗಳ ಅಗತ್ಯವಿದೆ. ಸುಮಾರು 320 ಸಂಸದರ ಬಲ ಹೊಂದಿರುವ ಎನ್ಡಿಎ ಮೈತ್ರಿಕೂಟಕ್ಕೆ ವಿರೋಧ ಪಕ್ಷಗಳ ಬೆಂಬಲ ನಿರ್ಣಾಯಕವಾಗಿದೆ. ಈ ಹಿನ್ನೆಲೆಯಲ್ಲಿ ಇಂಡಿಯಾ ಮೈತ್ರಿಕೂಟದ ಕೆಲವು ಪ್ರಮುಖ ಪಕ್ಷಗಳು ಷರತ್ತುಬದ್ಧ ಬೆಂಬಲ ನೀಡಲು ಮುಂದಾಗಿರುವುದು ಕಾಂಗ್ರೆಸ್ ಪಾಳಯಕ್ಕೆ ರಾಜಕೀಯ ಸವಾಲಾಗಿ ಪರಿಣಮಿಸಿದೆ. ಅಗತ್ಯಕ್ಕಿಂತ 15ರಿಂದ 18 ಹೆಚ್ಚುವರಿ ಮತಗಳನ್ನು ಕ್ರೋಡೀಕರಿಸಿ ಮಸೂದೆ ಅಂಗೀಕರಿಸುವ ವಿಶ್ವಾಸದಲ್ಲಿ ಬಿಜೆಪಿ ನಾಯಕತ್ವ ಇದೆ.
ಇನ್ನೊಂದೆಡೆ, ಕಳೆದ ಆಗಸ್ಟ್ 13ರಂದು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದ್ದ ಮುಂಗಾರು ಅಧಿವೇಶನವನ್ನು ಇದುವರೆಗೂ ಅಧಿಕೃತವಾಗಿ ಮುಕ್ತಾಯಗೊಳಿಸದೆ (ಪ್ರೊರೋಗ್ ಮಾಡದೆ) ಉಳಿಸಿಕೊಂಡಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ. ಅಧಿವೇಶನ ಪ್ರೊರೋಗ್ ಆಗದ ಕಾರಣ ಕೇವಲ ಎರಡು ದಿನಗಳ ಕಿರು ನೋಟಿಸ್ ನೀಡಿ ವಿಶೇಷ ಕಲಾಪ ಕರೆಯುವ ಅವಕಾಶ ಸರ್ಕಾರದ ಮುಂದಿದ್ದು, ಮಸೂದೆ ಅಂಗೀಕಾರಕ್ಕೆ ಕೇಂದ್ರ ಸರ್ಕಾರ ಹೊಸ ರಾಜಕೀಯ ಲೆಕ್ಕಾಚಾರ ಹಾಕುತ್ತಿದೆ.