ಹಾವೇರಿ: ಕೇಂದ್ರದಲ್ಲಿ ಅಧಿಕಾರದ ಆಸೆಗೆ ಬಿದ್ದ ವಿಪಕ್ಷಗಳು ಇಂಡಿಯಾ ಒಕ್ಕೂಟ ಹೆಸರಿನಲ್ಲಿ ಮಾಡಿಕೊಂಡಿರುವ ಒಗ್ಗಟ್ಟು ಒಡೆದುಹೋಗಿದೆ. ಕೇಂದ್ರದಲ್ಲಿ ಮತ್ತೆ ನಿಸ್ಸಂದೇಹವಾಗಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವೇ ಬರುವುದು ಖಚಿತ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.
ಹಾನಗಲ್ ವಿಧಾನಸಭಾ ಮತಕ್ಷೇತ್ರದ ಚಿಕ್ಕೌಂಶಿ - ಹೊಸುರು, ಹಿರೂರು ಗ್ರಾಮಗಳಲ್ಲಿ ಅಪಾರ ಬೆಂಬಲಿಗರು ಮತ್ತು ಬಿಜೆಪಿ ಕಾರ್ಯಕರ್ತರೊಂದಿಗೆ ಬಹಿರಂಗ ಪ್ರಚಾರ ಮಾಡಿ ಮತಯಾಚನೆ ಮಾಡಿದರು.ಬಳಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತ ದೇಶದ ಗಡಿ ಭದ್ರತೆ, ಆಂತರಿಕ ಸುರಕ್ಷತೆ ಮತ್ತು ಪ್ರಗತಿಯ ಜವಾಬ್ದಾರಿ ಕೇಂದ್ರ ಸರ್ಕಾರದ್ದಾಗಿರುತ್ತದೆ. ಹತ್ತು ವರ್ಷದಿಂದ ದೇಶದ ಜನತೆ ಪ್ರಧಾನಿ ಮೋದಿ ಅವರ ಬೆಂಬಲಕ್ಕೆ ನಿಂತಿದ್ದಾರೆ. ಜಾಗತಿಕ ಮಟ್ಟದಲ್ಲಿಯೂ ಮೋದಿ ನಾಯಕತ್ವವನ್ನು ಮೆಚ್ಚಿಕೊಳ್ಳುತ್ತಿದ್ದಾರೆ. ಮೋದಿ ದಕ್ಷ ಆಡಳಿತಗಾರರಾಗಿದ್ದು, ಸುಸಂಸ್ಕೃತ ಹಿನ್ನೆಲೆಯ ವ್ಯಕ್ತಿ. ಅವರಿಗೆ ದೈವಿಶಕ್ತಿಯಿದೆ. ಸ್ಥಿತ ಪ್ರಜ್ಞೆ, ಸಮಯ ಪ್ರಜ್ಞೆಯ ಮೋದಿ ಸವಾಲುಗಳನ್ನು ಗೆಲುವಿನ ಅವಕಾಶವನ್ನಾಗಿ ಮಾಡುತ್ತಾರೆ. ಶಾಪ ಎನ್ನಲಾಗುತ್ತಿದ್ದ ದೇಶದ ಜನಸಂಖ್ಯೆಯನ್ನೇ ವರವನ್ನಾಗಿಸಿ ಆರ್ಥಿಕ ಸದೃಢತೆ ಸಾಧಿಸಿದ್ದಾರೆ. ಭಯೋತ್ಪಾದನೆಯ ಹುಟ್ಟಡಗಿಸಿದ್ದಾರೆ. ಹಲವು ದಿಟ್ಟ ನಿರ್ಧಾರಗಳ ಮೂಲಕ ದೇಶದಲ್ಲಿ ಸಮಗ್ರ ಬದಲಾವಣೆಗೆ ಕಾರಣರಾಗಿದ್ದಾರೆ. ಅಸಾಧ್ಯವನ್ನು ಸಾಧ್ಯವಾಗಿಸುವ ಮುತ್ಸದ್ದಿತನ ಅವರಲ್ಲಿದೆ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಸಾಲ ಮಾಡುವುದನ್ನು ಬಿಟ್ಟು ಬೇರೆನೂ ಮಾಡಿಲ್ಲ. ಕಾಂಗ್ರೆಸ್ ಶಾಸಕರೇ ಪತ್ರ ಬರೆದು, ತಮ್ಮ ಕ್ಷೇತ್ರದಲ್ಲಿ ಬರ ನಿರ್ವಹಣೆ, ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ನೀಡುವಂತೆ ಬೇಡಿಕೆ ಇಡುತ್ತಿದ್ದಾರೆ. ರಾಜ್ಯವನ್ನು ಕಾಂಗ್ರೆಸ್ ಸರ್ಕಾರ ಆರ್ಥಿಕವಾಗಿ ದಿವಾಳಿ ಆಗಿದೆ ಎಂದರು.ಹಾನಗಲ್ಲ ಕ್ಷೇತ್ರದಲ್ಲಿ ದಿ.ಸಿ.ಎಂ.ಉದಾಸಿ ಮತ್ತು ಮನೋಹರ ತಹಶೀಲ್ದಾರ ನಡುವೆ ಅಭಿವೃದ್ಧಿಯ ವಿಚಾರವಾಗಿ ಪೈಪೋಟಿ ಇತ್ತು. ಈ ಇಬ್ಬರು ನಾಯಕರು ಕ್ಷೇತ್ರಕ್ಕಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ. ಈಗ ದಿ.ಸಿ.ಎಂ.ಉದಾಸಿ ನಮ್ಮೊಂದಿಗೆ ಇಲ್ಲ. ಅವರ ಕೊರತೆ ನೀಗಿಸುವ ನಿಟ್ಟಿನಲ್ಲಿ ಸಂಸದನಾದರೂ, ಹಾನಗಲ್ಲ ಕ್ಷೇತ್ರದಲ್ಲಿ ಶಾಸಕನಂತೆ ಕ್ಷೇತ್ರದ ಅಭಿವೃದ್ಧಿಗೆ ತೊಡಗಿಕೊಳ್ಳುತ್ತೇನೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.
ಈ ಸಂದರ್ಭದಲ್ಲಿ ಸಚಿವ ಮನೋಹರ ತಹಶೀಲ್ದಾರ, ಮಾಜಿ ಶಾಸಕ ಶಿವರಾಜ ಸಜ್ಜನರ, ಮುಖಂಡರಾದ ರಾಜಣ್ಣ ಪಟ್ಟಣದ, ರಾಘವೇಂದ್ರ ತಹಶೀಲ್ದಾರ, ರಾಜಶೇಖರಗೌಡ ಕಟ್ಟೆಗೌಡ್ರ, ಜಿ.ಎಸ್.ದೇಶಪಾಂಡೆ, ಬಿ.ಆರ್.ಪಾಟೀಲ, ಕಸ್ತೂರೆವ್ವ ವಡ್ಡರ, ಭೋಜರಾಜ ಕರೂದಿ, ಚಂದ್ರಣ್ಣ ಹರಿಜನ, ಮಹೇಶ ಕಮಡೊಳ್ಳಿ, ಮಾಲತೇಶ ಸೊಪ್ಪಿನ, ರಾಮನಗೌಡ ಪಾಟೀಲ ಮತ್ತಿತರರಿದ್ದರು.