image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಸಿದ್ದರಾಮಯ್ಯ ಹಾಗೂ ನನ್ನ ನಡುವೆ ಯಾವುದೇ ಮುನಿಸಿಲ್ಲ: ಸಿಎಂ ಡಿ. ಕೆ. ಶಿವಕುಮಾರ್ ಸ್ಪಷ್ಟನೆ

ಸಿದ್ದರಾಮಯ್ಯ ಹಾಗೂ ನನ್ನ ನಡುವೆ ಯಾವುದೇ ಮುನಿಸಿಲ್ಲ: ಸಿಎಂ ಡಿ. ಕೆ. ಶಿವಕುಮಾರ್ ಸ್ಪಷ್ಟನೆ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ತಮ್ಮ ನಡುವೆ ಯಾವುದೇ ರೀತಿಯ ಮನಸ್ತಾಪ ಅಥವಾ ಮುನಿಸು ಇಲ್ಲ ಎಂದು ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ರಾಜಧಾನಿಯ ಮೇಖ್ರಿ ವೃತ್ತ ಹಾಗೂ ಟೌನ್ ಹಾಲ್ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೆಲವರು ಅನಗತ್ಯವಾಗಿ ತಮ್ಮಿಬ್ಬರ ನಡುವೆ ಭಿನ್ನಾಭಿಪ್ರಾಯವಿದೆ ಎಂಬ ವಾತಾವರಣ ಸೃಷ್ಟಿಸಲು ಸಂಚು ರೂಪಿಸುತ್ತಿದ್ದಾರೆ ಎಂದು ತಿರುಗೇಟು ನೀಡಿದರು.

ರಾಜಕಾರಣದಲ್ಲಿ ವಿರೋಧಿಗಳು ಹಾಗೂ ನಿಂದಕರು ಇದ್ದಾಗ ಮಾತ್ರ ಶುದ್ಧ ರಾಜಕೀಯ ಮಾಡಲು ಸಾಧ್ಯ ಎಂದು ಅಭಿಪ್ರಾಯಪಟ್ಟ ಡಿ. ಕೆ. ಶಿವಕುಮಾರ್, ಸಿದ್ದರಾಮಯ್ಯ ಅವರು ತಮ್ಮ ನಾಯಕರು ಎಂದು ಪುನರುಚ್ಚರಿಸಿದರು. ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ಕುರಿತು ಪ್ರಮುಖ ವಿಚಾರಗಳನ್ನು ಚರ್ಚಿಸಬೇಕಿದ್ದ ಹಿನ್ನೆಲೆಯಲ್ಲಿ ಅವರನ್ನು ಭೇಟಿ ಮಾಡಿ ಹಬ್ಬದ ಶುಭಾಶಯ ಕೋರಿರುವುದಾಗಿ ಹೇಳಿದರು.

ಇದೇ ವೇಳೆ ಮೇಖ್ರಿ ವೃತ್ತ ಮತ್ತು ಹೆಬ್ಬಾಳ ಭಾಗದ ಉದ್ದೇಶಿತ ಎಲಿವೇಟೆಡ್ ಕಾರಿಡಾರ್ ಹಾಗೂ ಸುರಂಗ ಮಾರ್ಗದ ಯೋಜನೆಯ ಸ್ಥಳ ಪರಿಶೀಲನೆ ನಡೆಸಿದ ಅವರು, ವಿಪಕ್ಷಗಳ ನಕಾರಾತ್ಮಕ ಧೋರಣೆಯನ್ನು ಕಠಿಣವಾಗಿ ಟೀಕಿಸಿದರು. ಬೆಂಗಳೂರಿನ ಸಂಚಾರ ದಟ್ಟಣೆ ನಿವಾರಣೆಗೆ ಪರ್ಯಾಯ ಮಾರ್ಗಗಳನ್ನು ಕಲ್ಪಿಸುವುದು ಅನಿವಾರ್ಯವಾಗಿದ್ದು, ಸುರಂಗ ರಸ್ತೆ ಅಥವಾ ಮೇಲ್ಸೇತುವೆ ನಿರ್ಮಿಸದೆ ರಸ್ತೆ ಅಗಲೀಕರಣಕ್ಕಾಗಿ ಕಟ್ಟಡಗಳನ್ನು ತೆರವುಗೊಳಿಸಲು ಸಾಧ್ಯವಿಲ್ಲ ಎಂದು ಅವರು ಪ್ರತಿಪಾದಿಸಿದರು.

ಸಂಚಾರ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ತರಲು ಮೇಖ್ರಿ ವೃತ್ತದ ಬಳಿ ಇರುವ ರಕ್ಷಣಾ ಇಲಾಖೆಯ ಜಾಗವನ್ನು ಕೋರಲಾಗಿದ್ದು, ಅಲ್ಲಿ ರೋಟರಿ ಸರ್ಕಲ್ ಹಾಗೂ ವರ್ತುಲ ವ್ಯವಸ್ಥೆ ರೂಪಿಸಲಾಗುವುದು ಎಂದರು. ಈ ಕಾಮಗಾರಿಯ ಅವಧಿಯಲ್ಲಿ ಸಾಮಾನ್ಯ ವಾಹನ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವುದಿಲ್ಲ, ಕೇವಲ ಸರಕು ಸಾಗಣೆ ವಾಹನಗಳನ್ನು ನಿರ್ದಿಷ್ಟ ಸಮಯದಲ್ಲಿ ನಿಯಂತ್ರಿಸಲಾಗುವುದು. ಸಾರ್ವಜನಿಕರಿಗೆ ತೊಂದರೆಯಾಗದಂತೆ 9 ಕೋಟಿ ರೂಪಾಯಿ ವೆಚ್ಚದಲ್ಲಿ ಬಿಡಿಎ ಮೂಲಕ ಪರ್ಯಾಯ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ತಿಳಿಸಿದರು.

ಹೆಲಿಕಾಪ್ಟರ್ ಮೂಲಕ ಸ್ಥಳ ಪರಿಶೀಲನೆ ನಡೆಸುವಾಗ ಲಾಲ್‌ಬಾಗ್ ಬಳಿ ಸುರಂಗ ಮಾರ್ಗ ಹಾದುಹೋಗುವ ಪ್ರದೇಶದ ಭೌಗೋಳಿಕ ವ್ಯತ್ಯಾಸ ಗಮನಕ್ಕೆ ಬಂದಿದ್ದು, ಅದಕ್ಕೆ ಸೂಕ್ತ ಪರ್ಯಾಯ ವ್ಯವಸ್ಥೆ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ವಿವರಿಸಿದರು. ವಿರೋಧ ಪಕ್ಷಗಳು ಸರ್ಕಾರದ ಅಭಿವೃದ್ಧಿಯ ವೇಗವನ್ನು ಸಹಿಸಿಕೊಳ್ಳಲಾಗದೆ ಪ್ರತಿಯೊಂದು ಕೆಲಸಕ್ಕೂ ಅಡೆತಡೆ ಉಂಟುಮಾಡುತ್ತಿವೆ ಎಂದು ವಾಗ್ದಾಳಿ ನಡೆಸಿದ ಅವರು, ಹೆಬ್ಬಾಳದ ಸಂಚಾರ ದಟ್ಟಣೆ ತಡೆಯಲು ರೂಪಿಸುತ್ತಿರುವ ಈ ಯೋಜನೆಯು ಪ್ರತ್ಯೇಕವಾಗಿದ್ದು, ಸುಗಮ ಸಂಚಾರಕ್ಕೆ ಸಂಪೂರ್ಣ ನೆರವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Category
ಕರಾವಳಿ ತರಂಗಿಣಿ