image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಎಸ್ಐಆರ್ ಅಸಂವಿಧಾನಿಕವಾದರೆ ಕೇರಳ ಸಿಎಂ ರಾಜೀನಾಮೆ ನೀಡಲಿ: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ಕಾಂಗ್ರೆಸ್‌ಗೆ ಸವಾಲು

ಎಸ್ಐಆರ್ ಅಸಂವಿಧಾನಿಕವಾದರೆ ಕೇರಳ ಸಿಎಂ ರಾಜೀನಾಮೆ ನೀಡಲಿ: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ಕಾಂಗ್ರೆಸ್‌ಗೆ ಸವಾಲು

ಮಂಗಳೂರು : ಮಂಗಳೂರಿನ ಬಿಜೆಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ಅವರು ಕಾಂಗ್ರೆಸ್ ಹಾಗೂ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮತದಾರರ ಪಟ್ಟಿಯ ವಿಶೇಷ ಸಾಂದ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯನ್ನು ಅಸಂವಿಧಾನಿಕ ಎಂದು ವಿರೋಧಿಸುವುದಾದರೆ, ಅದೇ ಪ್ರಕ್ರಿಯೆಯ ಬಳಿಕ ಚುನಾವಣೆ ನಡೆದು ಅಧಿಕಾರಕ್ಕೆ ಬಂದಿರುವ ಕೇರಳದ ಮುಖ್ಯಮಂತ್ರಿ ಅವರಿಗೆ ಮುಂದುವರಿಯಲು ನೈತಿಕ ಅಧಿಕಾರವಿಲ್ಲ, ಅವರು ತಕ್ಷಣ ರಾಜೀನಾಮೆ ನೀಡಬೇಕಲ್ಲವೇ ಎಂದು ಸವಾಲು ಹಾಕಿದ್ದಾರೆ.

ರಾಹುಲ್ ಗಾಂಧಿ ಮತ್ತು ಇತರ ವಿಪಕ್ಷ ನಾಯಕರು ಸಂವಿಧಾನದ ಪುಸ್ತಕವನ್ನು ಜೇಬಿನಲ್ಲಿಟ್ಟುಕೊಂಡು ತಿರುಗುತ್ತಾರೆಯೇ ಹೊರತು ಅದರ ಮೂಲ ಆಶಯವನ್ನು ಓದಿಲ್ಲ ಎಂದು ವ್ಯಂಗ್ಯವಾಡಿದ ಅವರು, ದೇಶದಲ್ಲಿ ಅರಾಜಕತೆ ಸೃಷ್ಟಿಸುವುದು ಹಾಗೂ ಪ್ರಜಾಪ್ರಭುತ್ವವನ್ನು ಮುಗಿಸುವುದೇ ವಿಪಕ್ಷಗಳ ಮುಖ್ಯ ಅಜೆಂಡಾವಾಗಿದೆ ಎಂದು ಆರೋಪಿಸಿದರು. ಬಾಂಗ್ಲಾದೇಶ, ನೇಪಾಳ ಹಾಗೂ ಶ್ರೀಲಂಕಾದಲ್ಲಿ ನಡೆದಂತೆ ಭಾರತದಲ್ಲೂ ಸರ್ಕಾರ ಬದಲಾಯಿಸಲು ವಿಪಕ್ಷಗಳು ವಿದೇಶಿ ಶಕ್ತಿಗಳೊಂದಿಗೆ ಕೈಜೋಡಿಸಿ ಯತ್ನಿಸುತ್ತಿವೆ ಎಂದು ಖಂಡಿಸಿದರು.

ಜನಪ್ರತಿನಿಧಿ ಕಾಯ್ದೆ 1951ರ ಸೆಕ್ಷನ್ 21(3)ರ ಅಡಿಯಲ್ಲಿ ಮತದಾರರ ಪಟ್ಟಿಯನ್ನು ಪರಿಷ್ಕರಿಸುವ ಪೂರ್ಣ ಅಧಿಕಾರ ಚುನಾವಣಾ ಆಯೋಗಕ್ಕಿದೆ. ದೇಶದಲ್ಲಿ ಈ ಹಿಂದೆ 12 ಬಾರಿ ಇಂತಹ ಪರಿಷ್ಕರಣೆ ನಡೆದಿದ್ದು, ಅನರ್ಹರು, ಮೃತಪಟ್ಟವರು ಹಾಗೂ ಸ್ಥಳಾಂತರಗೊಂಡವರನ್ನು ಪಟ್ಟಿಯಿಂದ ಕೈಬಿಡುವುದು ಸಂಪೂರ್ಣ ಕಾನೂನುಬದ್ಧವಾಗಿದೆ. ಈ ಪ್ರಕ್ರಿಯೆಗೆ ಸುಪ್ರೀಂ ಕೋರ್ಟ್ ಕೂಡ ತಡೆ ನೀಡಿಲ್ಲದಿರುವಾಗ ರಾಹುಲ್ ಗಾಂಧಿ ಅವರು ಮೊದಲು ಸಂವಿಧಾನದ ಬಗ್ಗೆ ಅರಿವು ಬೆಳೆಸಿಕೊಂಡು ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಚರ್ಚೆಗೆ ಬರಲಿ ಎಂದರು. ದೇಶಾದ್ಯಂತ 'ಪ್ರಜಾಪ್ರಭುತ್ವ ಉಳಿಸಿ, ಅರಾಜಕತೆ ಅಳಿಸಿ' ಅಭಿಯಾನದ ಭಾಗವಾಗಿ ಈ ಪತ್ರಿಕಾಗೋಷ್ಠಿಗಳನ್ನು ನಡೆಸಲಾಗುತ್ತಿದ್ದು, ಕಾರ್ಯಕ್ರಮದಲ್ಲಿ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಶಾಸಕ ಕಿಶೋರ್ ಕುಮಾರ್ ಪುತ್ತೂರು, ಮಾಜಿ ಶಾಸಕ ಕ್ಯಾ. ಗಣೇಶ್ ಕಾರ್ಣಿಕ್ ಸೇರಿದಂತೆ ಹಲವು ಬಿಜೆಪಿ ನಾಯಕರು ಭಾಗವಹಿಸಿದ್ದರು.

Category
ಕರಾವಳಿ ತರಂಗಿಣಿ