ಬೆಂಗಳೂರು: ಫ್ರೀಡಂ ಪಾರ್ಕ್ನಲ್ಲಿ ಇಂಡಿಯಾ ಒಕ್ಕೂಟ ಹಮ್ಮಿಕೊಂಡಿದ್ದ "ಮತಗಳ್ಳತನ ನಿಲ್ಲಿಸಿ, ದೇಶ ಉಳಿಸಿ" ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮತದಾರರ ಪಟ್ಟಿಯಿಂದ ಅರ್ಹ ಮತದಾರರ ಹೆಸರುಗಳನ್ನು ಅಳಿಸಲು ಅರ್ಜಿ ನಮೂನೆ 7ನ್ನು ದುರುಪಯೋಗಪಡಿಸಿಕೊಂಡವರ ವಿರುದ್ಧ ಮತ್ತು ಮತಗಳ್ಳತನಕ್ಕೆ ಕುಮ್ಮಕ್ಕು ನೀಡಿದವರ ವಿರುದ್ಧ ಸೂಕ್ತ ಪೊಲೀಸ್ ತನಿಖೆ ನಡೆಸಲು ರಾಜ್ಯ ಸರ್ಕಾರ ಮುಂದಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಚುನಾವಣಾ ಆಯೋಗದ ಹಿಂದೆ ಇರುವ ಬಿಜೆಪಿಯ ಹುನ್ನಾರದ ವಿರುದ್ಧ ತಮ್ಮ ಹೋರಾಟ ಮುಂದುವರಿಯಲಿದೆ ಎಂದ ಅವರು, ಬಿಎಲ್ಒಗಳಿಗೆ ತಪ್ಪು ಮಾಹಿತಿ ನೀಡಿ ಅರ್ಜಿ ಸಲ್ಲಿಸಿದ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಿಸಿಟಿವಿ ದಾಖಲೆಗಳಿವೆ ಮತ್ತು ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ. ಈ ಹಿಂದೆ ಬಿಹಾರ, ಮಹಾರಾಷ್ಟ್ರ, ತಮಿಳುನಾಡು ಮುಂತಾದ ರಾಜ್ಯಗಳಲ್ಲಿಯೂ ಇಂತಹದ್ದೇ ಅಕ್ರಮಗಳು ನಡೆದಿದ್ದು, ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯ ಮೂಲಕ ಅನ್ಯಾಯಕ್ಕೊಳಗಾದ ಪ್ರತಿಯೊಬ್ಬ ಅರ್ಹ ಮತದಾರನಿಗೂ ನ್ಯಾಯ ಸಿಗುವವರೆಗೆ ಹಾಗೂ ಕೈಬಿಡಲಾದ ಹೆಸರುಗಳನ್ನು ಮರಳಿ ಸೇರ್ಪಡೆಗೊಳಿಸುವವರೆಗೆ ತಮ್ಮ ಪ್ರತಿಭಟನೆ ಮತ್ತು ಹೋರಾಟವನ್ನು ನಿಲ್ಲಿಸುವುದಿಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ.