ಮಂಗಳೂರು : ದೇಶದ ಮತಪಟ್ಟಿಯ ಸಮಗ್ರ ಶುದ್ಧೀಕರಣದ ಎಸ್.ಐ.ಆರ್ (SIR) ಪ್ರಕ್ರಿಯೆ ಕುರಿತು ಕಾಂಗ್ರೆಸ್ ಹಾಗೂ ಅದರ ಮಿತ್ರಪಕ್ಷಗಳು ಅಪಪ್ರಚಾರ ಮಾಡುತ್ತಿದ್ದು, ಸಾಂವಿಧಾನಿಕ ಸಂಸ್ಥೆಗಳ ಮೇಲೆ ದಾಳಿ ನಡೆಸುತ್ತಿವೆ ಎಂದು ಆಪಾದಿಸಿ ನವೆಂಬರ್ 6ರಂದು ಮಂಗಳೂರಿನಲ್ಲಿ "ಲೋಕತಂತ್ರ ಉಳಿಸಿ, ಅರಾಜಕತೆ ಅಳಿಸಿ, ಸಂವಿಧಾನ ರಕ್ಷಿಸಿ" ಬೃಹತ್ ಪಾದಯಾತ್ರೆ ಹಾಗೂ ಸಾರ್ವಜನಿಕ ಸಭೆಯನ್ನು ಆಯೋಜಿಸಲಾಗಿದೆ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ತಿಳಿಸಿದ್ದಾರೆ.
ಈ ಬೃಹತ್ ಪ್ರತಿಭಟನಾ ಜಾಥಾದಲ್ಲಿ ಕೇಂದ್ರ ಸಚಿವ ಸುರೇಶ್ ಗೋಪಿ, ಸಂಸದ ತೇಜಸ್ವಿ ಸೂರ್ಯ, ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ಸೇರಿದಂತೆ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಶಾಸಕರು ಹಾಗೂ ಸಂಸದರು ಭಾಗವಹಿಸಲಿದ್ದಾರೆ. ಶುಕ್ರವಾರ ಅಪರಾಹ್ನ 3:00 ಗಂಟೆಗೆ ಮಂಗಳೂರಿನ ಕ್ಲಾಕ್ ಟವರ್ ಬಳಿಯ ಮಿನಿ ವಿಧಾನ ಸೌಧದಿಂದ ಆರಂಭವಾಗಲಿರುವ ಪಾದಯಾತ್ರೆಯು ಕದ್ರಿ ಮೈದಾನದವರೆಗೆ ಸಾಗಲಿದ್ದು, ಬಳಿಕ ಅಲ್ಲಿ ಬೃಹತ್ ಸಾರ್ವಜನಿಕ ಸಭೆ ನಡೆಯಲಿದೆ. ಪ್ರಜಾಪ್ರಭುತ್ವ ರಕ್ಷಣೆ ಹಾಗೂ ಯುವಜನರ ಹಕ್ಕುಗಳಿಗಾಗಿ ನಡೆಯುತ್ತಿರುವ ಈ ಹೋರಾಟದಲ್ಲಿ ಸಾರ್ವಜನಿಕರು ಮತ್ತು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕಾಗಿ ಕ್ಯಾ. ಚೌಟ ವಿನಂತಿಸಿದ್ದಾರೆ.