image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಇಂಡಿಯಾ ಒಕ್ಕೂಟದ ರ‍್ಯಾಲಿ ಸಂಪೂರ್ಣ ಫ್ಲಾಪ್ ಎಂದ ಬಿಜೆಪಿ

ಇಂಡಿಯಾ ಒಕ್ಕೂಟದ ರ‍್ಯಾಲಿ ಸಂಪೂರ್ಣ ಫ್ಲಾಪ್ ಎಂದ ಬಿಜೆಪಿ

ನವದೆಹಲಿ : ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆದ ಇಂಡಿಯಾ ಒಕ್ಕೂಟದ ರ‍್ಯಾಲಿ ಸಂಪೂರ್ಣವಾಗಿ ವಿಫಲಗೊಂಡಿದೆ ಎಂದು ಆಡಳಿತರೂಢ ಭಾರತೀಯ ಜನತಾ ಪಕ್ಷ ತೀವ್ರ ವಾಗ್ದಾಳಿ ನಡೆಸಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸದ ಸಂಬಿತ್ ಪಾತ್ರಾ, ವಿಪಕ್ಷಗಳ ರ‍್ಯಾಲಿಯು ಕೇವಲ ಒಂದು ಫ್ಲಾಪ್ ಶೋ ಆಗಿದ್ದು, ಮೈದಾನದಲ್ಲಿ ಶೇಕಡಾ 40ರಷ್ಟು ಜಾಗ ಖಾಲಿಯಿತ್ತು ಎಂದು ಲೇವಡಿ ಮಾಡಿದರು. 10 ಲಕ್ಷ ಜನರು ಸೇರಲಿದ್ದಾರೆ ಎಂದು ಕಾಂಗ್ರೆಸ್ ನಾಯಕರು ದೊಡ್ಡ ಸುಳ್ಳು ಹೇಳಿದ್ದರು, ಆದರೆ ಮಧ್ಯಾಹ್ನ 3:30ರಿಂದ 4 ಗಂಟೆಯ ವೇಳೆಗೆ ಮೈದಾನದಲ್ಲಿದ್ದ 28,000 ಕುರ್ಚಿಗಳ ಪೈಕಿ 5,000ದಿಂದ 7,000 ಕುರ್ಚಿಗಳು ಖಾಲಿಯಾಗಿದ್ದವು ಎಂದು ಅಂಕಿ-ಅಂಶ ನೀಡಿದರು.

2024ರ ಲೋಕಸಭಾ ಚುನಾವಣೆಯ ಫಲಿತಾಂಶಗಳು ಅಕ್ರಮ ಎಂದಿದ್ದ ರಾಹುಲ್ ಗಾಂಧಿ ಅವರ ಆರೋಪಕ್ಕೆ ತಿರುಗೇಟು ನೀಡಿದ ಪಾತ್ರಾ, "ಚುನಾವಣೆ ಅಕ್ರಮ ಎಂದಾದರೆ ರಾಹುಲ್ ಗಾಂಧಿ ಅವರು ಅಕ್ರಮ ಸಂಸದ ಹಾಗೂ ಅಕ್ರಮ ವಿರೋಧ ಪಕ್ಷದ ನಾಯಕ ಎಂದರ್ಥವೇ?" ಎಂದು ಸವಾಲು ಹಾಕಿದರು. ಫಲಿತಾಂಶ ಬಂದು ಎರಡೂವರೆ ವರ್ಷಗಳ ಬಳಿಕ ಹೀಗೆ ಆರೋಪಿಸುವ ಬದಲು, ಇದನ್ನು ನ್ಯಾಯಾಲಯದಲ್ಲಿ ಏಕೆ ಪ್ರಶ್ನಿಸಲಿಲ್ಲ ಎಂದು ಪ್ರಶ್ನಿಸಿದ ಅವರು, ಈ ಕುರಿತು ಇಂಡಿಯಾ ಮೈತ್ರಿಕೂಟದ ಯಾವುದೇ ಪಕ್ಷವೂ ಒಂದೇ ಒಂದು ಮೇಲ್ಮನವಿ ಸಲ್ಲಿಸಿಲ್ಲ ಎಂದರು.

ಈ ದೇಶ ಯಾರೊಬ್ಬರ ಅಪ್ಪನ ಸ್ವತ್ತಲ್ಲ ಎಂದ ಪಾತ್ರಾ, ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಕಠಿಣ ಪರಿಶ್ರಮದಿಂದ ಈ ಸ್ಥಾನಕ್ಕೆ ಬಂದಿದ್ದಾರೆಯೇ ಹೊರತು ವಂಶಾಡಳಿತದಿಂದ ಅಲ್ಲ ಎಂದು ತಿರುಗೇಟು ನೀಡಿದರು. ಒಬ್ಬ ಸಾಮಾನ್ಯ ಚಹಾ ಮಾರಾಟಗಾರ ಪ್ರಧಾನಿಯಾಗಬಹುದು ಹಾಗೂ ಸಾಮಾನ್ಯ ವ್ಯಕ್ತಿ ಗೃಹಮಂತ್ರಿಯಾಗಬಹುದು ಎಂಬುದೇ ಭಾರತೀಯ ಪ್ರಜಾಪ್ರಭುತ್ವದ ಸೌಂದರ್ಯ. ಆದರೆ ಇದನ್ನು ರಾಹುಲ್ ಗಾಂಧಿ ಅವರಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ ಎಂದು ವಾಗ್ದಾಳಿ ನಡೆಸಿದ ಅವರು, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು 2024ರ ಚುನಾವಣೆ ನಡೆದಾಗ ಆ ಹುದ್ದೆಯಲ್ಲೇ ಇರಲಿಲ್ಲ ಎನ್ನುವ ಸತ್ಯವನ್ನು ರಾಹುಲ್ ಗಾಂಧಿ ಮರೆತಿದ್ದಾರೆ ಎಂದು ಕುಟುಕಿದರು.

Category
ಕರಾವಳಿ ತರಂಗಿಣಿ