ಮೆಘಾಲಯ : ಈಶಾನ್ಯ ರಾಜ್ಯ ಮೆಘಾಲಯದ ಆಡಳಿತರೂಢ ಎನ್ಡಿಎ ಮೈತ್ರಿಕೂಟದಲ್ಲಿ ದಿಢೀರ್ ರಾಜಕೀಯ ಸಂಚಲನ ಸೃಷ್ಟಿಯಾಗಿದೆ. ಯುನೈಟೆಡ್ ಡೆಮಾಕ್ರಟಿಕ್ ಪಾರ್ಟಿ (UDP) ಅಧ್ಯಕ್ಷ ಹಾಗೂ ಸಚಿವ ಮೆಟ್ಬಾ ಲಿಂಗ್ಡೋ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಮುಖ್ಯಮಂತ್ರಿ ಕೊನ್ರಾಡ್ ಸಾಂಗ್ಮಾ ನೇತೃತ್ವದ ಸರ್ಕಾರದಿಂದ ಹೊರಬಂದಿದ್ದಾರೆ.
2023ರ ಮೆಘಾಲಯ ವಿಧಾನಸಭಾ ಚುನಾವಣೆಯಲ್ಲಿ 12 ಸ್ಥಾನಗಳನ್ನು ಗೆದ್ದು ಎರಡನೇ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಯುಡಿಪಿ, ಎನ್ಡಿಎ ಮೈತ್ರಿ ಸರ್ಕಾರಕ್ಕೆ ಬೆಂಬಲ ನೀಡಿತ್ತು. ಆದರೆ, ಇತ್ತೀಚಿನ ರಾಜಕೀಯ ಬೆಳವಣಿಗೆಗಳಲ್ಲಿ ಯುಡಿಪಿಯ 12 ಶಾಸಕರ ಪೈಕಿ 11 ಶಾಸಕರು ಪಕ್ಷ ತೊರೆದಿದ್ದಾರೆ. ಈ ಪೈಕಿ 8 ಶಾಸಕರು ಬಿಜೆಪಿಗೆ ಸೇರ್ಪಡೆಯಾಗಿದ್ದರೆ, ಮೂವರು ಶಾಸಕರು ಮುಖ್ಯಮಂತ್ರಿ ಸಾಂಗ್ಮಾ ಅವರ ನ್ಯಾಷನಲ್ ಪೀಪಲ್ಸ್ ಪಾರ್ಟಿ (NPP) ಸೇರ್ಪಡೆಯಾಗಿದ್ದಾರೆ.
11 ಶಾಸಕರ ನಿರ್ಗಮನದಿಂದಾಗಿ ಯುಡಿಪಿ ಪಕ್ಷದಲ್ಲಿ ಅಧ್ಯಕ್ಷ ಮೆಟ್ಬಾ ಲಿಂಗ್ಡೋ ಒಬ್ಬರೇ ಉಳಿದುಕೊಂಡಂತಾಗಿತ್ತು. ಪಕ್ಷದಲ್ಲಾದ ಈ ತೀವ್ರ ಹಿನ್ನಡೆ ಹಾಗೂ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಬೇಸತ್ತ ಲಿಂಗ್ಡೋ, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ನಿರ್ಧಾರ ತಗೆದುಕೊಂಡಿದ್ದಾರೆ.
ಸರ್ಕಾರದಲ್ಲಿ ಇಂಧನ, ಜಲಸಂಪನ್ಮೂಲ, ಜವಳಿ ಹಾಗೂ ತೆರಿಗೆ ಇಲಾಖೆಗಳ ಹೊಣೆಗಾರಿಕೆ ಹೊಂದಿದ್ದ ಮೆಟ್ಬಾ ಲಿಂಗ್ಡೋ, ತಾವು ಯಾರ ಒತ್ತಡಕ್ಕೂ ಮಣಿದು ರಾಜೀನಾಮೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಪ್ರಸ್ತುತ ರಾಜಕೀಯ ಬೆಳವಣಿಗೆಗಳಿಂದಾಗಿ ಈ ನಿರ್ಧಾರಕ್ಕೆ ಬಂದಿರುವುದಾಗಿ ತಿಳಿಸಿದ್ದಾರೆ.
ಶಾಸಕರ ಈ ಸರಣಿ ಪಕ್ಷಾಂತರದಿಂದಾಗಿ 60 ಸದಸ್ಯ ಬಲದ ಮೆಘಾಲಯ ವಿಧಾನಸಭೆಯಲ್ಲಿ ಎನ್ಪಿಪಿ ಬಲ 36ಕ್ಕೆ ಏರಿಕೆಯಾಗಿದ್ದರೆ, ಬಿಜೆಪಿ ಬಲ 10ಕ್ಕೆ ಏರಿಕೆಯಾಗಿ ಎರಡನೇ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಲಿಂಗ್ಡೋ ಅವರ ನಿರ್ಗಮನ ಹಾಗೂ ಹೊಸ ಶಾಸಕರ ಸೇರ್ಪಡೆಯ ಬೆನ್ನಲ್ಲೇ ಮುಖ್ಯಮಂತ್ರಿ ಕೊನ್ರಾಡ್ ಸಾಂಗ್ಮಾ ಅವರು ಶೀಘ್ರದಲ್ಲೇ ಸಂಪುಟ ಪುನಾರಚನೆ ಮಾಡುವ ಸಾಧ್ಯತೆಯಿದೆ.